ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ: ರಸ್ತೆ ಅಭಿವೃದ್ದಿಯಾದರೂ ತಪ್ಪದ ತೇಪೆ ಕೆಲಸ

ಇನ್ನೂ ಕೆಲವೆಡೆ ಸಂಚರಿಸಲಾಗದ ರಸ್ತೆಗಳು; ಬಸ್‌ ಮತ್ತಷ್ಟು ಅಗತ್ಯ
Published 11 ಡಿಸೆಂಬರ್ 2023, 6:56 IST
Last Updated 11 ಡಿಸೆಂಬರ್ 2023, 6:56 IST
ಅಕ್ಷರ ಗಾತ್ರ

ಕಾರಟಗಿ: ತಾಲ್ಲೂಕಿನ ಚಳ್ಳೂರಕ್ಯಾಂಪ್‌ನ ರಸ್ತೆಗೆ ಡಾಂಬರೀಕರಣ ಮಾಡಿಸಿ ಎಂದು ಆಗ್ರಹಿಸಿದರೂ ಕಿವಿಗೊಡದೆ ಇದ್ದ ಹಿಂದಿನ ಶಾಸಕ ಬಸವರಾಜ ದಢೇಸೂಗೂರ ಅವರನ್ನು ಕೆಸರುಗದ್ದೆಯಂತಾದ ರಸ್ತೆಯಲ್ಲಿ ಕಿಲೊ ಮೀಟರ್‌ ಗಟ್ಟಲೇ ನಡೆಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ನಡೆದು ವರ್ಷವೇ ಕಳೆದರೂ ರಸ್ತೆಯು ಇಂದಿಗೂ ರಸ್ತೆ ಮಾತ್ರ ಅಭಿವೃದ್ಧಿ ಕಂಡಿಲ್ಲ.

ನದಿ ಪಾತ್ರದ ಸಿದ್ದಾಪುರದಿಂದ ಉಳೇನೂರ, ಬೆನ್ನೂರ, ಕಕ್ಕರಗೋಳ ಮಾರ್ಗವಾಗಿ ನಂದಿಹಳ್ಳಿವರೆಗಿನ ರಸ್ತೆ ಅಭಿವೃದ್ದಿಗೆ ಆಗ್ರಹಿಸಿ ನೂರಾರು ಯುವಕರು ಬಸ್‌ ತಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರಸ್ತೆಯನ್ನು ಕೆಲವೆಡೆ ಅಭಿವೃದ್ಧಿಪಡಿಸಿದ್ದರೆ, ಇತರೆಡೆ ಮುರಂ ಹಾಕಿ ಸಮತಟ್ಟು ಮಾಡಲಾಗಿದೆ.

ಗ್ರಾಮೀಣ ಪ್ರದೇಶದ ಬೇವಿನಾಳ, ಮೈಲಾಪುರ, ಪನ್ನಾಪುರ, ಬಸವಣ್ಣಕ್ಯಾಂಪ್‌ ರಸ್ತೆಗಳನ್ನು ಆಗಾಗ ನಿರ್ಮಿಸಲಾಗುತ್ತಿದೆಯಾದರೂ ಗುಣಮಟ್ಟವಿಲ್ಲದೇ ಮತ್ತೇ ದುರಸ್ತಿಗೆ ಬಾಯ್ದೆರೆದು ಕಾಯುತ್ತಿವೆ. ಮರ್ಲಾನಹಳ್ಳಿಯಿಂದ ಹುಳ್ಕೀಹಾಳ ಮಾರ್ಗದಲ್ಲಿ ವಿಶಾಲವಾದ ರಸ್ತೆಗಳನ್ನು ದುರಸ್ತಿ ಮಾಡಲಾಗಿದೆ. ಪಟ್ಟಣದಿಂದ ಚಳ್ಳೂರಕ್ಯಾಂಪ್‌, ಚಳ್ಳೂರ, ಹಗೇದಾಳ, ದುಂಡಿಕ್ಯಾಂಪ್‌ ರಸ್ತೆಗಳು ಹುಬ್ಬೇರಿಸುವಂತಿವೆ. ಪಟ್ಟಣದಿಂದ ಚಳ್ಳೂರಕ್ಯಾಂಪ್‌ನ ಆರಂಭದವರೆಗೆ ಡಾಂಬರೀಕರಣ ಮಾಡಿ ವರ್ಷ ಕಳೆದಿಲ್ಲ. ಆಗಲೇ ಅಲ್ಲಲ್ಲಿ ಡಾಂಬರ್‌ ಕಿತ್ತು ಬಂದಿದೆ.

ಚಳ್ಳೂರಕ್ಯಾಂಪ್‌ನಿಂದ ಗಂಗಾವತಿ ತಾಲ್ಲೂಕಿನ ಗಡಿವರೆಗೆ ಎತ್ತ ಹೊರಳಿದರೂ ತಗ್ಗುದಿನ್ನೆಗಳನ್ನು ದಾಟಿಯೇ ಸಾಗಬೇಕು. ರಾತ್ರಿ ವೇಳೆಯಲ್ಲಿ ಸ್ವಗ್ರಾಮ ತಲುಪಲು ಹರಸಾಹಸ ಮಾಡಿ ತಲುಪಬೇಕು. ಸ್ವಲ್ಪ ನಿಯಂತ್ರಣ ತಪ್ಪಿದರೆ ಸಾಕು, ಗಾಯಗೊಂಡು ಆಸ್ಪತ್ರೆಗೆ ಸೇರಬೇಕಾಗುತ್ತದೆ.

ಸಾರಿಗೆ ಸಂಸ್ಥೆ ಜನರ ನಿರೀಕ್ಷೆಗೆ ತಕ್ಕಂತೆ ಬಸ್‌ ಓಡಿಸುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದೇ ಕಾರಣದಿಂದ ಜನರು, ವಿದ್ಯಾರ್ಥಿಗಳಿಗೆ ಖಾಸಗಿ ವಾಹನಗಳೇ ಆಸರೆ.  ವೈಯಕ್ತಿಕ ವಾಹಗಳಿದ್ದವರೇ ತಮ್ಮ ಮಕ್ಕಳನ್ನು ಶಾಲಾ, ಕಾಲೇಜಿಗೆ ಕರೆದುಕೊಂಡು ಹೋಗಿ ವಾಪಸ್‌ ಕರೆತರಬೇಕಿದೆ. ಇಂತಹ ಪರಿಸ್ಥಿತಿ ಯಾವ ಕಾಲಕ್ಕೆ ತಪ್ಪಲಿದೆ ಎಂಬುದು ಕೆಲವರ ಪ್ರಶ್ನೆಯಾಗಿದೆ. 

‘ಚಳ್ಳೂರಕ್ಯಾಂಪ್‌ಗೆ ಬರುವುದು ಒಂದೇ ಬಸ್‌. ಅದನ್ನು ಕಾಯುತ್ತ ನಿಂತರೆ ಶಾಲೆಯ ಸಮಯವಾಗುತ್ತದೆ. ಹಾಗಾಗಿ ಕಾಲ್ನಡಿಗೆಯಲ್ಲಿ ಹೊರಟಿದ್ದೇವೆ. ಯಾರು ಗೆದ್ದರೂ– ಬಿದ್ದರೂ ನಮ್ಮ ಗೋಳು ಕೇಳುವವರು ಯಾರಿಲ್ಲ’ ಎಂದು  ಹಗೇದಾಳ ಶಾಲೆಗೆ ನಡೆದುಕೊಂಡೆ ಹೊರಟಿದ್ದ ವಿದ್ಯಾರ್ಥಿನಿಯರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಜನಪ್ರತಿನಿಧಿಯೊಬ್ಬರನ್ನು ಕೆಸರಿನ ರಸ್ತೆಯಲ್ಲೇ ನಡೆಸಿದ್ದರೂ ರಸ್ತೆ ಅಭಿವೃದ್ಧಿಯಾಗಿಲ್ಲ. ಈಗಿನವರಿಗೂ ಇದೇ ಗತಿ  ಬರುವ ಮೊದಲು ಎಚ್ಚೆತ್ತು ರಸ್ತೆಯನ್ನು ಅಭಿವೃದ್ದಿಪಡಿಸಬೇಕು. ಆಗಾಗ ಬಸ್‌ ಸಂಚರಿಸುವಂತೆ ಮಾಡಬೇಕು’ ಎಂದು ಚಳ್ಳೂರಕ್ಯಾಂಪ್‌ನ ನಿವಾಸಿಗಳಾದ ಜಿ.ಆನಂದರಾವ್‌, ಕೆ.ನರಸಿಂಹಮೂರ್ತಿ ಒತ್ತಾಯಿಸಿದರು.

ಕಾರಟಗಿ ತಾಲ್ಲೂಕಿನ ಬೂದಗುಂಪಾ–ಯರಡೋಣ ರಸ್ತೆ ಹದಗೆಟ್ಟಿರುವುದು
ಕಾರಟಗಿ ತಾಲ್ಲೂಕಿನ ಬೂದಗುಂಪಾ–ಯರಡೋಣ ರಸ್ತೆ ಹದಗೆಟ್ಟಿರುವುದು

‘ನಮ್ಮೂರ ರಸ್ತೆ ಸ್ಥಿತಿ ಉತ್ತಮವಾಗಿದೆ. ಆದರೆ ನಮ್ಮೂರಿಗೆ ಒಂದೇ ಬಸ್‌ ಎರಡು ಬಾರಿ ಮಾತ್ರ ಬರುತ್ತದೆ. ಕಾರಟಗಿ ಬಸ್‌ ನಿಲ್ದಾಣದ ನಾಮಫಲಕದಲ್ಲಿ ನಮ್ಮೂರ ಹೆಸರೇ ಇಲ್ಲ ಎನ್ನುತ್ತಾರೆ’ ಹುಳ್ಕಿಹಾಳ ಗ್ರಾಮದ ಮಲ್ಲಿಕಾರ್ಜುನ ವೈ. 

ಕಾರಟಗಿ ತಾಲ್ಲೂಕಿನ ಬೂದಗುಂಪಾ ಯರಡೋಣ ರಸ್ತೆಗಳು
ಕಾರಟಗಿ ತಾಲ್ಲೂಕಿನ ಬೂದಗುಂಪಾ ಯರಡೋಣ ರಸ್ತೆಗಳು

ಅನೇಕ ವರ್ಷಗಳ ಹೋರಾಟದ ಫಲವಾಗಿ ನದಿಪಾತ್ರದ ಚಂದ್ರಶೇಖರ ಬೆನ್ನೂರ ರಸ್ತೆ ಅಭಿವೃದ್ದಿಯಾಗಿದೆ. ಹತ್ತಾರು ಗ್ರಾಮಗಳಿದ್ದರೂ ಬರುವುದು ಒಂದೆರಡು ಬಸ್‌ಗಳು ಮಾತ್ರ. ಬಸ್‌ಗಳಲ್ಲಿಯೂ ಮೇಲೆ, ಬಸ್‌ನ ಹೊರಭಾಗಕ್ಕೆ ತೂಗಾಡುತ್ತಲೇ ಪ್ರಯಾಣಿಸಬೇಕಾದ ಪರಿಸ್ಥಿತಿ ಅನೇಕ ವರ್ಷಗಳಿಂದಲೂ ಇದೆ. ಸಮಸ್ಯೆಗೆ ಪರಿಹಾರ ದೊರಕಿಸಬೇಕಾದ ಜನಪ್ರತಿನಿಧಿಗಳು, ಸಾರಿಗೆ ಸಂಸ್ಥೆ ಅಧಿಕಾರಿಗಳು ಕಾರ್ಯನ್ಮುಖರಾಗಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾರಟಗಿ ತಾಲ್ಲೂಕಿನ ಚಳ್ಳೂರಕ್ಯಾಂಪ್‌ ಚಳ್ಳೂರ ಹಗೇದಾಳ ಗ್ರಾಮಕ್ಕೆ ತೆರಳುವ ರಸ್ತೆಗಳು ಹಾಳಾಗಿರುವುದು
ಕಾರಟಗಿ ತಾಲ್ಲೂಕಿನ ಚಳ್ಳೂರಕ್ಯಾಂಪ್‌ ಚಳ್ಳೂರ ಹಗೇದಾಳ ಗ್ರಾಮಕ್ಕೆ ತೆರಳುವ ರಸ್ತೆಗಳು ಹಾಳಾಗಿರುವುದು

‘ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಬಸ್‌ ಸಂಚರಿಸುತ್ತಿವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಬೆಳಿಗ್ಗೆ ಹಾಗೂ ಸಂಜೆ ವೇಳೆ ಬಸ್‌ ಸಂಚರಿಸುತ್ತಿವೆ.ಸಿಬ್ಬಂದಿ ಕೊರತೆ ಮತ್ತಿತರ ಸಮಸ್ಯೆಯ ನಡುವೆಯೂ ಬಸ್‌ಗಳನ್ನು ಓಡಿಸುತ್ತಿದ್ದೇವೆ’ ಎಂದು ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ವ್ಯವಸ್ಥಾಪಕ ರಾಜಶೇಖರ ಅಣ್ಣಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿ.ಆನಂದರಾವ್ ಚಳ್ಳೂರಕ್ಯಾಂಪ್‌
ಜಿ.ಆನಂದರಾವ್ ಚಳ್ಳೂರಕ್ಯಾಂಪ್‌
ನಮ್ಮ ಕ್ಯಾಂಪ್‌ ಮಾರ್ಗವಾಗಿ ಅನೇಕ ಗ್ರಾಮಗಳಿಗೆ ತೆರಳಬೇಕು. ಆದರೆ ಮೃತ್ಯುಕೂಪಗಳೇ ರಸ್ತೆಯುದ್ದಕ್ಕೂ ಇವೆ. ಜನರನ್ನು ಜನಪ್ರತಿನಿಧಿಗಳಲ್ಲ ದೇವರೇ ಕಾಪಾಡಬೇಕು. ರಸ್ತೆ ಅಭಿವೃದ್ದಿಯಾಗಲು ಇನ್ನಾದರೂ ಗಮನಹರಿಸಬೇಕು.
- ಜಿ. ಆನಂದರಾವ್ ಚಳ್ಳೂರಕ್ಯಾಂಪ್‌ ಪ್ರಮುಖ.
ಕೆ. ನರಸಿಂಹಮೂರ್ತಿ ಚಳ್ಳೂಕ್ಯಾಂಪ್‌
ಕೆ. ನರಸಿಂಹಮೂರ್ತಿ ಚಳ್ಳೂಕ್ಯಾಂಪ್‌
ರಸ್ತೆ ಅಭಿವೃದ್ದಿ ಮಾಡಿ ಎಂದು ಗೋಗರೆಯಬೇಕೇ? ಇದೇ ರಸ್ತೆ ಮಾರ್ಗವಾಗಿ ಸಂಚರಿಸಿದ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಹೇಗೆ ವಾಹನಗಳ ಸಂಚರಿಸುತ್ತವೆ ಎಂಬುದನ್ನು ಮನಗಾಣಬೇಕಿದೆ.
ಕೆ.ನರಸಿಂಹಮೂರ್ತಿ ಚಳ್ಳೂರಕ್ಯಾಂಪ್‌ನ ಹಿರಿಯ
ಇರುವ ವ್ಯವಸ್ಥೆಯಲ್ಲೇ ತಾಲ್ಲೂಕಿನಾದ್ಯಂತ ಬಸ್‌ ಓಡಿಸಲಾಗುತ್ತಿದೆ. ಬೇಡಿಕೆ ಬಂದ ಗ್ರಾಮಗಳಿಗೂ ಬಸ್‌ ಆರಂಭಿಸಿದ್ದೇವೆ. ಬಸ್‌ ಹಾಗೂ ಸಿಬ್ಬಂದಿ ಹೆಚ್ಚಳದ ಬಳಿಕ ಜನರಿಗೆ ಅಗತ್ಯವಿರುವಷ್ಟು ಬಸ್‌ ಓಡಿಸಲು ಸಿದ್ದ.
ರಾಜಶೇಖರ ಅಣ್ಣಿಗೇರಿ ಘಟಕ ವ್ಯವಸ್ಥಾಪಕ ಗಂಗಾವತಿ ಬಸ್‌ ಡಿಪೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT