ಕಾರಟಗಿ: ‘ಯಾದಗಿರಿ ಪಿಎಸ್‌ಐ ಪರಶುರಾಮ್ ಛಲವಾದಿ ಸಾವು ಸಂಶಯಾಸ್ಪದವಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಆರೋಪಿಗಳನ್ನು ಬಂಧಿಸಬೇಕು. ಪರಶುರಾಮ್ ಕುಟುಂಬಕ್ಕೆ ₹2 ಕೋಟಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಕರ್ನಾಟಕ ರೈತ ಸಂಘ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಒತ್ತಾಯಿಸಿದರು.
‘ಪ್ರತಿಭಾವಂತ, ದಕ್ಷ ಅಧಿಕಾರಿಯಾಗಿದ್ದ ಪರಶುರಾಮ್ ಅವರನ್ನು ಅವಧಿಗೂ ಮುನ್ನವೇ ವರ್ಗಾವಣೆಗೆ ಮುಂದಾಗಿ, ₹30ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಶಾಸಕ ಚನ್ನಾರಡ್ಡಿ ಪಾಟೀಲ್ ಮತ್ತವರ ಪುತ್ರ ಪಂಪನಗೌಡ ಅವರ ಒತ್ತಡದಿಂದ ಸಾವು ಸಂಭವಿಸಿದ್ದು, ಅವರ ವಿರುದ್ದ ಪ್ರಕರಣ ದಾಖಲಾಗಿದ್ದು, ಕೂಡಲೇ ಬಂಧಿಸಬೇಕು. ಪರಶುರಾಮ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಜೊತೆಗೆ ಅವರ ಪತ್ನಿ ಶ್ವೇತಾಗೆ ಉನ್ನತ ಹುದ್ದೆಯ ನೌಕರಿ ನೀಡಬೇಕು’ ಎಂದು ಮನವಿಯಲ್ಲಿ ಎರಡೂ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಯಲ್ಲಪ್ಪ ಕಟ್ಟೀಮನಿ ಮತ್ತು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ, ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ಈಡಿಗೇರ ನೇತೃತ್ವದಲ್ಲಿ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರಮುಖರಾದ ಮಲ್ಲಿಕಾರ್ಜುನ ಯರಡೋಣ, ಎಸ್.ದೊಡ್ಡನಗೌಡ, ಬದ್ರಿ ನಾಗರಾಜ್, ದುರುಗೇಶ ದೊಡ್ಡಮನಿ, ಮರಿಸ್ವಾಮಿ, ಶರಣಪ್ಪ, ಎಚ್.ಬಿ.ಶ್ರೀಕಾಂತ ಸಹಿತ ಅನೇಕ ಕಾರ್ಯಕರ್ತರಿದ್ದರು.
ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮರಿಯಪ್ಪ ಸಾಲೋಣಿ, ಪ್ರಮುಖರಾದ ಪಂಪಣ್ಣ ನಾಯಕ ಹುಲಿಹೈದರ, ರಾಮಣ್ಣ ಜಾಡಿ, ದೊಡ್ಡನಗೌಡ ಯರಡೋಣ, ಭಾಷಾಸಾಬ, ಶ್ರೀನಿವಾಸ ಗೋಮರ್ಸಿ, ಯಲ್ಲಪ್ಪ ಕತಾಳಿ, ಭೀಮನಗೌಡ, ಪರಸಪ್ಪ ಮಡಿವಾಳ, ಸಣ್ಣ ರಾಮಣ್ಣ, ಪರಸಪ್ಪ ಕೊಂಡೆಕರ ಸಹಿತ ಅನೇಕ ರೈತರು ಹಾಜರಿದ್ದರು.
ಕಾರಟಗಿಯಿಂದ ತೆರಳುತ್ತಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು