ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗವಿಸಿದ್ಧೇಶ್ವರ ಜಾತ್ರೆ; ಮಹಾದಾಸೋಹ ವ್ಯವಸ್ಥೆಗೆ ಅಗತ್ಯ ಸಿದ್ಧತೆ

ತರಹೇವಾರಿ ಪ್ರಸಾದಕ್ಕೆ ತಯಾರಿ, ಮಠಕ್ಕೆ ಬರುತ್ತಿರುವ ಧಾನ್ಯಗಳು
Published 4 ಜನವರಿ 2024, 15:55 IST
Last Updated 4 ಜನವರಿ 2024, 15:55 IST
ಅಕ್ಷರ ಗಾತ್ರ

ಕೊಪ್ಪಳ: ಇದೇ ತಿಂಗಳು 27ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮಹಾದಾಸೋಹ ಕಲ್ಪಿಸಲು ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿದೆ.

ದಕ್ಷಿಣ ಭಾತರದ ಕುಂಭಮೇಳ ಎಂದು ಪ್ರಸಿದ್ಧಿ ಪಡೆದಿರುವ ಇಲ್ಲಿನ ಅಜ್ಜನ ಜಾತ್ರೆಗೆ ದಿನಗಣನೆ ಆರಂಭವಾಗಿವೆ. ಆರು ಎಕರೆ ಪ್ರದೇಶದಲ್ಲಿ ಮಹಾದಾಸೋಹ ಪ್ರದೇಶ ವಿಸ್ತಾರ ಮಾಡಲಾಗಿದ್ದು ಏಕಕಾಲಕ್ಕೆ ಅಂದಾಜು ಐದರಿಂದ ಆರು ಸಾವಿರ ಭಕ್ತರು ಪ್ರಸಾದ ಸೇವಿಸಲು ಅವಕಾಶವಿದೆ.

ಜನದಟ್ಟಣೆಯಾಗದಂತೆ ತಡೆಯಲು ಪ್ರತ್ಯೇಕ ಮಹಾದ್ವಾರ, ವಿಶಾಲವಾದ ಮಾರ್ಗ ದಾರಿ ವ್ಯವಸ್ಥೆ ಮಾಡಲಾಗಿದೆ. ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಜ. 21ರಿಂದ ಫೆ. 9ರ ಅವರಾತ್ರಿ ಅಮಾವಾಸ್ಯೆ ತನಕ ಲಕ್ಷಾಂತರ ಭಕ್ತಾದಿಗಳಿಗೆ ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆಯಿದೆ.

ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ ಹಾಗೂ ಪ್ರಸಾದ ಸ್ವೀಕರಿಸಲು 76 ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. 40 ಕೌಂಟರ್‌ಗಳು ಅನ್ನ ಹಾಗೂ ಸಾರು, 36 ಕೌಂಟರ್‌ಗಳು ಸಿಹಿ ಪದಾರ್ಥ ವಿತರಣೆಗೆ ಇರಲಿವೆ. ಲಕ್ಷಾಂತರ ಜೋಳದ ರೊಟ್ಟಿಗಳನ್ನು ಒಂದೆಡೆ ಸಂಗ್ರಹಿಸಲು ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಆರಂಭವಾಗಿದೆ. ಸಿಹಿ ಪದಾರ್ಥ ಮಾದಲಿ ಒಂದೆಡೆ ಇರಿಸಿಲು ಆರು ಕಟ್ಟೆಗಳನ್ನು ನಿರ್ಮಿಸಲಾಗಿದೆ.

ಮಹಾದಾಸೋಹಕ್ಕೆ ಬರಲು ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಪ್ರಸಾದ ಕೌಂಟರ್‌ಗಳನ್ನು ಮಾಡಲಾಗಿದೆ.  ರೊಟ್ಟಿ, ಪಲ್ಯ, ಸಿಹಿ ಪದಾರ್ಥ, ಅನ್ನ, ಸಾಂಬರ್, ಕಡ್ಲಿಚಟ್ನಿ, ಶೇಂಗಾ ಚಟ್ನಿ, ಗುರಳ್ಳ ಚಟ್ನಿ, ಅಗಸಿ ಪುಡಿ ಚಟ್ನಿ ಉಪ್ಪಿನಕಾಯಿ ಭಕ್ತರಿಗೆ ನೀಡಲಾಗುತ್ತದೆ ಎಂದು ಗವಿಮಠ ಸಿಬ್ಬಂದಿ ತಿಳಿಸಿದ್ದಾರೆ.  

ಗವಿಮಠದ ಜಾತ್ರೆಯ ಕುರಿತು ಹೆಚ್ಚಿನ ಮಾಹಿತಿಗಾಗಿ 9341360548, 9448120610, 9845429944 ಸಂಪರ್ಕಿಸಬಹುದು.

ಗವಿಮಠದ ಆವರಣದಲ್ಲಿ ನಡೆದಿರುವ ಸಿದ್ಧತಾ ಕಾರ್ಯ
ಗವಿಮಠದ ಆವರಣದಲ್ಲಿ ನಡೆದಿರುವ ಸಿದ್ಧತಾ ಕಾರ್ಯ
ಬಹುದೊಡ್ಡ ಪ್ರಮಾಣದಲ್ಲಿ ಜಾತ್ರೆ ನಡೆಯುವುದರಿಂದ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಯಶೋಧಾ ವಂಟಗೋಡಿ ಎಸ್‌ಪಿ ಕೊಪ್ಪಳ
ತಾತ್ಕಾಲಿಕವಾಗಿ ಜಾತ್ರಾ ಆವರಣದಲ್ಲಿ ನಿರ್ಮಿಸಿದ ಶೌಚಾಲಯಗಳ ಸ್ವಚ್ಛತೆಗೆ ಯಂತ್ರದ ಸೌಲಭ್ಯ ಕಲ್ಪಿಸಲಾಗುವುದು. ಕಸ ವಿಲೇವಾರಿಗೆ ಅಗತ್ಯ ಕ್ರಮ ವಹಿಸಲಾಗುವುದು.
ಗಣಪತಿ ಪಾಟೀಲ ಪೌರಾಯುಕ್ತರು ಕೊಪ್ಪಳ ನಗರಸಭೆ

ಜಿಲ್ಲೆಯಾದ್ಯಂತ ಜಾಗೃತಿ ನಡಿಗೆಗೆ ಸೂಚನೆ:

‘ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕು’ ವಿಷಯವಾಗಿ ಭಾಷಣ ಸ್ಪರ್ಧೆಯನ್ನು ಜ. 10ರಂದು ಜಿಲ್ಲೆಯ ಎಲ್ಲ ಸರ್ಕಾರಿ ಅನುದಾನಿತ ಖಾಸಗಿ ಪ್ರೌಢಶಾಲೆ ಪದವಿ ಪೂರ್ವ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಸೂಚಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಜ. 13ರಂದು ಬೆಳಿಗ್ಗೆ 10.30ಕ್ಕೆ ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಕಳುಹಿಸಬೇಕು. ಈ ಕುರಿತಂತೆ ಡಿಡಿಪಿಐ ಡಿಡಿಪಿಯು ಕೊಪ್ಪಳ ವಿವಿ ಅಗತ್ಯ ಕ್ರಮ ಹಾಗೂ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದರು. ‘ಕಾಯಕ ದೇವೋಭವ ಜಾಗೃತಿ ಅಭಿಯಾನ‘ ನಡಿಗೆಯ ಜಾಥಾ ಮೂಲಕ ಜಿಲ್ಲೆಯ ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಅನುಷ್ಠಾನ ಮಾಡಬೇಕು. ಸರ್ಕಾರಿ ಅನುದಾನಿತ ಖಾಸಗಿ ಶಾಲಾ ಕಾಲೇಜುಗಳು ಸ್ವ-ಸಹಾಯ ಸಂಘಗಳು ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ನಡಿಗೆ ಹಮ್ಮಿಕೊಳ್ಳಬೇಕು ಎಂದಿದ್ದಾರೆ.

ಅಗತ್ಯ ಸಿದ್ಧತೆಗೆ ಶಾಸಕ ಹಿಟ್ನಾಳ ಸೂಚನೆ:

ಕೊಪ್ಪಳ ಅಜ್ಜನ ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘ಜ. 13ರಿಂದಲೇ ಮಠಕ್ಕೆ ಬರುವವರ ಸಂಖ್ಯೆ ಹೆಚ್ಚಾಗಲಿದೆ. ರಥೋತ್ಸವ ದಿನದಿಂದ ಬಹಳಷ್ಟು ಸಂಖ್ಯೆಯಲ್ಲಿ ಭಕ್ತರು ಮಠದ ಆವರಣದಲ್ಲಿಯೇ ವಾಸ್ತವ್ಯ ಮಾಡುತ್ತಾರೆ. ಶಕ್ತಿ ಯೋಜನೆಯೂ ಇರುವುದರಿಂದ ಬರುವ ಭಕ್ತರ ಸಂಖ್ಯೆ ಹೆಚ್ಚಾಗಲಿದೆ’ ಎಂದರು. ‘ಮಠದ ಆವರಣದ ನಾಲ್ಕೂ ದಿಕ್ಕಿನಲ್ಲಿ ಅಗ್ನಿಶಾಮಕ ವಾಹನಗಳು ಇರಬೇಕು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸಂಚರಿಸಲು ಅನುಕೂಲವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ಇಲಾಖೆ ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ನಿರ್ವಹಣೆ ಮಾಡಬೇಕು. ಜ. 10ರಿಂದ ಒಂದು ತಿಂಗಳು ಆಯಾ ಇಲಾಖೆಗಳಿಗೆ ವಹಿಸಿದ ಎಲ್ಲಾ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯಬೇಕು’ ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ನಲಿನ್‌ ಅತುಲ್‌ ‘ನಗರಸಭೆಯ ಅಧಿಕಾರಿಗಳು ಸ್ವಚ್ಛತೆಗೆ ಕುಡಿಯುವ ನೀರಿನ ಸೌಕರ್ಯಕ್ಕೆ ಮತ್ತು ವಾಹನ ಸೌಲಭ್ಯಕ್ಕೆ ವಿಶೇಷ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು. ‘ಮಠಕ್ಕೆ ಸಂಪರ್ಕವಿರುವ ಎಲ್ಲಾ ರಸ್ತೆಗಳ ರಿಪೇರಿ ಮತ್ತು ಪ್ರತಿ ದಿನ ಕಸ ತೆಗೆಯುವ ವ್ಯವಸ್ಥೆ ಮಾಡಬೇಕು. ಅಗತ್ಯ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕು. ಯಾತ್ರಾರ್ಥಿಗಳಿಗೆ ನೀಡುವ ಕಾಲೇಜು ಶಾಲೆ ಯಾತ್ರಿ ನಿವಾಸ ವೃದ್ಧಾಶ್ರಮ ಹಾಗೂ ಶ್ರೀಮಠದ ಆವರಣದ ವಸತಿ ಸ್ಥಳಗಳಲ್ಲಿ ಶುಚಿತ್ವ ಕಾಪಾಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಜಿಲ್ಲಾ ಪೊಲೀಸ್ ಉಪಧೀಕ್ಷಕ ಸಿದ್ಧಲಿಂಗಪ್ಪಗೌಡ ಪಾಟೀಲ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯರಾಣಿ ಕೆ.ವಿ. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT