ಮಣ್ಣೆತ್ತುಗಳ ವ್ಯಾಪಾರ ಬಲು ಜೋರು

ಯಲಬುರ್ಗಾ: ಮಣ್ಣೆತ್ತಿನ ಅಮವಾಸ್ಯೆಯು ಗ್ರಾಮೀಣ ಜನರ ಸಂಭ್ರಮದ ಹಬ್ಬ. ಮಣ್ಣಿನ ಎತ್ತುಗಳನ್ನು ಪೂಜಿಸುವ ಮೂಲಕ ರೈತನ ಸಂಗಾತಿ ಎತ್ತುಗಳಿಗೆ ಗೌರವಿಸುವ ಸುದಿನ.
ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಸಗಡಗರ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದ ಪ್ರಯುಕ್ತ ಪ್ರತಿಯೊಂದು ಮನೆಯಲ್ಲಿ ಮಣ್ಣಿನಿಂತ ತಯಾರಿಸಿದ ಎತ್ತುಗಳನ್ನು ತಂದು ಅವುಗಳಿಗೆ ಪೂಜಿಸಿ ನಂತರ ಅವುಗಳನ್ನು ಬಾವಿ ಅಥವಾ ಹಳ್ಳದಲ್ಲಿ ವಿಸರ್ಜನೆ ಮಾಡುತ್ತಾರೆ.
ಹಬ್ಬದ ಅಂಗವಾಗಿಯೇ ವಿವಿಧ ಓಣಿಯ ಮಕ್ಕಳು ಕರಗಲ್ಲ ಪೂಜೆ ಮಾಡಿ ನಂತರ ಕರಿ ಹರಿಯುತ್ತಾರೆ. ಇದರ ಅಂಗವಾಗಿ ಮಕ್ಕಳು ಮನೆ ಮನೆಗೆ ಹೋಗಿ ಧವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಸಂಗ್ರಹಿಸಿದ ಧಾನ್ಯಗಳನ್ನು ಅಡುಗೆ ಮಾಡಿ ಸಂಭ್ರಮಿಸುತ್ತಾರೆ.
ಭರ್ಜರಿ ವ್ಯಾಪಾರ: ಮಣ್ಣೆತ್ತಿನ ಪೂಜೆ ಪ್ರತಿಯೊಂದು ಮನೆಯಲ್ಲಿ ನಡೆಯುವುದರಿಂದ ಈ ಸಂದರ್ಭದಲ್ಲಿ ಮಣ್ಣಿನ ಎತ್ತುಗಳ ಖರೀದಿ ಬಲು ಜೋರಾಗಿಯೇ ಇರುತ್ತದೆ. ಎತ್ತುಗಳ ಗಾತ್ರ ಮತ್ತು ವಿನ್ಯಾಸದ ಆಧಾರದ ಮೇಲೆ ಅವುಗಳ ದರ ನಿಗದಿಯಾಗಿರುತ್ತವೆ.
ಸಾಮಾನ್ಯವಾಗಿ ಕನಿಷ್ಠ ₹25 ರೂಪಾಯಿಗಳಿಂದ ಅವುಗಳ ಬೆಲೆ ನಿಗದಿಯಾಗಿರುತ್ತದೆ. ಪಟ್ಟಣದಲ್ಲಿ ವಿರೂಪಾಕ್ಷಪ್ಪ ಬಡಿಗೇರ ಹಾಗೂ ಕೆಂಚಮ್ಮ ಕುಂಬಾರ ಮನೆಯವರು ಸುಮಾರು ವರ್ಷಗಳಿಂದಲೂ ಮಣ್ಣೆತ್ತುಗಳ ಮಾರಾಟದಲ್ಲಿ ನಿರತರಾಗಿದ್ದಾರೆ. ಅಮವಾಸ್ಯೆಯ ಮುನ್ನ ಒಂದು ವಾರ ಮೊದಲು ಎತ್ತುಗಳ ನಿರ್ಮಾಣಕ್ಕೆ ಮುಂದಾಗುವ ಈ ಕುಟುಂಬಗಳ ಮನೆ ಸದಸ್ಯರು ಭಾಗವಹಿಸುತ್ತಾರೆ. ಸುಮಾರು ಸಾವಿರ ಜೋಡಿಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಉತ್ತಮ ಆದಾಯ ಪಡೆದುಕೊಳ್ಳುತ್ತಾರೆ.
‘ಸುಮಾರು ವರ್ಷಗಳಿಂದಲೂ ಮಣ್ಣೆತ್ತುಗಳ ಮಾರಾಟದಲ್ಲಿ ನಿರತರಾಗಿರುವುದರಿಂದ ಇಂದಿಗೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಹೆಚ್ಚಿನ ಆದಾಯ ಬರದಿದ್ದರೂ ಖರ್ಚಿಗೂ ಆದಾಯಕ್ಕೆ ಸರಿಹೋಗುತ್ತದೆ. ಕಾಯಂ ಗ್ರಾಹಕರು ಇರುವುದರಿಂದ ಪ್ರತಿವರ್ಷ ಮನೆಗೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಬಡಿಗೇರ ಕುಟುಂಬದ ಪ್ರಶಾಂತ ತಿಳಿಸಿದರು.
ಮಣ್ಣೆತ್ತಿನ ಅಮವಾಸ್ಯೆ; ಭರದ ಸಿದ್ಧತೆ
ರೈತರ ಮೊದಲ ಕೃಷಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಣ್ಣೆತ್ತಿನ ಅಮವಾಸೆ ಜುಲೈ 9, 10ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಹಬ್ಬದ ಸಿದ್ಧತೆ ಭರದಿಂದ ನಡೆದಿದೆ.
ರೈತರು ತಮ್ಮ ಆಪ್ತಮಿತ್ರ ಎತ್ತಿನ ಜೋಡಿಗೆ ವಿಶೇಷ ಪೂಜೆ ಮಾಡುವುದರ ಮೂಲಕ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ. ರೈತರ ಪಾಲಿಗೆ ಮಣ್ಣೆತ್ತಿನ ಅಮಾವಾಸೆ ಎಂದರೆ ಎಲ್ಲಿಲ್ಲದ ಹಿಗ್ಗು. ಚಿಕ್ಕಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಪಾಲ್ಗೊಂಡು ಸಂಭ್ರಮದಿಂದ ಆಚರಿಸುತ್ತಾರೆ.
ಗಂಗಾವತಿ, ಕುಕನೂರು, ಕನಕಗಿರಿ, ಕುಷ್ಟಗಿ, ಹನುಮಸಾಗರ, ಮುನಿರಾಬಾದ್, ಕಾರಟಗಿ, ತಾವರಗೇರಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ರೈತರು ಹಬ್ಬಕ್ಕೆ ಸಿದ್ಧಗೊಳ್ಳುತ್ತಿರುವು ದೃಶ್ಯಗಳು ಗುರುವಾರ ಕಂಡುಬಂದವು. ಮುಂಗಾರಿನಲ್ಲಿ ಬರುವ ಈ ಹಬ್ಬದಲ್ಲಿ ರೈತರು ಮಳೆ ಬೆಳೆಯು ಉತ್ತಮವಾಗಿ ಆಗಲಿ, ಫಸಲು ಬರಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.