ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಪರಂಪರೆ ಉಳಿಸಲು ಮೋದಿ ಬರಬೇಕು: ಒಡೆಯರ್‌

Published 5 ಮೇ 2024, 16:15 IST
Last Updated 5 ಮೇ 2024, 16:15 IST
ಅಕ್ಷರ ಗಾತ್ರ

ಕೊಪ್ಪಳ: ‘ದೇಶದ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆ ಉಳಿಯಬೇಕಾದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು’ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೋದಿ ಅವರಿಂದಾಗಿಯೇ ಪರಂಪರೆಗೆ ಹೊಸ ಅರ್ಥ ಬಂದಿದೆ. ಅನೇಕ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ. ನನಗೂ ರಾಜಕಾರಣಕ್ಕೆ ಬರಬೇಕು ಎನ್ನುವ ಆಸೆಯಿತ್ತು, ಬಿಜೆಪಿಯೂ ಅವಕಾಶ ನೀಡಿತು. ಇದರಿಂದಾಗಿ ಸ್ಪರ್ಧೆ ಮಾಡಿದೆ.  ಮೈಸೂರು ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸವಿದೆ’ ಎಂದರು.

ಉಪಾಹಾರ: ಇದಕ್ಕೂ ಮೊದಲು ನಗರದ ಪತ್ರಿಕಾ ವಿತರಕ ಮಂಜುನಾಥ ಟಪಾಲ್ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರು.

ರಾಜವಂಶಸ್ಥರ ಸ್ವಾಗತಕ್ಕೆ 12ನೇ ವಾರ್ಡ್ ನಲ್ಲಿರುವ ಮಂಜುನಾಥ ಅವರ ಓಣಿಯ ರಸ್ತೆಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಯದುವೀರ ಬರುತ್ತಿದ್ದಂತೆ ಸ್ಥಳೀಯರು ಆರತಿ ಮಾಡಿ ಸ್ವಾಗತಿಸಿ ಹೂ ಮಳೆಗೆರೆದು ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ಮಂಜುನಾಥ ಮನೆಯಲ್ಲಿ ಇಡ್ಲಿ, ಸಿರಾ, ಮಂಡಾಳ ವಗ್ಗರಣೆ, ತರಹೇವಾರಿ ಹಣ್ಣುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಒಡೆಯರ್ ಒಂದು ಇಡ್ಲಿ ಮಾತ್ರ ಸವಿದರು.

ಇದಕ್ಕೂ ‌ಮೊದಲು ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ದೇಶ್ವರ ಸ್ಬಾಮೀಜಿ ಆಶೀರ್ವಾದ ಪಡೆದರು. ಅಲ್ಲಿ ಮಾಧ್ಯಮದವರ ಜೊತೆ ಮಾತನಾಡಿ ಗವಿಮಠದ ಪರಂಪರೆಯ ಬಗ್ಗೆ ಸಾಕಷ್ಟು ಕೇಳಿದ್ದೇನೆ, ಇದು ಅತ್ಯಂತ ಪರಮ ಕ್ಷೇತ್ರ. ಎಲ್ಲರ ಒಳಿತಿಗಾಗಿ ಗವಿಮಠದ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದರು. ಅಂಬೇಡ್ಕರ್ ಮೂರ್ತಿಗೂ ಮಾಲಾರ್ಪಣೆ ಮಾಡಿದರು. ಸರ್ಕಾರಿ ಶಾಲೆಗೆ ಭೂಮಿ ದಾನ ಕೊಟ್ಟ ಹುಚ್ಚಮ್ಮ ಚೌದ್ರಿ ಮನೆಗೆ ಭೇಟಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ, ಮಹಾಲಕ್ಷ್ಮಿ ಕಂದಾರಿ, ವಿಭಾಗ ಸಹ ಪ್ರಭಾರಿ ಚಂದ್ರಶೇಖರ ಹಲಗೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Cut-off box - ಬದುಕಿನ ಹೆಮ್ಮೆಯ ಕ್ಷಣ: ಟಪಾಲ್‌ ಮೈಸೂರು ರಾಜವಂಶಸ್ಥರು ನಮ್ಮ ಮನೆಗೆ ಬಂದು ಉಪಾಹಾರ ಸೇವಿಸಿದ್ದು ಬದುಕಿನ ಅತ್ಯಂತ ಹೆಮ್ಮೆಯ ಕ್ಷಣ ಎಂದು ಮಂಜುನಾಥ ಟಪಾಲ್‌ ಹರ್ಷ ಹಂಚಿಕೊಂಡರು. ‘ಯದುವೀರ ಅವರು ನಮ್ಮ ಮನೆಗೆ ಬರುತ್ತಾರೆ ಎನ್ನುವ ವಿಷಯ ಶನಿವಾರ ಸಂಜೆ ಗೊತ್ತಾಯಿತು. ಆಗಿನಿಂದಲೇ ನಮ್ಮ ಮನೆಯಲ್ಲಿ ಖುಷಿ ಮನೆ ಮಾಡಿತ್ತು. ಹಲವು ತಿನಿಸು ಹಾಗೂ ಹಣ್ಣುಗಳ ಉಪಾಹಾರ ಸಿದ್ಧಪಡಿಸಿದ್ದೆವು. ಇದೊಂದು ಬದುಕಿನ ಅಪೂರ್ವ ಕ್ಷಣ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT