ಮಂಗಳವಾರ, ಆಗಸ್ಟ್ 3, 2021
26 °C
ಬಿಜೆಪಿ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲನೆ

ಕಾಂಗ್ರೆಸ್ ಮೂಲ, ವಲಸಿಗ ಕಚ್ಚಾಟದ ಮಧ್ಯೆ ಅಧಿಕಾರಕ್ಕಾಗಿ ಕನಸು ಕಾಣುತ್ತಿದೆ: ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಕಾಂಗ್ರೆಸ್‌ ಮೂಲ, ವಲಸಿಗ ಕಚ್ಚಾಟದ ಮಧ್ಯೆ ಅಧಿಕಾರಕ್ಕಾಗಿ ಕನಸು ಕಾಣುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಹೇಳಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.

ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸುವ ಜಾಯಮಾನ ಕಾಂಗ್ರೆಸ್‌ನವರದು, ಮುಖ್ಯಮಂತ್ರಿ ಸ್ಥಾನಕ್ಕೆ ಈಗಾಗಲೇ ಟವೆಲ್‌ ಹಾಕುವ ಕೆಲಸ ನಡೆದಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ನಡುವೆ ಸಿಎಂ ಖುರ್ಚಿಗಾಗಿ ಹಗ್ಗಜಗ್ಗಾಟ ನಡೆದಿದೆ. ಸಿದ್ದರಾಮಯ್ಯರನ್ನು ಮೂಲ ಕಾಂಗ್ರೆಸ್ಸಿಗರು ಒಪ್ಪುತ್ತಿಲ್ಲ. ಹೀಗಾಗಿ ಮ್ಯೂಸಿಕಲ್ ಚೇರ್ ಆಟ ಆರಂಭವಾಗಿದೆ. ಇನ್ನು ಮದುವೆಯೇ ಆಗಿಲ್ಲ. ಈಗಲೇ ಮಗುವಿಗೆ ಕುಲಾಯಿ ಹೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. ಅವರ ಸಮಸ್ಯೆಗಳೇನಿದ್ದರೂ ಪರಿಹರಿಸಲಾಗುವುದು. ಸಣ್ಣಪುಟ್ಟ ಗೊಂದಲ‌ ಇದ್ದವು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಪರಿಹರಿಸಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ. ಇದ್ದಲ್ಲಿ ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಜಿಲ್ಲಾ‌ ಕಚೇರಿ ವೀಕ್ಷಣೆ: ಇನ್ನು ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷದ ಸ್ವಂತ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಕಾಮಗಾರಿ ನಡೆದಿದೆ. ಸದ್ಯ 9 ಜಿಲ್ಲೆಯಲ್ಲಿ ಸ್ವಂತ ಕಚೇರಿಗಳಿವೆ. 11 ಜಿಲ್ಲೆಗಳಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಹೀಗಾಗಿ ಎಲ್ಲ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತಿರುವೆ ಎಂದು ಹೇಳಿದರು. ಕೊಪ್ಪಳ ಜಿಲ್ಲಾ ಕಚೇರಿ ಕಾಮಗಾರಿ ಬಹುಪಾಲು ಪೂರ್ಣಗೊಂಡಿದೆ. ದೀಪಾವಳಿ ಒಳಗೆ ಕಚೇರಿ ಉದ್ಘಾಟನೆ ಮಾಡಲಾಗುವುದು. ಇದರೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಟೀಲ್ ತಿಳಿಸಿದರು.

ನಂತರ ಕಟೀಲ್‌ ಪಕ್ಷದ ವಿವಿಧ ಮೋರ್ಚಾ ಹಾಗೂ ಪ್ರಮುಖರ ಜೊತೆ ಆಂತರಿಕ ಸಭೆ ನಡೆಸಿದರು. ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಮತ್ತು ಅವುಗಳನ್ನು ಜನರಿಗೆ ತಲುಪಿಸುವುದು, ತಿಳಿವಳಿಕೆ ಮೂಡಿಸುವುದು ಸೇರಿ ವಿವಿಧ ಕಾರ್ಯತಂತ್ರಗಳನ್ನು ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ.

ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ನವೀನ್‌ ಗುಳಗಣ್ಣನವರ, ಶೋಭಾ ನಗರಿ, ಮಹಾಂತೇಶ ಪಾಟೀಲ ಮೈನಳ್ಳಿ, ಚಂದ್ರಶೇಖರ ಪಾಟೀಲ ಮುಂತಾದವರು ಇದ್ದರು.

ನಂತರ ಅವರು ಗಡಿಬಿಡಿಯಲ್ಲಿ ಕುಕನೂರು, ಯಲಬುರ್ಗಾಕ್ಕೆ ತೆರಳಿ ಅಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.

‘ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ’
ತಳಕಲ್ (ಕುಕನೂರು):
‘ನೀರು ಅತ್ಯಮೂಲ್ಯ ನೈಸರ್ಗಿಕ ಸಂಪತ್ತು. ಆಮ್ಲಜನಕ ನೀಡುವ ಮರ-ಗಿಡಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಶ್ಯಾಮಪ್ರಸಾದ್‌ ಮುಖರ್ಜಿಯವರ ಬಲಿದಾನ ದಿನದ ಪ್ರಯುಕ್ತ ಬಿಜೆಪಿ ಪಕ್ಷದ ವತಿಯಿಂದ ತಾಲ್ಲೂಕಿನ ತಳಕಲ್ ಗ್ರಾಮದ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ನಡೆದ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ನಿರ್ಮಿಸಲಾದ ಕೌಶಲಾಭಿವೃದ್ಧಿ ಕೇಂದ್ರ ರಾಜ್ಯದಲ್ಲಿಯೇ ಅತ್ಯುತ್ತಮ ಕೇಂದ್ರವಾಗಿದೆ. ಇದರ ಸದುಪಯೋಗ ಪಡೆಯಬೇಕು ಎಂದರು. ಹುಟ್ಟಿದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿರುವಂತೆ ಎಲ್ಲ ಪಶು–ಪಕ್ಷಿ, ಪ್ರಾಣಿ, ಮರ-ಗಿಡಗಳಿಗೂ ಇದೆ ಎಂದು ಅವರು ಹೇಳಿದರು.

ಅರಣ್ಯದಲ್ಲಿರುವ ಆನೆ, ಹುಲಿ, ಚಿರತೆ ಇಂದಿನ ದಿನಗಳಲ್ಲಿ ಅಲ್ಲಲ್ಲಿ ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯ ನಾಶವೇ ಇದಕ್ಕೆ ಮೂಲ ಕಾರಣ. ಪ್ರಾಣಿ ಸಂಕುಲಗಳು ಅರಣ್ಯ ಬಿಟ್ಟು ಊರೊಳಗೆ ಬರುವುದು ಸಹಜ ಎಂದರು. ಪ್ರಸಕ್ತ ದೇಶದ ಜನಸಂಖ್ಯೆಗೆ ಅನುಗುಣವಾಗಿ ನಿರೀಕ್ಷಿಸಿದ ಮಟ್ಟದಲ್ಲಿ ಅರಣ್ಯ ಬೆಳೆಯುತ್ತಿಲ್ಲ. ಇರುವ ಅರಣ್ಯ ವಿನಾಶದ ಅಂಚಿನಲ್ಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಿ, ವಿಧಾನಪರಿಷತ್ ಮಾಜಿ ಸದಸ್ಯ ಸಿ.ಅಶ್ವಥ್ ನಾರಾಯಣ್, ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಶಾಸಕ ಹಾಲಪ್ಪ ಆಚಾರ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಾರುತಿ ಗಾವರಾಳ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಂಬಣ್ಣ ಜೋಳದ, ಬಸನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ಹೇಮಂತ್ ರಾಜ್ ಹಾಗೂ ಶರಣಬಸಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು