ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮಣ್ಣು, ನೀರು ಪರೀಕ್ಷೆಗೆ ಸುಸಜ್ಜಿತ ಪ್ರಯೋಗಾಲಯ

ಗಿಣಗೇರಿ ಬಳಿ ₹ 50 ಲಕ್ಷ ನಿರ್ಮಾಣ: ಉದ್ಘಾಟನೆ ಶೀಘ್ರ ?
Last Updated 7 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಗಿಣಗೇರಾದಲ್ಲಿ ಅತ್ಯಾಧುನಿಕ ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯ ತಲೆ ಎತ್ತಿದ್ದು, ಉದ್ಘಾಟನೆಗೂ ಮುಂಚೆಯೇ ರೈತರ ಗಮನ ಸೆಳೆದಿದೆ.

ಜಿಲ್ಲೆಯ ಗಂಗಾವತಿ ಮತ್ತು ಯಲಬುರ್ಗಾ ಮಣ್ಣು ಮತ್ತು ನೀರು ವಿಶ್ಲೇಷಣಾ ಪ್ರಯೋಗಾಲಯಗಳಿವೆ. ಆದರೆ ಅವುಗಳಲ್ಲಿ ಹೊಸ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವಿಲ್ಲ. ಹಾಗಾಗಿ ಹಳೇ ಪದ್ಧತಿಯಲ್ಲಿಯೇ ಪರೀಕ್ಷೆ ಮಾಡಲಾಗುತ್ತಿದೆ. ಆದರೆ ಗಿಣಿಗೇರಾದಲ್ಲಿರುವ ಪ್ರಯೋಗಾಲಯ ಹೈಟೆಕ್‌ ತಂತ್ರಜ್ಞಾನ ಹೊಂದಿದ್ದು, ರೈತರ ಸೇವೆಗೆ ಸಜ್ಜಾಗಿದೆ.

ಪ್ರಯೋಗಾಲಯದಲ್ಲಿ ನೀರಿನಲ್ಲಿರುವ ಲವಣಾಂಶ ಮತ್ತು ಸೋಡಿಯಮ್‌, ಬೈ ಕಾರ್ಬೋನೆಟ್ಸ್‌ ಅಥವಾ ಕ್ಲೋರೈಡ್‌ ಪ್ರಮಾಣ ಎಷ್ಟಿದೆ ಎನ್ನುವುದನ್ನು ಪರೀಕ್ಷೆಯ ಮೂಲಕ ತಿಳಿಸಲಾಗುತ್ತದೆ. ಇಲ್ಲಿ ನೀಡುವ ವರದಿಯಿಂದ ನೀರು ಮತ್ತು ಮಣ್ಣಿನಲ್ಲಿರುವ ಪೋಶಕಾಂಶಗಳನ್ನು ಕಂಡುಕೊಳ್ಳಬಹುದು.

ಅಲ್ಲದೇ ಮಣ್ಣಿನಲ್ಲಿರುವ ರಸಸಾರ, ಲವಣಾಂಶ, ಸಾವಯವ ಇಂಗಾಲ, ರಂಜಕ ಮತ್ತು ಪೋಟ್ಯಾಶ್‌ ಎಷ್ಟು ಪ್ರಮಾಣದಲ್ಲಿದೆ ಎನ್ನುವುದನ್ನು ಕೂಡಾ ಅರಿಯಬಹುದು. ಉತ್ತಮ ಇಳುವರಿ ಮತ್ತು ಆರೋಗ್ಯಯುತ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

'ಏಪ್ರಿಲ್‌ನಿಂದ ಈವರೆಗೆ 1,400 ಮಣ್ಣು ಮತ್ತು ನೀರು ಪರೀಕ್ಷೆ ಮಾಡಲಾಗಿದ್ದು,ಮಣ್ಣಿನಲ್ಲಿ ಮತ್ತು ನೀರಿನಲ್ಲಿರುವ ಪೋಷಕಾಂಶಗಳು ಗಮನಿಸಿ, ಪೋಷಕಾಂಶಗಳ ಕೊರತೆ ಇದ್ದರೆ, ಅವುಗಳನ್ನು ಯಾವ ರೀತಿಯಾಗಿ ಹೊಂದಾಣಿಕೆ ಮಾಡಬೇಕು. ಯಾವ ಗೊಬ್ಬರ ಮತ್ತು ರಾಸಾಯನಿಕವನ್ನು ಬಳಕೆ ಮಾಡಬೇಕು ಎನ್ನುವ ಕುರಿತು ಮಾಹಿತಿ ನೀಡಲಾಗುತ್ತದೆ. ಇದರಿಂದ ಹೆಚ್ಚು ಇಳುವರಿ ತೆಗೆಯಲು ರೈತರಿಗೆ ಸಹಕಾರಿ ಆಗುತ್ತದೆ. ಅಲ್ಲದೇ ಬೆಳೆಗಳಿಗೆ ಬರುವ ರೋಗಗಳನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಈ ಭಾಗದ ಜನರು ಮಣ್ಣು ಮತ್ತು ನೀರು ಪರೀಕ್ಷೆಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ' ಎನ್ನುತ್ತಾರೆ ತೋಟಗಾರಿಕಾ ಉಪನಿರ್ದೇಶಕ ಕೃಷ್ಣ ಉಕ್ಕುಂದ.

ಮಣ್ಣು, ನೀರು ಮತ್ತು ಎಲೆಗಳಲ್ಲಿ ಪೋಷಕಾಂಶಗಳ ಕೊರತೆ ಇದ್ದರೆ ಅವುಗಳಲ್ಲಿ ಪೋಷಕಾಂಶವೃದ್ಧಿಸುವುದುಹೇಗೆ ಎನ್ನುವ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತದೆ. ಈಗಾಗಲೇ ಐದಾರು ಕಾರ್ಯಾಗಾರಗಳು ನಡೆದಿದ್ದು, ಈ ಮೂಲಕ ನೂರಾರು ರೈತರು ಈಗಾಗಲೇ ತರಬೇತಿ ಪಡೆದುಕೊಂಡಿದ್ದಾರೆ.

ಸುಸಜ್ಜಿತವಾಗಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳಿಂದ ನಿರ್ಮಾಣವಾದ ಪ್ರಯೋಗಾಲಯವು ಹಲವಾರು ಕಾರಣಗಳಿಂದ ಈವರೆಗೂ ಉದ್ಘಾಟನೆ ಆಗಿಲ್ಲ. ಹಾಗಾಗಿ ಬೇಗ ಉದ್ಘಾಟನೆಯಾಗಬೇಕು. ಈ ಮೂಲಕ ಎಲ್ಲ ರೈತರಿಗೆ ಮಾಹಿತಿ ದೊರೆತು, ಎಲ್ಲ ರೈತರು ಈ ಪ್ರಯೋಗಾಲಯದ ಉಪಯೋಗ ಪಡೆಯಬೇಕಾದ ಅನಿವಾರ್ಯತೆ ಇದೆ.

ಅಂಕಿ-ಅಂಶ
₹ 50 ಲಕ್ಷನಿರ್ಮಾಣ ವೆಚ್ಚ
₹ 100ಎಲೆ ಪರೀಕ್ಷೆಗೆ
₹ 75ಮಣ್ಣು ಪರೀಕ್ಷೆ
₹ 75ನೀರು ಪರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT