ಬುಧವಾರ, ಡಿಸೆಂಬರ್ 7, 2022
22 °C

ಮುಠ್ಠಾಳ ಪದ ಬಳಕೆ; ಯಾತ್ರೆಯ ಬಳಿಕವೂ ಮುಂದುವರಿದ ಟೀಕಾಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಎರಡು ದಿನಗಳ ಹಿಂದೆ ಕಾರಟಗಿಯಲ್ಲಿ ನಡೆದ ಜನಪ್ರತಿಜ್ಞಾ ಯಾತ್ರೆ ವೇಳೆ ಖಾಸಗಿ ವಾಹನಗಳನ್ನು ಸಿದ್ದಾಪುರ ಸರ್ಕಾರಿ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿ ಭಾಷಣ ಮಾಡಿದ ಕಾರಣಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ನ.17ರಂದು ಸಿದ್ದಾಪುರದಿಂದ ಕಾರಟಗಿ ತನಕ ಪಾದಯಾತ್ರೆ ನಡೆಸಿದ್ದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆದಿತ್ತು. ಆದ್ದರಿಂದ ಗಂಗಾವತಿ ವಿಭಾಗೀಯ ವ್ಯವಸ್ಥಾಪಕ ಸಂಜೀವ ಮೂರ್ತಿ ಅವರು ‘ಅನುಮತಿ ಪಡೆಯದೆ ಬಸ್‌ ನಿಲ್ದಾಣದ ಆವರಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಭೆ ನಡೆಸಿದ್ದಾರೆ’ ಎಂದು ದೂರು ನೀಡಿದ್ದಾರೆ.

ದೂರು ದಾಖಲಾಗಿರುವ ವಿಷಯ ವನ್ನು ಗಂಗಾವತಿ ಪೊಲೀಸ್ ಉಪ ವಿಭಾಗಾಧಿಕಾರಿ ರುದ್ರೇಶ ಉಜ್ಜಿನ ಕೊಪ್ಪ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಟೀಕೆ: ಯಾತ್ರೆ ಆರಂಭದ ಮುನ್ನಾದಿನ ಶಾಸಕ ಬಸವರಾಜ ದಢೇಸೂಗೂರು ಅವರು ಬಳಸಿದ್ದ ‘ಮುಠ್ಠಾಳ’ ಪದ ವ್ಯಾಪಕ ಟೀಕೆ ಹಾಗೂ ಪ್ರತಿಟೀಕೆಗೆ ಕಾರಣವಾಗಿದೆ.

‘ಆಡಿಯೊ ಪ್ರಕರಣದ ಬಗ್ಗೆ ಪರಸಪ್ಪ ಬಹಿರಂಗವಾಗಿಯೇ ಉತ್ತರ ಕೊಟ್ಟಿದ್ದಾರೆ. ಈ ಕುರಿತು ಮುಠ್ಠಾಳನಿಗೆ ಉತ್ತರ ಕೊಡುವುದು ಬೇಕಿಲ್ಲ’ ಎಂದು ದಢೇಸೂಗೂರು ಟೀಕಿಸಿದ್ದರು.

ಇದಕ್ಕೆ ಯಾತ್ರೆಯ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದ ತಂಗಡಗಿ, ‘ಮುಠ್ಠಾಳ ಎಂದ ಮುಠ್ಠಾಳನಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಶಾಸಕರಿಗಿಂತಲೂ ನಾನು ಹಿರಿಯ. ಹಿರಿಯರಿಗೆ ಹೇಗೆ ಮಾತನಾಡಬೇಕು ಎನ್ನುವುದು ಕೂಡ ಗೊತ್ತಿಲ್ಲದವರಿಗೆ ಬುದ್ಧಿ ಕಲಿಸಲು ಕ್ಷೇತ್ರದ ಜನ ನಿರ್ಧರಿಸಿದ್ದಾರೆ’ ಎಂದು ಹರಿಹಾಯ್ದಿದ್ದರು.

ಈ ಹೇಳಿಕೆಗೆ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬಸವರಾಜ ದಢೇಸೂಗೂರು, ‘ಶಿವರಾಜ್‌ ತಂಗಡಗಿ ಎರಡು ಬಾರಿ ಸಚಿವರಾಗಿದ್ದರು. ವಯಸ್ಸಿನಲ್ಲಿ ನನಗಿಂತ ಹಿರಿಯ ಇರಬಹುದು. ಆದರೆ; ಕಾನೂನು ಜ್ಞಾನ ಅವರಿಗಿಲ್ಲ. ಯಾತ್ರೆಯ ಹೆಸರಲ್ಲಿ ನನ್ನ ತೇಜೋವಧೆ ಮಾಡುವ ರೀತಿಯಲ್ಲಿ ಬ್ಯಾನರ್‌ ಕಟ್ಟಿಸಿದ್ದರೂ ನಮ್ಮವರು ಯಾರೂ ಬ್ಯಾನರ್‌ ಮುಟ್ಟಿಲ್ಲ. ಹರಿಯುವುದಂತೂ ದೂರದ ಮಾತು. ಎಲ್ಲವೂ ಗೊತ್ತಿದ್ದೂ ನ್ಯಾಯಾಲಯದ ಆದೇಶ ಉಲ್ಲಂಘಿಸಿದವರನ್ನು ಮುಠ್ಠಾಳ ಎನ್ನದೇ ಇನ್ನೇನು ಆನ್ನಬೇಕು’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.