ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೊಮ್ಮಾಯಿ ಕೊಟ್ಟ ಮಾತು ಉಳಿಸಿಕೊಳ್ಳಲಿ’

Last Updated 9 ನವೆಂಬರ್ 2021, 7:59 IST
ಅಕ್ಷರ ಗಾತ್ರ

ಕುಷ್ಟಗಿ: ‘ಪಂಚಮಸಾಲಿ ಸಮುದಾಯಕ್ಕೆ2 ಎ ಮೀಸಲಾತಿ ನೀಡುವ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುನೀಡಿದ ಭರವಸೆಯನ್ನು ಈ ವರ್ಷದ ಅಂತ್ಯದ ಒಳಗೆ ಈಡೇರಿಸಬೇಕು’ ಎಂದುಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ತಾಲ್ಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ನಡೆದ ಕಿತ್ತೂರ ರಾಣಿ ಚನ್ನಮ್ಮ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಯಡಿಯೂರಪ್ಪ ಅವರಿಗೆ ಬಂದ ದುರ್ಗತಿ ತಮಗೂ ಬರಬಾರದು ಎಂದರೆ ಬೊಮ್ಮಾಯಿವರು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಮೀಸಲಾತಿ ಘೋಷಣೆಯಾಗದಿದ್ದರೆ ಮತ್ತೆ ಹೋರಾಟ ಮುಂದುವರೆಸೋಣ, ಮುಖಂಡರೊಂದಿಗೆ ಪಂಚಮಸಾಲಿ ಕುಟುಂಬಗಳ ಮಕ್ಕಳೂ ಹೋರಾಟದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

‘ಪಂಚಮಸಾಲಿ ಸಮುದಾಯ ಸಂಸ್ಕಾರವನ್ನು ಉಳಿಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದುವ ಮೂಲಕ ಉದ್ಯೋಗಾವಕಾಶಗಳನ್ನು ಪಡೆಯಬೇಕು. ಒಂದೊಮ್ಮೆ ಸರ್ಕಾರಿ ಉದ್ಯೋಗ ಸಿಗದಿದ್ದರೂ ಹಿರಿಯರು ಉಳಿಸಿರುವ ಭೂಮಿಯಲ್ಲಿಯೇ ಬಿತ್ತಿ ಬೆಳೆದು ಉದ್ಧಾರವಾಗೋಣ. ಯಾವುದೇ ಕಾರಣಕ್ಕೂ ಭೂಮಿಯನ್ನು ಮಾರುವುದು ಬೇಡ ಏಕೆಂದರೆ ಮುಂದೆ ಅದೇ ಭೂಮಿಯಲ್ಲಿ ಕೂಲಿ ಕೆಲಸ ಮಾಡುವಂಥ ಪರಿಸ್ಥಿತಿ ಬರಬಹುದು’ ಎಂದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಮಾತನಾಡಿ,‘ಪಂಚಮಸಾಲಿ ಸಮುದಾಯದಲ್ಲಿ ಶ್ರೀಮಂತರಿರಬಹುದು. ಆದರೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ ಮಕ್ಕಳಿಗೆ ಮೀಸಲಾತಿ ಬೇಕು ಎನ್ನುವುದನ್ನು ಅರಿತುಕೊಳ್ಳಬೇಕು’ ಎಂದರು.

‘ತಾವು ಮತ್ತು ಪಕ್ಷ ಅಧಿಕಾರಕ್ಕೆ ಬಂದಿದ್ದೇ ಪಂಚಮಸಾಲಿ ಸಮುದಾಯದ ಬೆಂಬಲದಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿ ಮೀಸಲಾತಿ ಹೋರಾಟವನ್ನು ಬೆಂಬಲಿಸಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಬೇಕಿದ್ದ ಸಮಾವೇಶಕ್ಕೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಪ್ರಮುಖ ಅಡ್ಡಿಯಾಗಿದ್ದರು. ಏನೇ ಆದರೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಭರವಸೆ ಇದ್ದು, ಎರಡು ತಿಂಗಳ ಒಳಗೆ ಮೀಸಲಾತಿ ಘೋಷಿಸಲಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಪ್ರತಿಜ್ಞಾ ವಿಧಿಯನ್ನು ಸ್ವಾಮೀಜಿ ಬೋಧಿಸಿದರು.

ಮಾಜಿ ಶಾಸಕ ಕೆ.ಶರಣಪ್ಪ, ರೈತ ಮುಖಂಡ ದೇವೇಂದ್ರಪ್ಪ ಬಳೂಟಗಿ ಇತರರು ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಂಗಪ್ಪ ಮಂಗಳೂರು, ನೂರಂದಪ್ಪ ಕಂದಕೂರು, ಚಂದ್ರಶೇಖರ ನಾಲತ್ವಾಡ, ಸಂಗಮೇಶ ಶಿವನಗುತ್ತಿ, ಉಮೇಶ ಮಂಗಳೂರು, ಮಲ್ಲಿಕಾರ್ಜುನಗೌಡ ಪಾಟೀಲ ಸೇರಿ ಸಮುದಾಯದ ಅನೇಕ ಮುಖಂಡರು, ಯುವಕರು, ಮಹಿಳೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT