ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಆವಕ: ಖರೀದಿ ಕೇಂದ್ರ ಆರಂಭಕ್ಕೆ ಹೆಚ್ಚಿದ ಒತ್ತಡ

ಬೆಲೆ ಕುಸಿತದಿಂದ ರೈತರು ಕಂಗಾಲು
Last Updated 12 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪಳ: ಪ್ರಸ್ತುತ ವರ್ಷ ಈ ಭಾಗದ ನೀರಾವರಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದರಿಂದ ಬೆಲೆಇಲ್ಲದೆ ರೈತರು ಪರದಾಡುವಂತಾಗಿದೆ.

ಮುಂಗಾರು ಮಳೆ ಆರಂಭವಾಗಿ ಮೂರೇ ದಿನದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಎಡ ಮತ್ತು ಬಲದಂಡೆ ಕಾಲುವೆಗೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಡಲಾಗಿತ್ತು. ರೈತರು ಮೊದಲ ಬೆಳೆಯನ್ನು ಬೆಳೆದಿದ್ದು, ಈಗ ಕಟಾವಿಗೆ ಬಂದಿದೆ. ವ್ಯಾಪಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದ್ದರಿಂದ ಬೆಲೆಯಿಲ್ಲದೆ ಪರಿತಪಿಸುವಂತೆ ಆಗಿದೆ.

ಕಳೆದ ಮೂರು ವರ್ಷದಿಂದಸತತ ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಂಠಿತಗೊಂಡಿತ್ತು. ಪ್ರಸ್ತುತ ವರ್ಷ ಉತ್ತಮ ಮಳೆಯಾಗಿರುವುದರಿಂದಹೆಚ್ಚು ಇಳುವರಿ ಬಂದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡು ರೈತರು ಆತಂಕ ಪಡುವಂತೆ ಆಗಿದೆ.

ಮಾರುಕಟ್ಟೆಯಲ್ಲಿ ಪ್ರತಿ 75 ಕೆಜಿ ಭತ್ತದ ಚೀಲಕ್ಕೆ ಸರ್ಕಾರ ₹ 1380 ದರ ನಿಗದಿ ಮಾಡಿದೆ. ಆದರೆ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು ₹ 1200ಕ್ಕೆ ಬೆಲೆ ನೀಡಿ ಕೊಂಡುಕೊಳ್ಳುತ್ತಿರುವುದರಿಂದ ರೈತರಿಗೆ ತೊಂದರೆಯಾಗಿದೆ.ಗುಣಮಟ್ಟ ಮತ್ತು ವಿವಿಧ ಕಾರಣಗಳನ್ನು ನೀಡಿ ಇನ್ನೂ ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ರೈತರ ಸಂಕಷ್ಟ ತೀವ್ರವಾಗಿದೆ.

ಅಲ್ಲದೆ ಯಾದಗಿರಿ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚು ಪ್ರಮಾಣದಲ್ಲಿ ಭತ್ತ ಆವಕವಾಗುತ್ತಿದೆ. ಇದರಿಂದ ಭತ್ತಕ್ಕೆ ಬೆಲೆ ಕಡಿಮೆಯಾಗಿದೆ. ಆದ್ದರಿಂದ ರೈತರು ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.

ಕೊಪ್ಪಳ ತಾಲ್ಲೂಕಿನಹಿಟ್ನಾಳ ಹೋಬಳಿ ಮತ್ತು ಗಂಗಾವತಿ, ಕಾರಟಗಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ಭತ್ತದ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿರುವ ಗಂಗಾವತಿ ತಾಲ್ಲೂಕಿನಲ್ಲಿ 100ಕ್ಕೂ ಹೆಚ್ಚು ಅಕ್ಕಿ ಮಿಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ಭಾಗದಿಂದ ಭತ್ತ ಮಾರಾಟಕ್ಕೆ ರೈತರು ಇಲ್ಲಿಗೆ ಬರುತ್ತಿದ್ದಾರೆ. ಇದರಿಂದ ತೀವ್ರ ಪೈಪೋಟಿ ಎದುರಾಗಿದ್ದು, ಬೆಲೆ ಕಡಿಮೆಯಾಗಿದೆ.

ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಒತ್ತಾಯಿಸುತ್ತಿದ್ದು, ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ರೈತರ ಅನುಕೂಲವಾಗುವ ಸ್ಥಳದಲ್ಲಿ ಖರೀದಿ ಕೇಂದ್ರ ಆರಂಭಿಸಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂಬ ಬೇಡಿಕೆ ಕೂಡಾ ಇಟ್ಟಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಸಂಸದರಿಗೆ ಮನವಿ ಮಾಡಿದ್ದು, ಜಿಲ್ಲಾಡಳಿತ ಮೇಲೆ ಒತ್ತಡ ಹೇರಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಸಂಸದಸಂಗಣ್ಣ ಕರಡಿಪ್ರತಿಕ್ರಿಯೆ ನೀಡಿ, ಬೆಲೆ ಕುಸಿತದಿಂದ ರೈತರಿಗೆ ತೊಂದರೆಯಾಗಿದ್ದು,ಶೀಘ್ರ ಕೃಷಿ ಮತ್ತು ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಲಾಗುವುದು' ಎಂದು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT