ಶುಕ್ರವಾರ, ಮಾರ್ಚ್ 24, 2023
30 °C
ಜಿಲ್ಲೆಯಲ್ಲಿ ಎರಡು ಸಾವಿರ ಸಕ್ರಿಯ ಪ್ರಕರಣಗಳು

ಕೊಪ್ಪಳ | ಚರ್ಮಗಂಟು ರೋಗದಿಂದ 676 ಜಾನುವಾರುಗಳು ಸಾವು; 244ಕ್ಕೆ ಮಾತ್ರ ಪರಿಹಾರ

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ಕಾಣಿಸಿಕೊಂಡ ಚರ್ಮಗಂಟು ರೋಗದಿಂದಾಗಿ (ಲಂಪಿ ಸ್ಕಿನ್‌ ಡಿಸೀಜ್‌) ಇದುವರೆಗೆ 676 ಜಾನುವಾರುಗಳು ಮೃತಪಟ್ಟಿದ್ದು, 244ಕ್ಕೆ ಮಾತ್ರ ಸರ್ಕಾರ ಪರಿಹಾರ ನೀಡಿದೆ.

ಸೆಪ್ಟೆಂಬರ್‌ 21ರಂದು ಜಿಲ್ಲೆಯಲ್ಲಿ ಚರ್ಮಗಂಟು ರೋಗದ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದುವರೆಗೆ ಒಟ್ಟು 20,200 ಜಾನುವಾರುಗಳಿಗೆ ಸೋಂಕು ಅಂಟಿಕೊಂಡಿದೆ. ಇದರಲ್ಲಿ 18 ಸಾವಿರ ಪ್ರಾಣಿಗಳು ಚೇತರಿಸಿಕೊಂಡಿವೆ. ಎರಡು ಸಾವಿರ ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸಾ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಈ ರೋಗ ವ್ಯಾಪಕವಾಗಿ ಹರಡಿ ಜಾನುವಾರುಗಳು ನಿತ್ಯ ಮೃತಪಡಲು ಆರಂಭವಾದಾಗ ರಾಜ್ಯ ಸರ್ಕಾರ ಕರು ಮೃತಪಟ್ಟರೆ ₹5,000, ಹಸುಗಳು ₹20 ಸಾವಿರ, ಎತ್ತುಗಳಿಗೆ ₹30 ಸಾವಿರ ಪರಿಹಾರ ನಿಗದಿ ಮಾಡಿದೆ.

ಜಿಲ್ಲೆಗೆ ಪರಿಹಾರದ ರೂಪದಲ್ಲಿ ₹50.35 ಲಕ್ಷ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಮೂರು ಲಕ್ಷ ಜಾನುವಾರುಗಳು ಇದ್ದು ಇದರಲ್ಲಿ 2.16 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಮೊದಲು ಆ ಜಾಗದಲ್ಲಿ ಲಸಿಕೆ ಹಾಕಿರಲಿಲ್ಲ. ಈಗ ಅಂಥ ಜಾಗಗಳಿದ್ದ ಜಾನುವಾರುಗಳಿಗೆ ಲಸಿಕೆ ಹಾಕುವ ಪ್ರಕ್ರಿಯೆ ಶುರುವಾಗಿದೆ. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಜಾನುವಾರ ಸಂತೆ ಮತ್ತು ಸಾಗಾಣಿಕೆ ನಿಷೇಧ ಮಾಡಲಾಗಿದೆ. 

ಜಾನುವಾರುಗಳಲ್ಲಿ ಅತಿಯಾದ ಜ್ಷರ, ಕಣ್ಣುಗಳಿಂದ ನೀರು ಸೋರುವುದು, ನಿಶ್ಯಕ್ತಿ, ಕಾಲುಗಳಲ್ಲಿ ಬಾವು, ಕುಂಟುವಿಕೆ, ಜಾನುವಾರುಗಳ ಚರ್ಮದ ಮೇಲೆ 2ರಿಂದ 5 ಸೆಂ.ಮೀ.ನಷ್ಟು ಅಗಲವಿರುವ ಗಂಟುಗಳು ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುವುದು ಚರ್ಮಗಂಟು ರೋಗದ ಪ್ರಮುಖ ಲಕ್ಷಣಗಳಾಗಿವೆ.

ಆತಂಕ ಮೂಡಿಸಿದ ಚೇತರಿಸಿಕೊಂಡ ಬಳಿಕದ ಸಾವು: ಚರ್ಮಗಂಟು ರೋಗದಿಂದ ಬಳಲಿದ್ದ ಜಾನುವಾರುಗಳು ಚೇತರಿಸಿಕೊಂಡ ಬಳಿಕ ಮೃತಪಡುತ್ತಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ಕೆಲ ರಾಸುಗಳು ಏಕಾಏಕಿ ಮೃತಪಟ್ಟಿದ್ದವು. ಇದರಿಂದ ಆಕ್ರೋಶಗೊಂಡಿದ್ದ ಅವುಗಳ ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಎದುರು ತಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಪಶು ವೈದ್ಯರೊಬ್ಬರು ‘ಸೋಂಕಿನಿಂದ ಮೃತಪಟ್ಟ ಜಾನುವಾರುಗಳನ್ನು ವೈಜ್ಞಾನಿಕವಾಗಿಯೇ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಈ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಸಾಯುತ್ತಿರುವುದು ಆತಂಕ ಮೂಡಿಸಿದೆ. ಆದರೆ, ಪ್ರತಿವರ್ಷ ಶೇ. 1ರಿಂದ 5ರ ತನಕ ಮರಣ ಪ್ರಮಾಣ ಇದ್ದೇ ಇರುತ್ತದೆ. ವಯಸ್ಸು, ಅನಾರೋಗ್ಯ ಮತ್ತು ಹವಾಮಾನದ ವೈಪರೀತ್ಯ ಇದಕ್ಕೆ ಕಾರಣವಿರಬಹುದು. ವಾರ್ಷಿಕ ಸಹಜ ಸಾವಿನ ಪ್ರಮಾಣ ಸಾಮಾನ್ಯದಷ್ಟೇ ಇದೆ’ ಎಂದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಎಚ್. ನಾಗರಾಜ ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಈ ರೋಗ ಸಾಂಕ್ರಾಮಿಕವಾಗಿರುವ ಕಾರಣ ಸೋಂಕು ತಗುಲಿದ ಜಾನುವಾರು ಆರೋಗ್ಯವಂತ ಜಾನುವಾರುವನ್ನು ಸ್ಪರ್ಶಿಸಿದರೂ ಸೋಂಕು ಹರಡುತ್ತಿದೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ’ ಎಂದರು.

*

ಜಿಲ್ಲೆಯಲ್ಲಿ ಮೃತಪಟ್ಟ ಎಲ್ಲಾ ಜಾನುವಾರುಗಳಿಗೆ ಪರಿಹಾರ ನೀಡುವಂತೆ ಕೋರಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ಅವುಗಳ ಮಾಲೀಕರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ.
–ಎಚ್. ನಾಗರಾಜ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು