ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಯೋಜನೆ: ಬಿಸಿಲ ನಾಡಲ್ಲೊಂದು ‘ಹಸಿರು ಕ್ಷೇತ್ರ’

ಸಸಿಗಳ ಪೋಷಣೆ
Last Updated 4 ಜೂನ್ 2021, 11:15 IST
ಅಕ್ಷರ ಗಾತ್ರ

ಗಂಗಾವತಿ: ಬಿಸಿಲ ನಾಡಿನಲ್ಲಿ ನರೇಗಾ ಯೋಜನೆಯಡಿ ಹಸಿರು ಕ್ರಾಂತಿ ಮಾಡಲಾಗುತ್ತಿದೆ. 1 ಲಕ್ಷಕ್ಕೂ ಅಧಿಕ ಸಸಿಗಳನ್ನು ನಿರ್ವಹಣೆ ಮಾಡುವ ಮೂಲಕ ಹೊಸದೊಂದು ಅರಣ್ಯ ಸೃಷ್ಟಿಗೆ ನಾಂದಿ ಹಾಡಲಾಗಿದೆ.

ತಾಲ್ಲೂಕಿನ ಆಗೋಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲಾಪುರ ಗ್ರಾಮದ ಕೆರೆ ಪಕ್ಕದಲ್ಲಿರುವ ಸಾಮಾಜಿಕ ಅರಣ್ಯ ವಲಯದಲ್ಲಿ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯವರು ಒಂದು ಲಕ್ಷಕ್ಕೂ ಅಧಿಕ ಸಸಿಗಳ ಪೋಷಣೆ ಮಾಡಿದ್ದಾರೆ. ಆ ಸಸಿಗಳು ಇದೀಗ ಸಮೃದ್ಧವಾಗಿ ಬೆಳೆದಿದ್ದು, ರೈತರಿಗೆ ಹಾಗೂ ಸರ್ಕಾರದ ಬಳಕೆಗೆ ಸಿದ್ದಗೊಂಡಿವೆ.

ಕಳೆದ ವರ್ಷ ಮೇ ತಿಂಗಳಲ್ಲಿ ಆಗೋಲಿ ಗ್ರಾ.ಪಂ ಯಿಂದ ನರೇಗಾ ಯೋಜನೆಯಡಿ 15.91 ಲಕ್ಷ ಹಾಗೂ 3.47 ಲಕ್ಷದ ಎರಡು ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಒಂದು ವರ್ಷದಲ್ಲಿ ಸುಮಾರು 1 ಲಕ್ಷದ 15 ಸಾವಿರ ಸಸಿಗಳನ್ನು ಬೆಳೆಸುವುದರ ಜತೆಗೆ ಪೋಷಣೆ ಮಾಡಲಾಗಿದೆ.

ಕೆರೆಗೆ ಹೊಂದಿಕೊಂಡ ಜಾಗದಲ್ಲಿ ಸಸ್ಯಕ್ಷೇತ್ರ: ವಿಠಲಾಪುರ ಕೆರೆಯ ಪಕ್ಕದಲ್ಲೇ ಸುಮಾರು 4.10 ಎಕರೆ ವಿಸ್ತೀರ್ಣದಲ್ಲಿ ಈ ಸಸ್ಯ ಕ್ಷೇತ್ರ ಇದೆ. 1997-98 ನೇ ಸಾಲಿನಿಂದ ಸಾಮಾಜಿಕ ಅರಣ್ಯ ಇಲಾಖೆಯವರು ಇದರ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಸಸ್ಯ ಕ್ಷೇತ್ರದಲ್ಲಿ ಒಂದು ಕೊಳವೆಬಾವಿ ಇದ್ದು, 2018-19 ರಲ್ಲಿ ಎಸ್‌.ಎಂ.ಎ.ಎಫ್‌ ಯೋಜನೆಯಡಿ ಒಂದು ಲಕ್ಷ ಲೀಟರ್‌ ಸಾಮರ್ಥ್ಯದ ನೀರಿನ ಸಂಗ್ರಹ ತೊಟ್ಟಿ ನಿರ್ಮಾಣ ಮಾಡಲಾಗಿದೆ.

ನರ್ಸರಿಯಲ್ಲಿರುವ ಸಸ್ಯಗಳು : ಬೇವು, ನೇರಳೆ, ಅರಳಿ, ಬಸರಿ, ಬಂಗಾಳಿ, ಬದಾಮಿ, ತಪಸಿ, ಅತ್ತಿ, ಹಲಸು, ಪೆಲ್ಟೋಫಾರಂ, ಗೋಣಿ, ಚಳ್ಳೆ, ಹುಣಸೆ, ಆಲ, ಕರಿಬೇವು, ಪೇರಲ, ಶ್ರೀಗಂಧ, ಸಿಲ್ವರ್‌ ಓಕ್‌, ನಿಂಬೆ, ಸಾಗವಾನಿ, ಹೆಬ್ಬೇವು, ಬಿದಿರು, ನುಗ್ಗೆ, ಸಪ್ತಪದಿ, ಗುಲ್‌ ಮೊಹರ್‌, ಹೊಳೆಮತ್ತಿ, ಚರ್ರಿ, ಸೀಮಾರುಬಾ, ಅಶೋಕ, ಶಿವಲಿಂಗ, ಘಂಟೆಹೂ, ಬನ್ನಿ, ಗೇರು, ಹಿಪ್ಪೆ, ಸೀತಾಫಲ, ನೆಲ್ಲಿ ಸೇರಿದಂತೆ 33 ಕ್ಕೂ ಅಧಿಕ ಜಾತಿಯ ಸಸಿಗಳನ್ನು ಪೋಷಣೆ ಮಾಡಲಾಗಿದೆ.

ಎಕರೆಗೆ 40 ಸಸಿಗಳ ವಿತರಣೆ : ಸಸ್ಯ ಕ್ಷೇತ್ರದಲ್ಲಿರುವ ಸಸಿಗಳನ್ನು ಪಡೆದುಕೊಳ್ಳಲು ರೈತರು ತಮ್ಮ ಜಮೀನಿನ ಪಹಣಿ ನೀಡಿದರೆ ಸಾಕು, ಎಕರೆಗೆ 40 ರಂತೆ ಸಸಿಗಳನ್ನು ಪಡೆಯಲು ಅವಕಾಶ ಒದಗಿಸಲಾಗಿದೆ. ಈಗಾಗಲೇ ತಾಲ್ಲೂಕಿನ ವಿಠಲಾಪುರ, ನವಲಿ, ಚಿಕ್ಕಮಾದಿನಾಳ, ವಡ್ಡರಹಟ್ಟಿ ಸೇರಿದಂತೆ ಅನೇಕ ಗ್ರಾಮದ ರೈತರು ಸಸಿಗಳನ್ನು ಪಡೆದುಕೊಂಡು ಹೋಗಿದ್ದಾರೆ. ಜತೆಗೆ ಸಾಕಷ್ಟು ರೈತರು ಕೂಡ ಸಸ್ಯಕ್ಷೇತ್ರಕ್ಕೆ ಬಂದು ಬೇಡಿಕೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT