ಮಂಗಳವಾರ, ಜೂನ್ 28, 2022
27 °C
ಕಿಮ್ಸ್ ಆವರಣದಲ್ಲಿ ಮಕ್ಕಳ ಚಿಕಿತ್ಸೆಗೆ ಆದ್ಯತೆ: ಕೋವಿಡ್‌- ಕಾಯಂ ಆಸ್ಪತ್ರೆ ಸ್ಥಾಪನೆಗೆ ಜಿಲ್ಲಾಡಳಿತ ಚಿಂತನೆ

ಕೊಪ್ಪಳ: ಕೊರೊನಾ ಮೂರನೇ ಅಲೆ; ನಿಯಂತ್ರಣಕ್ಕೆ ಸಿದ್ಧತೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊರೊನಾ ಸೋಂಕಿನ ಎರಡನೇ ಅಲೆಗೆ ತತ್ತರಿಸಿರುವ ಜಿಲ್ಲೆ ಮೂರನೇ ಅಲೆ ತಡೆಗೆ ಸಿದ್ಧತೆ ನಡೆಸಿದೆ. ಈ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಸರಣಿ ಸಭೆ ಹಮ್ಮಿಕೊಳ್ಳುವ ಮೂಲಕ ಸೋಂಕು ತಡೆಗೆ ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ.

ಕೊರೊನಾ ಸೋಂಕು ತೀವ್ರವಾಗಿ ಹರಡಿದ ಪರಿಣಾಮ ಸರ್ಕಾರ ಲಾಕ್‌ಡೌನ್‌ ಹೇರಿತು. ಇದರ ಜೊತೆಗೆ ಜಿಲ್ಲಾಡಳಿತ ಕೂಡಾ ಕಟ್ಟುನಿಟ್ಟಿನ ಮಾರ್ಗಸೂಚಿ ಹಿನ್ನೆಲೆಯಲ್ಲಿ ಡಬಲ್ ಲಾಕ್‌ಡೌನ್‌ ಹೇರಿದ್ದರಿಂದ ದುಡಿಯುವ ವರ್ಗ ಮತ್ತು ವ್ಯಾಪಾರ, ವಾಣಿಜ್ಯ ವಹಿವಾಟಿಗೆ ತೀವ್ರ ಧಕ್ಕೆ ಆಯಿತು.

ಕೊರೊನಾ ಸಧ್ಯದ ಸ್ಥಿತಿಗತಿ: ಜಿಲ್ಲೆಯಲ್ಲಿ ಆರಂಭದಲ್ಲಿ ಒಂದಂಕಿಗೆ ಇದ್ದ ಕೊರೊನಾ ಸೋಂಕು ನಂತರದ ದಿನಗಳಲ್ಲಿ ಮೂರಂಕಿಗೆ ಏರಿತು. ಕಳೆದ ಎರಡು ತಿಂಗಳಿಂದ ಜನಜೀವನ ಅಸ್ತವ್ಯಸ್ತಗೊಳಿಸಿದ ಈ ಸೋಂಕಿನ ಸರಪಳಿ ಕಳಚುತ್ತಿರುವುದರಿಂದ ಹೆಚ್ಚಿನ ಮುನ್ನಚ್ಚರಿಕೆ, ಜಾಗೃತಿ ಅವಶ್ಯಕವಾಗಿದೆ.

ಎರಡನೇ ಅಲೆಯಲ್ಲಿ 32,157 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 30,334 ಜನರು ಗುಣಮುಖರಾಗಿದ್ದಾರೆ. ಒಟ್ಟು 515 ಜನರು ಮೃತರಾಗಿದ್ದಾರೆ. ಗಂಗಾವತಿ ತಾಲ್ಲೂಕಿನಲ್ಲಿ 13,393 ಹೆಚ್ಚು ಸೋಂಕಿತರು ಕಂಡು ಬಂದರೆ, ಯಲಬುರ್ಗಾ ತಾಲ್ಲೂಕಿನಲ್ಲಿ 4428 ಜನರು ಬಾಧಿತರಾಗಿದ್ದರು.

ಎರಡನೇ ಅಲೆ ಗ್ರಾಮೀಣ ಭಾಗದ ಜನಜೀವನವನ್ನು ಹೆಚ್ಚು ಬಾಧಿಸಿ ದ್ದರಿಂದ ಎಲ್ಲ ಹೋಬಳಿ, ತಾಲ್ಲೂಕು, ದೊಡ್ಡ ಗ್ರಾಮಗಳಲ್ಲಿ 100ಕ್ಕೂ ಹೆಚ್ಚು ಕೋವಿಡ್‌ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಆರಂಭದಲ್ಲಿ ಆಮ್ಲಜನಕ, ವೆಂಟಿಲೇಟರ್‌ ತೊಂದರೆ ಮಧ್ಯೆಯೂ ರೆಮ್‌ಡೆಸಿವರ್‌ ಔ‍ಷಧ ಪೂರೈಕೆಗೆ ಹೆಣಗಾಡಬೇಕಾಯಿತು. 

ಜಿಲ್ಲೆಯಲ್ಲಿ 650 ಹಾಸಿಗೆ ಸಾಮರ್ಥ್ಯದ ಆಮ್ಲಜನಕ ಯುಕ್ತ ವ್ಯವಸ್ಥೆ ಕಲ್ಪಿಸಿದ್ದರೂ 1 ಸಾವಿರಕ್ಕೂ ಹೆಚ್ಚು ಸೋಂಕಿತರು ಕಂಡು ಬರುತ್ತಿದ್ದರಿಂದ ಸೌಲಭ್ಯ ದೊರೆಯದೇ ವಿವಿಧ ಕಾರಣಗಳಿಂದ ಯುವಕರು, ಮಧ್ಯವಯಸ್ಕರು, ಬಹುವಿಧದ ಕಾಯಿಲೆಯಿಂದ ಹೆಚ್ಚು ಸಾವುಗಳು ಸಂಭವಿಸಿವೆ. 

ಮಕ್ಕಳ ಸಮೀಕ್ಷೆ ಆತಂಕ: ಜಿಲ್ಲೆಯ 16 ವರ್ಷದ ಮಕ್ಕಳ ಸಮೀಕ್ಷೆ ಮಾಡಿ, ಸೋಂಕಿನಿಂದ ಬಾಧಿತರಾದವರಿಗೆ ನೀಡುವ ಚಿಕಿತ್ಸೆ, ಆರೈಕೆ, ಬೆಂಬಲ ಕುರಿತು ಸೂಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ಈಗಾಗಲೇ ಮಕ್ಕಳ ಸಮೀಕ್ಷೆ ಮಾಡಲಾಗಿದೆ ಎನ್ನಲಾಗುತ್ತದೆ.

ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮಕ್ಕಳ ಸಮೀಕ್ಷೆಯನ್ನು ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಮಾಡಿಸಿ ನಿಖರವಾದ ಅಂಕಿ-ಸಂಖ್ಯೆ ನೀಡಬೇಕು ಎಂಬ ಆದೇಶ ಮಾಡಿದ್ದಾರೆ. ಆದರೆ, ಇದಕ್ಕೆ ಶಿಕ್ಷಕರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ. ‘ಕೊರೊನಾ  ಆತಂಕ ಹರಡುತ್ತಿದ್ದು, ನಮ್ಮ ರಕ್ಷಣೆಗೆ ಯಾರ ಹೊಣೆ. ನಾವು ಎಲ್ಲ ಕೆಲಸ ಮಾಡಲು ಸಿದ್ಧರಿದ್ದೇವೆ. ನಮ್ಮನ್ನು ಕೊರೊನಾ ವಾರಿಯರ್ಸ್‌ ಎಂದು ಗುರುತಿಸಬೇಕು’ ಎಂದು ಶಿಕ್ಷಕರು ಬೇಡಿಕೆ ಮುಂದಿಟ್ಟಿದ್ದಾರೆ.

ಮಕ್ಕಳ ಸಮೀಕ್ಷೆ ಎಲ್ಲೂ ಮಾಡಿಲ್ಲ. ಜಿಲ್ಲೆಯಲ್ಲಿ ಮಾತ್ರ ಅದಕ್ಕೆ ಸೂಚನೆ ನೀಡಿದ್ದು, ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಇದರ ಮಧ್ಯೆ ಸ್ವಯಂಪ್ರೇರಿತವಾಗಿ ಮಕ್ಕಳ ಸಮೀಕ್ಷೆಗೆ ಬರುವ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲಾ
ಗುವುದು ಎಂದು ಜಿಲ್ಲಾಡಳಿತ ಹೇಳುತ್ತಿದೆ. ಅಲ್ಲದೆ ಕಡ್ಡಾಯವಾಗಿ ಸಮೀಕ್ಷೆಗೆ ಬಳಸಿಕೊಳ್ಳುವಂತೆ ಸಲಹೆ ಕೂಡಾ ಸಚಿವರು ನೀಡಿದ್ದಾರೆ ಎನ್ನಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ವೈದ್ಯಕೀಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಸಮೀಕ್ಷೆ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಆಸ್ಪತ್ರೆ: ಈ ಹಿನ್ನೆಲೆಯಲ್ಲಿ ಕೊಪ್ಪಳ ವೈದ್ಯಕೀಯ ಶಿಕ್ಷಣ ಮತ್ತು ಆಸ್ಪತ್ರೆ ಆವರಣದಲ್ಲಿ ಮಕ್ಕಳ ಕೋವಿಡ್ ಆಸ್ಪತ್ರೆ ಆರಂಭಿಸಲಾಗುತ್ತಿದ್ದು, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಯಂ ಕೊರೊನಾ ಆಸ್ಪತ್ರೆ ತೆರೆಯುವ ಕುರಿತು ಚಿಂತನೆ ನಡೆಸಲಾಗಿದೆ. ಇದಕ್ಕೇ ಬೇಕಾದ ವೈದ್ಯಕೀಯ ಉಪಕರಣ, ಔಷಧಿ, ವೈದ್ಯರ ನಿಯೋಜನೆ ಸಧ್ಯದ ಅವಶ್ಯಕತೆ ಆಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳನ್ನು ಗುರುತಿಸುವುದು, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು, ಮಕ್ಕಳಲ್ಲಿ ಹರಡುವ ವಿಧಾನದ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವುದು ಕುರಿತು ಮೂರನೇ ಅಲೆ ತಡೆಗೆ ಗಂಭೀರ ಚಿಂತನೆ ನಡೆಸಿದೆ.

ಬ್ಲ್ಯಾಕ್‌ ಫಂಗಸ್‌: ಕೊರೊನಾದ ಅಬ್ಬರದ ಜೊತೆಗೆ ಬ್ಲ್ಯಾಕ್‌ ಫಂಗಸ್ ಎಂಬ ಸೋಂಕು ಜನರನ್ನು ಬಾಧಿಸಿದ್ದು, ಜಿಲ್ಲೆಯಲ್ಲಿ 17 ಜನರಿಗೆ ಕಂಡು ಬಂದಿದೆ. ಇದರಿಂದ ಇಬ್ಬರು ಮೃತರಾದರೆ, 4 ಅನ್ಯ ಜಿಲ್ಲೆಗೆ ಸೇರಿದವರಾಗಿದ್ದಾರೆ. 7 ಜನರಿಗೆ ಚಿಕಿತ್ಸೆ ನೀಡಲಾಗಿದೆ. 6 ಜನರಲ್ಲಿ ಸೋಂಕು ಗುರುತಿಸಲಾಗಿದೆ.

ಇದಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ. ಅಲ್ಲದೆ ಉಚಿತ ಚಿಕಿತ್ಸೆಯನ್ನು ಕೂಡಾ ನೀಡಲಾಗುತ್ತಿದೆ. ಈ ಫಂಗಸ್‌ ಹರಡದಂತೆ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತದೆ.

ಸದ್ದಿಲ್ಲದೆ ಎರಡನೇ ಅಲೆ ಜಿಲ್ಲೆಗೆ ಕಾಲಿಟ್ಟು, ಜನಜೀವನವನ್ನು ಬಾಧಿಸಿದ್ದು, ಮೂರನೇ ಅಲೆಯಿಂದ ಜಿಲ್ಲೆಯನ್ನು ರಕ್ಷಣೆ ಮಾಡಬೇಕಾದ ಕಾರ್ಯವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮಾಡಬೇಕಿದೆ. ಇದಕ್ಕೆ ಜನರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜೇಶನ್‌, ವೈಯಕ್ತಿಕ ಸ್ವಚ್ಛತೆ, ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ರಕ್ಷಣೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಕೂಡಾ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು