ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ಸಾಣಾಪುರ ಕೆರೆ: ಹಸಿರು ಬಣ್ಣಕ್ಕೆ ತಿರುಗಿದ ನೀರು

ಬಳಕೆ ಮಾಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳನ್ನು ಅಂಟಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿ
Published 6 ಜುಲೈ 2023, 6:25 IST
Last Updated 6 ಜುಲೈ 2023, 6:25 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿ ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಇದರಿಂದ ಜನರಿಗೆ ರೋಗ ಭೀತಿ ಎದುರಾಗಿದೆ.

ಈ ಕೆರೆ ಸಾಣಾಪುರ, ಆನೆಗೊಂದಿ, ರಾಂಪುರ, ಮಲ್ಲಾಪುರ ಹಾಗೂ ಸಂಗಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಿಗೆ ರಾಜೀವ್‌ಗಾಂಧಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರೊದಗಿಸುತ್ತದೆ. ಅಲ್ಲದೆ,  ಒಂದು ಸಾವಿರ ಎಕರೆ ಭೂಮಿಗೆ ನೀರುಣಿಸುತ್ತದೆ.

ಈ ಕೆರೆಗೆ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ಮೂಲಕ ನೀರು ಹರಿಸಲಾಗಿತ್ತು. ಈ ಕೆರೆಯಿಂದ ರಾಯಚೂರು ಜಿಲ್ಲೆಗೆ ಕಾಲುವೆ ಮೂಲಕ ನೀರು ಹರಿದು ಹೋಗಲಿದೆ. ಈಚೆಗೆ ಕುಡಿಯುವ ಉದ್ದೇಶಕ್ಕೆ ಇಲ್ಲಿಂದ ರಾಯಚೂರು ಜಿಲ್ಲೆಗೆ ನೀರು ಹರಿಸಲಾಗಿತ್ತು.

ಈ ವೇಳೆ ಸಾಣಾಪುರ ಕೆರೆ ಅರ್ಧದಷ್ಟು ಭರ್ತಿಯಾಗಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೆರೆ ದಂಡೆ ಬಳಿ ಹಸಿರು ಬಣ್ಣದ ರಾಸಾಯನಿಕ ಸಂಗ್ರಹವಾಗಿದೆ. ಇದನ್ನು ಗಮನಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಿಸಿದ್ದು, ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬಂದಿದೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಾಗಿ ಮಕ್ಕಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿದ್ದವು. ಆದ್ದರಿಂದ ಜಿಲ್ಲಾಡಳಿತ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಕುಡಿಯುವ ನೀರು ಪರೀಕ್ಷೆ ಮಾಡಿಸುವಂತೆ ನಿರ್ದೇಶನ ನೀಡಿತ್ತು.

ಅದರಂತೆ ಸಾಣಾಪುರ ಪಂಚಾಯಿತಿ ಅಧಿಕಾರಿಗಳು ಕೆರೆ, ನೀರು ಪೂರೈಸುವ ಟ್ಯಾಂಕ್, ಮಿನಿ ಟ್ಯಾಂಕ್‌ನಲ್ಲಿನ ನೀರಿನ ಗುಣಮಟ್ಟವನ್ನು ಎರಡು ದಿನಗಳಿಗೊಮ್ಮೆ ಪರೀಕ್ಷೆ ಮಾಡಿಸುತ್ತಿದ್ದು, ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಬರುತ್ತಿದೆ.

ಸಾಣಾಪುರ ಗ್ರಾ.ಪಂ ಸಿಬ್ಬಂದಿ ಎಚ್ಚೆತ್ತು ವಾಟರ್ ಟ್ಯಾಂಕ್, ಸಾರ್ವಜನಿಕ ಸ್ಥಳ, ಟೀ ಸ್ಟಾಲ್, ಬಸ್ ನಿಲ್ದಾಣಗಳಲ್ಲಿ ಸಾಣಾಪುರ ಕೆರೆ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ಕರಪತ್ರ ಅಂಟಿಸಿ ಜಾಗೃತಿ ಮೂಡಿಸಿದ್ದಾರೆ. ಆದರೂ ಕೆಲವರು ಇನ್ನೂ ಕೆರೆ ನೀರು ಬಳಸುತ್ತಿದ್ದಾರೆ.

ಸಾಣಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕೆಲ ಕೊಳವೆಬಾವಿಗಳ ಮೂಲಕ ಕುಡಿಯಲು ನೀರು ಹರಿಸಲಾಗುತ್ತಿದೆ. ಒಟ್ಟು ಐದು ನೀ ರು ಶುದ್ಧೀಕರಣ ಘಟಕಗಳಿವೆ. ಅವುಗಳಲ್ಲಿ ಒಂದು ಮಾತ್ರ ಕೆಲಸ ಮಾಡುತ್ತಿದೆ. ಜೆಜೆಎಂ ಕಾಮಗಾರಿಯ ನಳಗಳಿಗು ಸಹ ಕೆರೆ ನೀರು ಪೂರೈಸಬೇಕಿದ್ದು, ನೀರು ಹರಿಸಿರುವ ಕಾರಣ ಸ್ಥಗಿತ ಮಾಡಲಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೊಳವೆಬಾವಿ ನೀರು ಶುದ್ಧೀಕರಿಸುವುದರ ಜತೆಗೆ ಹಸಿರು ಬಣ್ಣಕ್ಕೆ ತಿರುಗಿದ ನೀರಿನ ಬಳಕೆಯಿಂದ ಆಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT