ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಆಮೆಗತಿಯಲ್ಲಿ ಸಾಗುತ್ತಿರುವ ರೈಲು ನಿಲ್ದಾಣದ ಕಾಮಗಾರಿ

ಮತದಾನಕ್ಕೆ ಹೋದ ಕಾರ್ಮಿಕರು ಮರಳಿ ಬಂದಿಲ್ಲ: ಕಾಮಗಾರಿಗೆ ಮಳೆಗಾಲವೂ ಅಡ್ಡಿ
Published 28 ಮೇ 2024, 5:24 IST
Last Updated 28 ಮೇ 2024, 5:24 IST
ಅಕ್ಷರ ಗಾತ್ರ

ಕುಷ್ಟಗಿ: ಗದಗ- ವಾಡಿ ನೂತನ ರೈಲ್ವೆ ಮಾರ್ಗದ ಕಾಮಗಾರಿ ಮೊದಲು ನಿರ್ಧರಿಸಿದಂತೆ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿದ್ದರೆ ಈ ವೇಳೆಗೆ ಈ ಭಾಗದ ಜನರಿಗೆ ರೈಲು ಹಳಿಯ ಮೇಲೆ ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಪ್ರಯಾಣಿಸುವ ಭಾಗ್ಯ ದೊರಕುತ್ತಿತ್ತು. ಆದರೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಕನಿಷ್ಠ ಐದಾರು ತಿಂಗಳವರೆಗೂ ಇಲ್ಲಿಯ ಪ್ರಯಾಣಿಕರಿಗೆ ಅಂಥ ಅವಕಾಶ ಲಭ್ಯವಾಗಲಿಕ್ಕಿಲ್ಲ.

ಹೌದು, ಬೋಗಿಗಳ ಸಹಿತ ರೈಲು ಎಂಜಿನ್ ಪಟ್ಟಣದವರೆಗೆ ಬಂದು ಹೋಗುವಷ್ಟರ ಮಟ್ಟಿಗೆ ರೈಲ್ವೆ ನಿಲ್ದಾಣ ಸಿದ್ಧಗೊಂಡಿದ್ದು ಮಾರ್ಗದ ಇತರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೇತುವೆಗಳು, ಸಿಗ್ನಲ್‌ ವ್ಯವಸ್ಥೆ, ಕೊಪ್ಪಳ ರಾಜ್ಯ ಹೆದ್ದಾರಿಗೆ ಅಡ್ಡಲಾಗಿರುವ ಲೆವಲ್‌ ಕ್ರಾಸಿಂಗ್‌ಗೆ ಸೇರಿದ ಸಿವಿಲ್‌, ಎಲೆಕ್ಟ್ರಿಕಲ್‌ ಮತ್ತಿತರೆ ಅಲ್ಪಸ್ವಲ್ಪ ಕೆಲಸವಷ್ಟೇ ಬಾಕಿ ಉಳಿದಿದೆ. ಸಿಗ್ನಲ್‌ ವ್ಯವಸ್ಥೆಗೆ ಸೇರಿದ ಕೇಬಲ್‌ ಅಳವಡಿಸುವ ಕೆಲಸ ಅಂತಿಮ ಹಂತ ತಲುಪಿದೆ.

ಆದರೆ ನಿಲ್ದಾಣದ ಕಾಮಗಾರಿ ಮಾತ್ರ ಕುಂಟುತ್ತ ಸಾಗಿದ್ದು ಈ ಕಾರಣಕ್ಕೆ ಮೂರು ಹಂತದಲ್ಲಿನ ರೈಲ್ವೆ ಎಂಜಿನ್ ಪ್ರಾಯೋಗಿಕ ಸಂಚಾರ ಪರೀಕ್ಷೆ ಕೆಲಸವೂ ನಡೆದಿಲ್ಲ ಎಂಬುದು ಗೊತ್ತಾಗಿದೆ. ನಿಲ್ದಾಣದಲ್ಲಿ ಮೂರು ಮಾರ್ಗದ ಹಳಿ ಜೋಡಿಸಲಾಗಿದ್ದು ಕಾಮಗಾರಿ ಮುಗಿದಿದೆ. ಪ್ಲಾಟ್‌ಫಾರ್ಮ್‌ಗೆ ಪೇವರ್ಸ್ ಅಳವಡಿಸಲಾಗಿದೆ. ಪ್ರಯಾಣಿಕರು ತಂಗುವ ಸ್ಥಳದ ಛಾವಣಿ ಕೆಲಸ ಅರ್ಧಕ್ಕೆ ನಿಂತಿದೆ. ಕುಡಿಯುವ ನೀರು ಪೂರೈಕೆ ಮತ್ತಿತರೆ ಅಗತ್ಯ ಸೌಲಭ್ಯಗಳ ಕೆಲಸ ಇನ್ನೂ ಅಪೂರ್ಣ ಸ್ಥಿತಿಯಲ್ಲಿರುವುದು ಕಂಡುಬಂದಿತು.

ಎಲ್ಲಕ್ಕಿಂತ ನಿಲ್ದಾಣ ವ್ಯವಸ್ಥೆಯನ್ನು ನಿಯಂತ್ರಿಸುವ ಮುಖ್ಯಕಟ್ಟಡದ ಕೆಲಸವೇ ಅಪೂರ್ಣ ಸ್ಥಿತಿಯಲ್ಲಿದೆ. ರ್‍ಯಾಂಪ್, ಪ್ರಯಾಣಿಕರು ತಂಗುವ ಕೊಠಡಿ, ಸಂಚಾರ ನಿಯಂತ್ರಣ ಕೊಠಡಿ, ಉಪಕರಣಗಳಿರುವ ಕೊಠಡಿಗಳು, ಟಿಕೆಟ್‌ ಕೌಂಟರ್‌ಗಳ ನಿರ್ಮಾಣದ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೊಪ್ಪಳ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ, ಸ್ಟೇಷನ್‌ ಮಾಸ್ಟರ್ ಮತ್ತು ಕ್ರಾಸಿಂಗ್ ಗೇಟ್‌ ಅಪರೇಟರ್‌ ಮಧ್ಯೆ ಸಂರ್ಪಕ ಹೊಂದುವ ಇಂಟರ್‌ಲಾಕ್ಡ್‌ ಗೇಟ್ ಸಿಗ್ನಲ್ ವ್ಯವಸ್ಥೆಯನ್ನು ಒಳಗೊಂಡಿರುವ ನಿಯಂತ್ರಣ ಕೊಠಡಿ ಕಾಮಗಾರಿಯೂ ಸ್ಥಗಿತಗೊಂಡಿದೆ. ಸೇತುವೆಗಳ ಅಕ್ಕಪಕ್ಕದಲ್ಲಿನ ಕಲ್ಲು ಜೋಡಣೆ (ಪಿಚ್ಚಿಂಗ್) ಇತರೆ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ.

ಕಾರ್ಮಿಕರ ಸಮಸ್ಯೆ: ರೈಲ್ವೆ ಇಲಾಖೆ ಯೋಜನೆಗಳಿಗೆ ಅನುದಾನದ ಕೊರತೆ ಇರುವುದಿಲ್ಲ. ಆದರೆ ಕೆಲಸಗಾರರ ಅಭಾವವೇ ದೊಡ್ಡ ಸಮಸ್ಯೆಯಾಗಿದೆ. ಲೋಕಸಭೆ ಚುನಾವಣೆ, ಮತದಾನಕ್ಕೆ, ಜಾತ್ರೆ, ಮದುವೆ, ಹಬ್ಬಗಳಿಗೆ ಹೋದ ಕಾರ್ಮಿಕರು ಇನ್ನೂ ಕೆಲಸಕ್ಕೆ ಬಂದಿಲ್ಲ. ಅಗತ್ಯ ಸಂಖ್ಯೆಯಲ್ಲಿ ವಿವಿಧ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರು ಬಂದರೆ ಕೇವಲ ಎರಡು ತಿಂಗಳಲ್ಲಿ ಕೆಲಸ ಮುಗಿಯುತ್ತದೆ. ಆದರೆ ಈಗ ಮಳೆಗಾಲ ಬೇರೆ ಆರಂಭಗೊಂಡಿದ್ದು ಕೆಲಸಕ್ಕೆ ಮತ್ತಷ್ಟೂ ಅಡ್ಡಿಯಾಗಬಹುದು ಎಂದು ರೈಲ್ವೆ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ವಿವರಿಸಿದವು.

ಕಾರ್ಮಿಕರು ಕೆಲಸಕ್ಕೆ ಬಂದರೆ ಕೇವಲ ಎರಡು ತಿಂಗಳಲ್ಲಿಯೇ ಕೆಲಸ ಪೂರ್ಣಗೊಳ್ಳುತ್ತದೆ. ಏನೇ ಆದರೂ 3-4 ತಿಂಗಳಲ್ಲಿ ಈ ಭಾಗದ ಜನರ ರೈಲು ಪ್ರಯಾಣದ ಕನಸು ನನಸಾಗಲಿದೆ.
ಅಶೋಕ ಮುದಗೌಡರ ಎಇಇ ನೈಋತ್ಯ ರೈಲ್ವೆ
ಯಾರ ‘ಕೈ’ಯಿಂದ ಹಸಿರು ನಿಶಾನೆ
ರಾಜಕೀಯ ಒತ್ತಡದ ಕಾರಣಕ್ಕೆ ಕಳಪೆಯಾದರೂ ತರಾತುರಿಯಲ್ಲಿ ಕೆಲಸ ಕೈಗೊಂಡ ರೈಲ್ವೆ ಇಲಾಖೆ ಕಳೆದ ಮಾರ್ಚ್ 31ಕ್ಕೆ ರೈಲು ಸಂಚಾರದ ಉದ್ಘಾಟನೆ ನೆರವೇರಿಸಲು ಯೋಜಿಸಿತ್ತು. ಅಷ್ಟೇ ಅಲ್ಲ ರೈಲ್ವೆ ಮಾರ್ಗದ ನಿರ್ಮಾಣದ ಕಾಮಗಾರಿಯ ಅನುಷ್ಠಾನದಲ್ಲಿ ಮುತುವರ್ಜಿ ವಹಿಸಿದ್ದ ಆಗಿನ ಸಂಸದ ಸಂಗಣ್ಣ ಕರಡಿ ಅವರಿಗೆ ‘ಕುಷ್ಟಗಿವರೆಗೆ ರೈಲು ಓಡಿಸಿದ್ದೇವೆ’ ಎಂಬ ಸಾಧನೆ ವಿಚಾರವನ್ನು ಚುನಾವಣೆಯಲ್ಲಿ ಮತದಾರರ ಮುಂದಿಡುವ ಬಲವಾದ ಆಲೋಚನೆಯೂ ಇತ್ತು. ಆದರೆ ರೈಲು ಓಡಲಿಲ್ಲ ಮತ್ತು ಸಂಗಣ್ಣ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲೂ ಸಾಧ್ಯವಾಗದಿರುವುದು ಬೇರೆ ಮಾತು. ಚುನಾವಣೆಗೂ ಮೊದಲು ತಾವೇ ರೈಲು ಮಾರ್ಗ ಉದ್ಘಾಟಿಸುವುದಾಗಿ ಹೇಳಿದ್ದ ಸಂಗಣ್ಣ ನಂತರ ಪ್ರಚಾರದ ವೇಳೆ ‘ನಮ್ಮ ನೂತನ ಸಂಸದ ರಾಜಶೇಖರ ಹಿಟ್ನಾಳ ಅವರೊಂದಿಗೆ ಸೇರಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುತ್ತೇವೆ’ ಎಂದೇ ಹೇಳಿದ್ದರು. ಯಾರು ಹಸಿರು ನಿಶಾನೆ ತೋರಿಸುತ್ತಾರೆ ಎಂಬುದು ಇಲ್ಲಿಯ ಜನರಲ್ಲಿಯೂ ಕುತೂಹಲ ಇದ್ದು ಅದಕ್ಕೆ ಇನ್ನೂ ಒಂದು ವಾರ ಕಾಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT