ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮುಂಗಾರು ಬೆಳೆಗೆ ಮಂಗಗಳ ಕಾಟ

ಬೇಸತ್ತ ರೈತರಿಂದ ಅರಣ್ಯ ಇಲಾಖೆಗೆ ಮೊರೆ
Last Updated 2 ಜುಲೈ 2020, 19:39 IST
ಅಕ್ಷರ ಗಾತ್ರ

ಕೊಪ್ಪಳ: ಮುಂಗಾರು ಅನಾವೃಷ್ಟಿಯಿಂದ ಸಾಕಷ್ಟು ಸಂಕಷ್ಟದಲ್ಲಿರುವ ಜಿಲ್ಲೆಯ ರೈತರಿಗೆ ಮಂಗಗಳ ಕಾಟ ತಲೆನೋವಾಗಿ ಪರಿಣಮಿಸಿದೆ.

ಮುಂಗಾರು ಮಳೆ ಮುಗಿಯುತ್ತ ಬಂದರೂ ಸಹ ಜಿಲ್ಲೆಯಲ್ಲಿ ಈವರೆಗೆ ಉತ್ತಮ ಮಳೆಯಾಗಿಲ್ಲ. ಆಗಿರುವ ಅಲ್ಪ ಮಳೆಯಲ್ಲಿಯೇ ರೈತರು ಸಾಲ ಮಾಡಿ ಕೆಲ ಬೆಳೆಗಳನ್ನು ಬೆಳೆದುಕೊಂಡಿದ್ದಾರೆ. ಇನ್ನೂ ಕೆಲ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರೈತರಿಗೆ ಮಂಗಗಳ ಕಾಟ ಎದುರಾಗಿರುವುದು ರೈತರನನ್ನು ಚಿಂತೆಗೀಡುಮಾಡಿದೆ.

ಗುಂಪಾಗಿ ಹೊಲಗಳಿಗೆ ಲಗ್ಗೆ ಇಡುವ ಮಂಗಗಳು ಬೆಳೆದ ಬೆಳೆಗಳ ಚಿಗುರು ತಿನ್ನುತ್ತವೆ. ಇದರಿಂದ ಸಸಿ ಫಲ ನೀಡುವುದಕ್ಕೂ ಮುನ್ನವೇ ಬಾಡಿ ಹೋಗುತ್ತದೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗತ್ತದೆ. ಪ್ರಸ್ತುತ ತಾಲ್ಲೂಕಿನಲ್ಲಿ ರೈತರು ಹೆಸರು, ಮೆಕ್ಕೆಜೊಳ, ಸೂರ್ಯಕಾಂತಿ, ಕಡೆಲೆ ಇತ್ಯಾದಿ ಬೆಳೆಗಳನ್ನು ಬೆಳೆದಿದ್ದಾರೆ. ಮಳೆ ಕೊರತೆಯಿಂದಾಗಿ ಬೆಳೆ ಚೆನ್ನಾಗಿ ಬಂದಿಲ್ಲ. ಆದರೂ ಸಹ ಆಹಾರ ಅರಸಿ ಬರುವ ಮಂಗಗಳು ಬೆಳೆದ ಅಲ್ಪಸ್ವಲ್ಪ ಬೆಳೆಯನ್ನು ತಿಂದುಹಾಕುತ್ತಿವೆ.

ಮಳೆಯನ್ನೇ ನಂಬಿ ಹೊಲದಲ್ಲಿ ಹೆಸರು ಬೆಳೆ ಹಾಕಿದ್ದೇನೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಬೆಳವಣಿಗೆ ಆಗಿಲ್ಲ. ರಾಸಾಯನಿಕಗಳು, ಗೊಬ್ಬರ, ಕೂಲಿ ಆಳುಗಳಿಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಮಂಗಗಳ ಹಾವಳಿಯಿಂದಾಗಿ ಬರುವ ಅಲ್ಪ ಸ್ವಲ್ಪ ಬೆಳೆಯೂ ಕೈಗೆ ಬರುವ ಭರವಸೆ ಇಲ್ಲವಾಗಿದೆ. ಬೆಳಿಗ್ಗೆಯಿಂದ ಹೊಲದಲ್ಲಿ ಕಾದರೂ ಸಹ ನಮ್ಮ ಕಣ್ಣು ತಪ್ಪಿಸಿ ಮಂಗಗಳು ಬೆಳೆ ನಾಶಪಡಿಸುತ್ತಿವೆ. ಇವು ಗುಂಪಾಗಿರುವುದರಿಂದ ಮನುಷ್ಯರಿಗೆ ಸಹ ಹೆದರುವುದಿಲ್ಲ. ನಮ್ಮ ಮೇಲೆ ಆಕ್ರಮಣಕ್ಕೆ ಮುಂದಾಗುತ್ತಿವೆ. ಮುಂದೇನು ಮಾಡುವುದೋ ತೋಚುತ್ತಿಲ್ಲ ಎಂದು ಓಜಿನಹಳ್ಳಿಯ ರೈತ ಬಸವರಾಜ ಹಳ್ಳಿ ತಮ್ಮ ಅಳಲು ತೋಡಿಕೊಂಡರು.

ಕೊಪ್ಪಳದಲ್ಲಿ ಸುಮಾರು ಬೃಹತ್‌ ಸಂಖ್ಯೆಯಲ್ಲಿರುವ ನಾಲ್ಕು ಮಂಗಗಳ ಹಿಂಡುಗಳಿವೆ. ಇವುಗಳಲ್ಲಿ ಕಪ್ಪು ಮತ್ತು ಕೆಂಪು ಮಂಗಗಳು ಪ್ರತ್ಯೇಕವಾಗಿರುತ್ತವೆ. ಮಳೆ ಮಲ್ಲೇಶ್ವರ ಬೆಟ್ಟ, ಹುಲಿಕೆರೆ ಹಿಂಭಾಗ, ಕೊಪ್ಪಳ ಕೋಟೆ ಪ್ರದೇಶದಲ್ಲಿ ಇವುಗಳು ಹೆಚ್ಚಾಗಿ ವಾಸಿಸುತ್ತವೆ. ಮೊದಲೆಲ್ಲ ಇವುಗಳಿಗೆ ಊರಿನಲ್ಲೇ ಆಹಾರ ದೊರೆಯುತ್ತಿದ್ದುದರಿಂದ ಹಳ್ಳಿಗಳೆಡೆಗೆ ಹೋಗುವ ಪ್ರಮಾಣ ಕಡಿಮೆ ಇತ್ತು. ಆದರೆ ಈಗ ಊರಿನಲ್ಲಿ ಯಾವುದೇ ಆಹಾರ ದೊರಕದೆ ಗ್ರಾಮೀಣ ಭಾಗದ ರೈತರ ಜಮೀನುಗಳತ್ತ ಲಗ್ಗೆ ಇಟ್ಟಿವೆ. ಅಲ್ಲದೆ ಊರಿನ ಹೊರವಲಯದಲ್ಲಿ ಹೆಚ್ಚಾಗಿ ಗುಂಪು ಗುಂಪಾಗಿ ಕಂಡು ಬರುತ್ತವೆ. ತಾಲ್ಲೂಕಿನ ಬಹುತೇಕ ಗ್ರಾಮಗಳ ಹೊಲಗಳಲ್ಲಿ ಈ ಸಮಸ್ಯೆ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇವುಗಳನ್ನು ಹಿಡಿದು, ದೂರದಲ್ಲಿ ಬಿಟ್ಟು ಬರುವ ಕೆಲಸ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT