ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕಡೆ ಶನಿವಾರ ಬೆಳಗಿನಜಾವ ದಾಖಲೆಯ ಪ್ರಮಾಣದ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಸುಮಾರು ಎರಡೂವರೆ ತಾಸು ಗುಡುಗು–ಸಿಡಿಲಿನ ಅಬ್ಬರದೊಂದಿಗೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಕುಷ್ಟಗಿ ಮಾಪನ ಕೇಂದ್ರದಲ್ಲಿ 102 ಮಿ.ಮೀ. ಮಳೆ ದಾಖಲಾಗಿದೆ. ಕುಷ್ಟಗಿ, ತಾವರಗೇರಾ, ಹನುಮನಾಳ ಹೋಬಳಿಯಲ್ಲಿ ಕುಂಭದ್ರೋಣ ಮಳೆ ಸುರಿದಿದೆ. ಹಳ್ಳಕೊಳ್ಳಗಳು ನದಿಯ ಮಾದರಿಯಲ್ಲಿ ಹರಿದಿದ್ದು, ಹೊಲಗದ್ದೆಗಳು ಜಲಾವೃತಗೊಂಡಿವೆ.
ಟೆಂಗುಂಟಿ ಬಳಿ ಹಳ್ಳಕ್ಕೆ ಪ್ರವಾಹ ಬಂದು ನೀರು ಊರೊಳಗೆ ನುಗ್ಗಿ ರಾತ್ರಿವೇಳೆ ಜನರು ತೀವ್ರ ತೊಂದರೆ ಅನುಭವಿಸಿದರು. ಕಂದಕೂರು ಗ್ರಾಮದಲ್ಲಿ ಕೆರೆ ಬಿರುಕು ಬಿಟ್ಟು ಊರಿನ ಮಧ್ಯದಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿದಿದೆ. ನಿಡಶೇಸಿ ಮತ್ತಿತರೆ ಗ್ರಾಮಗಳಲ್ಲಿಯೂ ಮನೆಗಳು ಜಲಾವೃತಗೊಂಡು ಮನೆಯಲ್ಲಿದ್ದ ವಸ್ತುಗಳು, ದವಸಧಾನ್ಯಗಳು ಹಾಳಾಗಿವೆ.
ಕುಷ್ಟಗಿ ಪಟ್ಟಣದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಶಾಖಾಪುರ ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಬಹಳಷ್ಟು ಹಾನಿ ಸಂಭವಿಸಿದೆ. ತಗ್ಗು ಪ್ರದೇಶದಲ್ಲಿನ ನೀರನ್ನು ಹೊರಹಾಕಲು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ ಮತ್ತು ಸಿಬ್ಬಂದಿ ಶ್ರಮಿಸಿದರು. ಈ ಪ್ರದೇಶದಲ್ಲಿ ಮಳೆ ಬಂದಾಗ ಪದೇಪದೇ ಇಂಥ ಸಮಸ್ಯೆ ಉದ್ಭವಿಸುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಅಲ್ಲಿಯ ನಿವಾಸಿ ಲಕ್ಷ್ಮವ್ವ ಟಕ್ಕಳಕಿ ಇತರರು ಅಧಿಕಾರಿಗಳನ್ನು ಒತ್ತಾಯಿಸಿದರು.
ಅದೇ ರೀತಿ ಸಂದೀಪ್ ನಗರ, ಷರೀಫ್ ನಗರದಲ್ಲಿಯೂ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಮಕ್ಕಳು, ವೃದ್ಧರು, ಮಹಿಳೆಯರು ಕತ್ತಲಲ್ಲಿ ಪರದಾಡುವಂತಾಗಿತ್ತು ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಆಸ್ಪತ್ರೆ ಮುಂದಿನ ಚರಂಡಿ ಉಕ್ಕಿ ಹರಿದು ತಗ್ಗುಪ್ರದೇಶದಲ್ಲಿರುವ ವ್ಯಾಪಾರ ಮಳಿಗೆಗಳಿಗೆ ನೀರು ಭರ್ತಿಯಾಗಿದ್ದು ಕಂಡುಬಂದಿತು.
ಪಕ್ಕದ ಯಲಬುರ್ಗಾ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗಿರುವ ಕಾರಣಕ್ಕೆ ಕುಷ್ಟಗಿ ತಾಲ್ಲೂಕಿನ ಟೆಂಗುಂಟಿ ಹಳ ಉಕ್ಕಿ ಹರಿಯಿತು. ಅದೇ ರೀತಿ ಮದಲಗಟ್ಟಿ ಬಳಿಯ ನಿಡಶೇಸಿ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬಂದಿದೆ ಬಂದಿದೆ. ಮಳೆಯಿಂದ ಹಾನಿಗೊಳಗಾದ ಗ್ರಾಮಗಳಿಗೆ ತಹಶೀಲ್ದಾರ್ ಅಶೋಕ ಶಿಗ್ಗಾವಿ ಭೇಟಿ ನೀಡಿ ಪರಿಶೀಲಿಸಿದರು.
‘ಟೆಂಗುಂಟಿಯಲ್ಲಿ ಕಾಳಜಿ ಕೇಂದ್ರ’
ಪ್ರವಾಹದಿಂದ ತೊಂದರೆ ಅನುಭವಿಸಿದ ತಾಲ್ಲೂಕಿನ ಟೆಂಗುಂಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ನಲೀನ್ ಅತುಲ್ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು. ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು ‘ಸುಮಾರು 50ಕ್ಕೂ ಅಧಿಕ ಮನೆಗಳು ನೀರಿನಿಂದ ಹಾನಿಗೊಳಗಾಗಿವೆ. ಗ್ರಾಮದಲ್ಲಿ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಕುಷ್ಟಗಿಯ ಷರೀಫ್ ನಗರದಲ್ಲಿ ರೈಲ್ವೆ ಇಲಾಖೆಗೆ ಸ್ವಾಧೀನಪಡಿಸಿಕೊಂಡ ಸ್ಥಳದಲ್ಲಿನ ಕೆಲ ಮನೆಗಳ ಬಳಿ ನೀರು ನುಗ್ಗಿದೆ. ಜೀವ ಹಾನಿಯಾದ ಮಾಹಿತಿ ಬಂದಿಲ್ಲ. ಸರ್ಕಾರದ ನಿಯಮಗಳ ಪ್ರಕಾರ ಮಳೆ ಹಾನಿಗೆ ಪರಿಹಾರ ಒದಗಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.