ಭಾನುವಾರ, ಜನವರಿ 26, 2020
21 °C
ರೈತರಿಂದ ಉತ್ತಮ ಸ್ಪಂದನೆ: ಬಂಜರು ಭೂಮಿಗೆ ಆದ್ಯತೆ

ಸೋಲಾರ್ ಪಾರ್ಕ್‌ ನಿರ್ಮಾಣಕ್ಕೆ ಸಿದ್ಧತೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಸೋಲಾರ್ ಎನರ್ಜಿಗೆ ಇನ್ನಷ್ಟು ಬಲ ತುಂಬಲು ಜಿಲ್ಲೆಯ 12.500 ಎಕರೆ ಭೂಮಿಯಲ್ಲಿ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಕೇಂದ್ರ ಸರ್ಕಾರದ ಸೋಲಾರ್ ಎನರ್ಜಿ ಕಾರ್ಪೋರೇಶನ್ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧಿಕಾರಿಗಳು ಜಿಲ್ಲೆಯ ಅಳವಂಡಿ ಹೋಬಳಿಯ ಕವಲೂರ, ಯಲಬುರ್ಗಾ ತಾಲ್ಲೂಕಿನ ಗುಡಗೇರಿ, ಬನ್ನಿಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೃಹತ್ ಸೋಲಾರ್ ಪಾರ್ಕ್‌ ನಿರ್ಮಾಣಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

'ಸೂರ್ಯನ ಶಕ್ತಿ ಪ್ರದರ್ಶನ' ಜಿಲ್ಲೆಯಲ್ಲಿಯೂ ಅಧಿಕ. ಆ ಸೂರ್ಯ ಶಕ್ತಿಯನ್ನು ಪಡೆಯಲು ಇಂಧನ ಇಲಾಖೆ ಯೋಜನೆ ರೂಪಿಸಿದೆ. ಜಿಲ್ಲಾಡಳಿತದ ಸಹಯೋಗದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಾಟ ನಡೆಸಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸುತ್ತಿದ್ದು, ಬಂಜರು ಭೂಮಿಗಳಿಗೆ ಆದ್ಯತೆ ನೀಡಬೇಕು ಎನ್ನುವುದೇ ಪ್ರಗತಿಪರ ರೈತರ ಒತ್ತಾಯವಾಗಿದೆ.

ಸತತ ಬರಗಾಲದಿಂದ ಕಂಗೆಟ್ಟಿರುವ ರೈತರು ಶೇರು ಜೋಳ ಬೆಳೆಯದಂತಹ ಸ್ಥಿತಿ ಜಿಲ್ಲೆಯಲ್ಲಿ ಇದೆ. ಪಾರ್ಕ್‌ಗೆ ಜಮೀನು ನೀಡಿದರೆ ಬಾಡಿಗೆ ಹಣದಿಂದ ಜೀವನವಾದರೂ ನಡೆದೀತು ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಿದ್ದಾರೆ. ಕೆಲವು ರೈತರು ಗೊಂದಲದಲ್ಲಿ ಇದ್ದಾರೆ. ಜಮೀನು ಗುತ್ತಿಗೆ ನೀಡಿದರೆ ಹಾಳು ಮಾಡುತ್ತಾರೆ. ಸ್ವಾಧೀನ ಪಡಿಸಿಕೊಂಡರೆ ಹೇಗೆ ಎಂಬ ಭಯವನ್ನು ಹೊರಹಾಕುತ್ತಾರೆ.

ಇದಕ್ಕೆ ಜಿಲ್ಲಾಡಳಿತ ಇಂಧನ ಇಲಾಖೆ ಹೊರಡಿಸಿದ ಪ್ರಕಟಣೆಯನ್ನು ವಿವಿಧ ಗ್ರಾಮಗಳಲ್ಲಿ ಬಿತ್ತರಿಸಿದೆ.

'ಫಲವತ್ತಾದ ಭೂಮಿಯಲ್ಲಿ ಸ್ಥಾಪನೆ ಮಾಡಬಾರದು. ಆಸಕ್ತ ಮತ್ತು ಅರ್ಜಿ ಸಲ್ಲಿಸಿದ ರೈತರ ಜಮೀನು ಮಾತ್ರ ಗುತ್ತಿಗೆ. ಅವಧಿ ಮುಗಿದ ನಂತರ ರೈತರಿಗೆ ಅವರ ಜಮೀನು ಮರಳಿಸುವುದು ಸೇರಿದಂತೆ ಎಲ್ಲ ದಾಖಲೆ ಪತ್ರಗಳನ್ನು ತಯಾರಿಸಿ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಬಾರದು' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಾರುತಿ ಎಂ.ಪಿ. ಹೇಳುತ್ತಾರೆ.

ವಿದ್ಯುತ್ ಕೊರತೆ ಹೆಚ್ಚಾಗಿರುವ ಜಿಲ್ಲೆಯ ಜನರಿಗೆ ಈ ಪಾರ್ಕ್‌ ಉಪಯೋಗವಾಗಲಿದೆ ಎಂಬ ಯೋಚನೆ ಕೂಡಾ ಇದೆ.. ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಕೆಪಿಟಿಸಿಎಲ್ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಅನುಕೂಲ ಕೂಡಾ ಇದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ಆಶಾಕಿರಣ ಮೂಡಿಸಿದೆ. 

ಬಂಜರು ಮತ್ತು ಒಣಭೂಮಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ಘಟಕಗಳು ಸ್ಥಾಪನೆಯಾದರೆ ದೇಶದ ಬೃಹತ್ ಸೋಲಾರ್ ಘಟಕಗಳ ಸಾಲಿನಲ್ಲಿ ನಿಲ್ಲುತ್ತವೆ. ಈ ಕುರಿತು ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿದ್ದು, ಇಲಾಖೆ ಮತ್ತು ಜಮೀನು ಮಾಲೀಕರ ಸಭೆಯ ನಂತರ ಬಾಡಿಗೆ ದರ ನಿಗದಿ ಮತ್ತು ವಿವಿಧ ವಿಷಯಗಳ ಚರ್ಚೆಯ ನಂತರ ಅಂತಿಮ ಹಂತದ ಅನುಷ್ಠಾನ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ.

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು