ಕೊಪ್ಪಳ: ‘ರಾಜ್ಯಪಾಲ ಥಾವರಚಂದ್ ಗೆಹಲೋತ್ ಕೇಂದ್ರ ಹಾಗೂ ಬಿಜೆಪಿ ನಾಯಕರು ಕುಣಿಸಿದಂತೆ ಕುಣಿಯುತ್ತಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಬ್ಲ್ಯಾಕ್ ಮೇಲ್ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದಾನೆ. ಇಂಥ ವ್ಯಕ್ತಿ ರಾಜ್ಯಪಾಲರಿಗೆ ಬೆಳಿಗ್ಗೆ 11:30ಕ್ಕೆ ದೂರು ನೀಡಿದರೆ ಸಂಜೆ 6 ಗಂಟೆಗೆ ರಾಜ್ಯಪಾಲರು ಸಿ.ಎಂ.ಗೆ ಷೋಕಾಸ್ ನೋಟಿಸ್ ನೀಡಿದ್ದಾರೆ. ಇದನ್ನು ಅವಲೋಕಿಸಿದರೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಹೇಳಿದಂತೆ ಕುಣಿಯುತ್ತಿರುವುದು ಗೊತ್ತಾಗುತ್ತಿದೆ’ ಎಂದರು.
‘ಮುಡಾದಲ್ಲಿ ಅವ್ಯವಹಾರವಾಗಿದೆ ವಾರವಾಗಿದೆ ಎಂಬ ವಿಚಾರ ಕೇಳಿ ಬಂದ ಕೂಡಲೇ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಮೂರ್ನಾಲ್ಕು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು. ಆ ಪ್ರಕರಣದ ತನಿಖೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಸಿಬಿಐ, ಇಡಿ ಅಂತಹ ಯಾವುದೇ ತನಿಖಾ ಸಂಸ್ಥೆಗೆ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ₹60.4 ಕೋಟಿ ಭ್ರಷ್ಟಾಚಾರ ನಡೆದಿತ್ತು. ಅದನ್ನು ಯಾವ ತನಿಖೆಗೆ ವಹಿಸಿದ್ದರು? ಯಾರನ್ನು ಬಂಧಿಸಿದ್ದಾರೆ? ಇನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ₹47 ಕೋಟಿ ಅವ್ಯವಹಾರ ನಡೆದಿದೆ. ಅಂದು ನಿಗಮದ ಅಧ್ಯಕ್ಷನಾಗಿದ್ದ ವೀರಯ್ಯನನ್ನು ನಾವು ಬಂಧಿಸಿದ್ದೇವೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ ಅವರು ಮೌನ ವಹಿಸಿದ್ದು ಯಾಕೆ’ ಎಂದು ಪ್ರಶ್ನಿಸಿದರು.
‘ಯಡಿಯೂರಪ್ಪ ಅವರ ಅವಧಿಯಲ್ಲಿ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ₹22.40 ಕೋಟಿ ಖಾಸಗಿ ವ್ಯಕ್ತಿಗೆ ಖಾತೆಗೆ ಜಮೆ ಮಾಡಲಾಗಿದೆ. ಈ ಹಗರಣಗಳ ಬಗ್ಗೆ ಮಾತನಾಡದ ಬಿಜೆಪಿ ನಾಯಕರು ಯಾವ ಮುಖ ಹೊತ್ತುಕೊಂಡು ಮೈಸೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೋ. ಬಿಜೆಪಿ ನಾಯಕರ ಬಣ್ಣವನ್ನು ಒಂದೊಂದಾಗಿ ಬಯಲು ಮಾಡುತ್ತೇವೆ’ ಎಂದು ವಾಗ್ದಾಳಿ ನಡೆಸಿದರು.
ರಾಯರಡ್ಡಿ ಕೊಪ್ಪಳ: ಸಿ.ಎಂ. ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಮುಡಾ ನಿವೇಶನ ಹಂಚಿಕೆ ಪ್ರಕರಣ ವಿಷಯದಲ್ಲಿ ಮುಖ್ಯಮಂತ್ರಿ ಅವರ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ ನಡೆಸುತ್ತಿದ್ದು ಇದಕ್ಕೆ ನಾವು ಬಗ್ಗುವುದಿಲ್ಲ ಎಂದರು. ‘ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಹಗರಣಗಳನ್ನು ಮರೆಮಾಚಲು ಸಿ.ಎಂ. ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈ ಎರಡೂ ಪಕ್ಷಗಳು ಜಾತಿ ಮುಂದಿಟ್ಟು ಹೋರಾಟ ಮಾಡುತ್ತಿವೆ. ಆದ್ದರಿಂದ ಸಿದ್ದರಾಮಯ್ಯ ಕೂಡ ಜಾತಿ ವಿಷಯವನ್ನು ಮುನ್ನಲೆಗೆ ತಂದರು ಎಂದರು. ರಾಜ್ಯ ಸರ್ಕಾರವನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಇದು ಸಾಧ್ಯವೂ ಆಗುವುದಿಲ್ಲ’ ಎಂದರು. ಸಂಸದ ರಾಜಶೇಖರ ಹಿಟ್ನಾಳ ಇದ್ದರು.
ಏನೇ ಆದರೂ ಸಿದ್ದರಾಮಯ್ಯ ಸಿ.ಎಂ.: ಹಿಟ್ನಾಳ
ಕೊಪ್ಪಳ: ‘ಸಿದ್ದರಾಮಯ್ಯ ಅವರ ಏಳಿಗೆ ಸಹಿಸದೇ ಬಿಜೆಪಿ ಹೊಟ್ಟೆಕಿಚ್ಚಿನಿಂದ ಪಾದಯಾತ್ರೆ ಮಾಡುತ್ತಿದೆ. ಇದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಯಾರು ಎನೇ ಕುತಂತ್ರ ಮಾಡಿದರೂ ಸಿದ್ದರಾಮಯ್ಯ ಸಿ.ಎಂ. ಆಗಿ ಮುಂದುವರಿಯಲಿದ್ದಾರೆ’ ಎಂದರು. ‘ಪಾದಯಾತ್ರೆ ಮಾಡುತ್ತಿರುವುದೇ ಅಪ್ರಸ್ತುತ ವಾಲ್ಮೀಕಿ ನಿಗಮದ ಹಗರಣದಲ್ಲಿ ತಪ್ಪು ಮಾಡಿದವರ ವಿರುದ್ಧ ನಮ್ಮ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ನಮ್ಮ ಸರ್ಕಾರದ ವಿರುದ್ದ ಮಾತನಾಡಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರಿಗೆ ಯಾವುದೇ ವಿಷಯವಿಲ್ಲ. ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿವೆ. ಜನರಿಗೆ ನಮ್ಮ ಅರ್ಕಾರದ ಮೇಲೆ ಒಲವು ಹೆಚ್ಚಾಗುತ್ತಿದೆ. ಇದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಯಾರು ಎಷ್ಟೇ ಪಾದಯಾತ್ರೆ ಮಾಡಿದರೂ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.