ಕುಷ್ಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಕಲಕೇರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅವಘಡದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಸೊಲ್ಲಾಪುರದ ಜಯಶ್ರೀ ಕಾಂಬಳೆ (25), ಚಾಲಕ ರಾಘವೇಂದ್ರ ಕಾಂಬಳೆ (28), ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ನಂದ್ರಾಳ ಗ್ರಾಮದ ಖಾಜಪ್ಪ ಬನಸೋಡೆ (36), ಶಿರನಾಳದ ಅಕ್ಷಯ ಶಿವಶರಣ (22), ರಾಕಿ (4) ಮತ್ತು ರಶ್ಮಿಕಾ (2) ಮೃತಪಟ್ಟವರು.
ಜಯಶ್ರೀ ಗೃಹಿಣಿಯಾಗಿದ್ದರು. ರಾಘವೇಂದ್ರ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ಖಾಜಪ್ಪ ಮತ್ತು ಅಕ್ಷಯ ಕೂಲಿ ಕೆಲಸ ಮಾಡುತ್ತಿದ್ದರು. ತಮಿಳುನಾಡಿನ ಲಾರಿ ಗುಜರಾತ್ ಕಡೆಗೆ ತೆರಳುತ್ತಿತ್ತು. ಕಾರು ವಿಜಯಪುರದಿಂದ ಬೆಂಗಳೂರು ಕಡೆಗೆ ತೆರಳುವಾಗ ಅಪಘಾತ ನಡೆದಿದೆ.
‘ವೇಗವಾಗಿ ಬರುತ್ತಿದ್ದ ಕಾರಿನ ಟಯರ್ ಸಿಡಿದು ರಸ್ತೆ ವಿಭಜಕ ದಾಟಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.