ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಯುತ್ತಿರುವ ನಗರಕ್ಕೆ ಬೇಕು ಹೊರ ವರ್ತುಲ ರಸ್ತೆ

ದದೇಗಲ್- ಆರ್‌ಟಿಒ ಕಚೇರಿ ಬಳಿ ಇನ್ನೂ ಮುಗಿಯದ ನಿರ್ಮಾಣ ಕಾಮಗಾರಿ; ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 13 ಸೆಪ್ಟೆಂಬರ್ 2021, 6:09 IST
ಅಕ್ಷರ ಗಾತ್ರ

ಕೊಪ್ಪಳ: ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿದೆ. ಸುಗಮ ಸಂಚಾರಕ್ಕೆ ಹೊರವರ್ತುಲ ರಸ್ತೆ ನಿರ್ಮಾಣವಾಗಬೇಕು ಎಂಬ ದಶಕದ ಕನಸು ಇನ್ನೂ ಈಡೇರಿಲ್ಲ.

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರದೊಳಗೆ ಭಾರಿ ವಾಹನಗಳ ಸಂಚಾರದಿಂದ ಆಗುತ್ತಿರುವ ಅನಾನುಕೂಲ ತಪ್ಪಿಸಲು ವರ್ತುಲ ರಸ್ತೆ ಮಾಡಲಾಗುವುದು, ಕೆಲವು ಕಡೆ ಬೈಪಾಸ್‌ ನಿರ್ಮಿಸಲಾಗುವುದು ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ.

ಪ್ರತ್ಯೇಕ ರಸ್ತೆ ನಿರ್ಮಾಣ ಇನ್ನೂ ಸುಲಭ: ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಪ್ರತ್ಯೇಕ ಯೋಜನೆಯನ್ನು ರೂಪಿಸಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೋಟ್ಯಂತರವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಭೂಸ್ವಾಧೀನ ಸೇರಿದಂತೆ ಅನೇಕ ಸಮಸ್ಯೆಗಳಿಂದ ಕುಂಟುತ್ತಾ ಸಾಗಿದೆ. ಆದರೆ ಈ ಸಮಸ್ಯೆ ಇಲ್ಲಿ ಇಲ್ಲ. ಈಗಾಗಲೇ ಗುತ್ತಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಯೋಜನೆ ಭಾಗವಾಗಿ ದದೇಗಲ್‌ ಗ್ರಾಮದಿಂದ ನಗರದ ಹೊರವಲಯದ ಆರ್‌ಟಿಒ ಕಚೇರಿವರೆಗೆ ಬೈಪಾಸ್‌ ನಿರ್ಮಾಣ ಕಾಮಗಾರಿ ಶೇ 70ರಷ್ಟು ಮಾಡಲಾಗಿದೆ.ಇನ್ನೊಂದು ಪಾರ್ಶ್ವದಲ್ಲಿ ಹಾಗೆ ಉಳಿದಿದೆ.

ಭಾರತಮಾಲಾ ಯೋಜನೆ: ನಗರದ ಇನ್ನೊಂದು ಪಾರ್ಶ್ವದಲ್ಲಿ ದೇಗಲ್‌ ಗ್ರಾಮದಿಂದಕೊಪ್ಪಳ-ಮೆತಗಲ್ ರಸ್ತೆ ಯೋಜನೆಯ ದದೇಗಲ್, ಯತ್ನಟ್ಟಿ, ಟಣಕನಕಲ್, ಇರಕಲ್‍ಗಡಾ, ಕೊಡದಾಳ್, ಚಿಲಕಮುಖಿ ಮೂಲಕ ಮೆತಗಲ್‍ನಲ್ಲಿ ಹಾದು ಹೋಗಿರುವ ಚಿತ್ರದುರ್ಗ-ಸೊಲ್ಲಾಪುರ ಎನ್‍ಎಚ್-50ನ್ನು ಸೇರಲಿದೆ.

ಇದರಿಂದಾಗಿ ಕಾರವಾರ, ಅಂಕೋಲಾ, ಹುಬ್ಬಳ್ಳಿ, ಗದಗದಿಂದ ಹೈದರಾಬಾದ್‍ಗೆ ಹೋಗಲು ಅನುಕೂಲವಾಗಲಿದೆ. ಇದರಿಂದಾಗಿ 20 ಕಿಮೀ ಅಂತರ ಕಡಿಮೆಯಾಗಿ ಹಣ ವ್ಯರ್ಥವಾಗುವುದು ನಿಲ್ಲುತ್ತದೆ. ಅಲ್ಲದೆ ಸಂಚಾರ ಸಮಯವೂ ಸಹ ಉಳಿಯಲಿದೆ. ನಗರದಲ್ಲಿ ಭಾರವಾದ ವಾಹನಗಳು ಸಂಚರಿಸುವುದರಿಂದ ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ತೊಂದರೆ ತಪ್ಪುತ್ತದೆ

ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ‘ಭಾರತಾಮಾಲಾ’ ರಸ್ತೆ ಜಿಲ್ಲೆಯಲ್ಲಿಯೂ28 ಕಿ.ಮೀ ಹಾಯ್ದು ಹೋಗುತ್ತಿದ್ದು, ಅದಕ್ಕಾಗಿ₹623 ಕೋಟಿ ಅನುದಾನ ಮಂಜೂರಾಗಿದೆ.ಎಕನಾಮಿಕ್, ಇಂಟರ್ ಮತ್ತು ಫೀಡರ್ ಕಾರಿಡಾರ್ ಮಾಡುವ ನಿಟ್ಟಿನಲ್ಲಿ ಈ ಯೋಜನೆಯಡಿ ರಾಜ್ಯದ ಹಲವು ಹೆದ್ದಾರಿಗಳನ್ನು ಸಂಪರ್ಕಿಸಲು ಮುಂದಾಗಿದ್ದು, ಇದೀಗ ಡಿಪಿಆರ್ ಸಲ್ಲಿಸಿದ್ದು, ಟೆಂಡರ್ ಬಾಕಿ ಇದೆ.

2018ರಲೋಕಸಭಾ ಚುನಾವಣೆಗೂ ಮುನ್ನವೇ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ ಡಿಪಿಆರ್ ಸಲ್ಲಿಸುವುದು ತಡವಾದ ಕಾರಣ ಮತ್ತು ಚುನಾವಣೆ ನೀತಿ ಸಂಹಿತೆ, ಕೊರೊನಾ ಲಾಕ್‌ಡೌನ್ ಕಾರಣದಿಂದ ಯೋಜನೆ ಹಾಗೆ ಉಳಿದಿದೆ. ಇದರಿಂದ ಹೊರವರ್ತುಲ ರಸ್ತೆಗೆ ಜನತೆ ಇನ್ನೂ ಐದಾರು ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ. ಈ ಎರಡು ಯೋಜನೆಗಳಿಂದಲೇ ನಗರಕ್ಕೆ ಹೊರವರ್ತುಲ ರಸ್ತೆ ನಿರ್ಮಾಣವಾಗಬೇಕಿದ್ದು, ರಾಜಕೀಯ ಇಚ್ಛಾಶಕ್ತಿ ಮೂಲಕ ಮಾಡಬೇಕಾದ ಅವಶ್ಯಕತೆ ಇದೆ.

ಗಂಗಾವತಿಗೆ ಬೇಕು ಬೈಪಾಸ್ ರಸ್ತೆ: ಜಿಲ್ಲಾ ಕೇಂದ್ರಕ್ಕಿಂತಲೂ ಹೆಚ್ಚಿನ ವ್ಯಾಪಾರ ವಹಿವಾಟು ಹೊಂದಿರುವ ಗಂಗಾವತಿ ನಗರಕ್ಕೆ ಉತ್ತಮ ದರ್ಜೆಯ ಬೈಪಾಸ್‌ ರಸ್ತೆಯ ಅವಶ್ಯಕತೆ ಇದೆ. ಇದು ಬೆಳೆಯುತ್ತಿರುವ ನಗರವಾಗಿರುವುದರಿಂದ ಮೂಲಸೌಕರ್ಯ, ರಸ್ತೆ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ಹರಿಸಿ ಭತ್ತದ ಕಣಜಕ್ಕೆ ಮೆರುಗು ತರಬೇಕಾಗಿದೆ.

ಕುಷ್ಟಗಿಯಲ್ಲಿ ಹಾಯ್ದು ಹೋಗಿರುವ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ನಿರ್ಮಾಣ ಮಾಡಿರುವುದರಿಂದ ಬಹುತೇಕ ಸಮಸ್ಯೆ ಪರಿಹಾವಾಗಿದೆ. ವಾಡಿ-ಭಾನಾಪುರ ರೈಲು ಮಾರ್ಗ ನಿರ್ಮಾಣವಾಗುತ್ತಿರುವುದರಿಂದ ಮತ್ತೊಂದು ಪಾರ್ಶ್ವದಲ್ಲಿ ಇಲ್ಲಿಯೂ ಕೂಡಾ ಬೈಪಾಸ್‌ ರಸ್ತೆಯ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿದೆ.

*ರಸ್ತೆ ದುರಸ್ತಿ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಗುತ್ತಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ರೈಲ್ವೆ ಮೇಲ್ಸೇತುವೆಗಳು ಆಗುತ್ತಿವೆ. ಭಾರತಮಾಲಾ ಯೋಜನೆ ಅಡಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ.

ಸಂಗಣ್ಣ ಕರಡಿ, ಸಂಸದ

*ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಕೆಲವು ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಮಾಡುವ ಯೋಜನೆಗಳು ಇವೆ. ಅವುಗಳಲ್ಲಿಯೇ ಉತ್ತಮ ಹೊರವರ್ತುಲ ರಸ್ತೆಯನ್ನು ನಿರ್ಮಿಸಬಹುದು.

ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT