ಭಾನುವಾರ, ನವೆಂಬರ್ 28, 2021
19 °C
ಜಿಲ್ಲೆಯಲ್ಲಿ ಸೌರಶಕ್ತಿ ಬಳಕೆಗೆ ಇದೆ ವಿಪುಲ ಅವಕಾಶ; ಸೋಲಾರ್ ಘಟಕಗಳಿಗೆ ಜಮೀನು ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ಮನವಿ

ಪರ್ಯಾಯ ವಿದ್ಯುತ್‌: ಸೋಲಾರ್ ಬಳಕೆಯಲ್ಲಿ ಕಾಣದ ಪ್ರಗತಿ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕಲ್ಲಿದ್ದಲು ಕೊರತೆಯಿಂದ ರಾಯಚೂರಿನ ಥರ್ಮಲ್‌ ಶಾಖೋತ್ಪನ್ನ ಘಟಕ ಬಂದ್‌ ಆಗಿ ವಿದ್ಯುತ್‌ ಪರಿಸ್ಥಿತಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಹೊತ್ತಿನಲ್ಲಿಯೇ ಜಿಲ್ಲೆಯಲ್ಲಿ ಸೋಲಾರ್‌ ಹಬ್‌ ಮಾಡುವ ಮಾತು ಮತ್ತೊಮ್ಮೆ ಕೇಳಿ ಬಂದಿದೆ.

ಪರ್ಯಾಯ ಇಂಧನ ಮತ್ತು ವಿದ್ಯುತ್‌ಶ್ಚಕ್ತಿ ಬಳಕೆಗೆ ಕೇಂದ್ರ ಸರ್ಕಾರ ವ್ಯಾಪಕ ಉತ್ತೇಜನ ನೀಡುತ್ತಿದ್ದರೂ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಸೋಲಾರ್ ವಿದ್ಯುತ್‌ ಬಳಕೆಗೆ ಬಿಸಿಲು ನಾಡು ಎಂದೇ ಹೆಸರಾದ ಕೊಪ್ಪಳ ಜಿಲ್ಲೆಯಲ್ಲಿ ಹೇರಳ ಅವಕಾಶವಿದೆ. ಆದರೆ, ಕೇವಲ ಸಿಸ್ಕೋ ಅಂತಹ ಬೆರಳೆಣಿಕೆಯ ಕಂಪೆನಿಗಳು ಮಾತ್ರ ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ಕೆಪಿಟಿಸಿಎಲ್‌ ಹೊರೆ ಕಡಿಮೆ ಮಾಡಿವೆ.

ವಿದ್ಯುತ್‌ನ್ನು ಜಲ, ಕಲ್ಲಿದ್ದಲು, ಗಾಳಿ, ಬಿಸಿಲಿನ ಮೂಲಕ ಆವಿಷ್ಕಾರ ಮಾಡುತ್ತಾ ಬಂದಿದ್ದರೂ ಇನ್ನೂ ಹೆಚ್ಚು ಜಲ, ಕಲ್ಲಿದ್ದಲು ಮೂಲಗಳಿಂದ ತಯಾರಿಕೆಯಾಗುವ ಮೂಲಕ ಸೋಲಾರ್, ಪವನ ಯಂತ್ರಗಳ ಬಳಕೆ ಬಹಳಷ್ಟು ಕಡಿಮೆ ಆಗುತ್ತಾ ಬಂದಿದೆ. ಇದರಲ್ಲಿ ಸುಧಾರಿತ ತಂತ್ರಜ್ಞಾನ ದಿನದಿನಕ್ಕೆ ಬದಲಾಗುತ್ತಿರುವುದರಿಂದ ಬಹುತೇಕರು ಸೋಲಾರ್ ವಿದ್ಯುತ್‌ ಉತ್ಪಾದನೆಗೆ ಅವಕಾಶವಾಗುತ್ತಿಲ್ಲ.

ಸೋಲಾರ್ ವಿದ್ಯುತ್‌ಗೆ ಅವಕಾಶ: ಜಿಲ್ಲೆಯನ್ನು ಸೋಲಾರ್ ಪಾರ್ಕ್‌ ಮಾಡಬೇಕು ಎಂದು ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಅಳವಂಡಿ ಮತ್ತು ಬನ್ನಿಕೊಪ್ಪ ಹೋಬಳಿಯ ನೂರಾರು ಎಕರೆ ಜಮೀನಿನಲ್ಲಿ ಸೋಲಾರ್ ಪಾರ್ಕ್‌ ಸ್ಥಾಪನೆಗೆ ಉದ್ದೇಶಿಸಲಾಗಿತ್ತು. ಆದರೆ ಅಷ್ಟೊಂದು ಪ್ರಗತಿ ಕಾಣದಾಗಿದೆ. ಬೆಲೆ ಬಾಳುವ ಮತ್ತು ಉತ್ಕೃಷ್ಟ ಗುಣಮಟ್ಟದ ಜಮೀನುಗಳು ಇವು ಆಗಿದ್ದು, ರೈತರು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ. 

ಅಲ್ಲದೆ ಒತ್ತಾಯವಾಗಿ ಯಾರದೇ ರೈತರ ಜಮೀನಿನನಲ್ಲಿ ಸೋಲಾರ್ ಪಾರ್ಕ್‌ ಮಾಡುವಂತಿಲ್ಲ ಎಂಬ ನಿಯಮ ಇದೆ. 25, 50, 100 ವರ್ಷ ಗುತ್ತಿಗೆ ಪಡೆದು ಸೋಲಾರ್‌ ಪ್ಲ್ಯಾಂಟ್‌ ಹಾಕಬಹುದು. ಗುತ್ತಿಗೆ ಅವಧಿ ಮುಗಿದ ನಂತರ ರೈತರಿಗೆ ಜಮೀನು ಮರುಕಳಿಸಬೇಕು. ಉಳಿಮೆ ಮಾಡದೇ ಹಲವಾರು ವರ್ಷ ಜಮೀನು ಹಾಗೆ ಬಿಟ್ಟರೆ ಬರಡು ಆಗುವದಲ್ಲದೆ, ಅವುಗಳನ್ನು ಹದಗೊಳಿಸುವುದು ರೈತರಿಗೆ ದುಬಾರಿಯಾಗಿ ಪರಿಣಮಿಸುತ್ತಿರುವುದರಿಂದ ಸೋಲಾರ್ ಘಟಕ ಸ್ಥಾಪನೆ ಆಗುತ್ತಿಲ್ಲ.

ಇದರ ಬದಲಿಗೆ ಸರ್ಕಾರವೇ ಸಾವಿರಾರು ಹೆಕ್ಟೇರ್‌ ಬರಡು ಭೂಮಿ ಹೊಂದಿರುವ ಮತ್ತು ಕುರುಚಲು ಕಾಡುಗಳಿರುವ ಕುಷ್ಟಗಿ, ತಾವರಗೇರಾ, ಹನಸಾಗರ, ಕೊಪ್ಪಳದ ಇರಕಲ್ಲಗಡಾ ಹೋಬಳಿಗಳಲ್ಲಿ ಸೋಲಾರ್ ಪಾರ್ಕ್‌ ಸ್ಥಾಪನೆಗೆ ವಿಫುಲ ಅವಕಾಶವಿದೆ. ಅಲ್ಲದೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಜಲಾಶಯದ ಮೇಲೆ ಸೋಲಾರ್‌ ಫಲಕ ಅಳವಡಿಕೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡಲು ಯೋಜನೆ ರೂಪಿಸಿತ್ತು. ಇದರಿಂದ ವಿದ್ಯುತ್‌ ಪಡೆಯುವ ಜೊತೆಗೆ ಕಾಲುವೆಯ ನೀರು ಆವಿಯಾಗುವುದನ್ನು ತಡೆಯಬಹುದು ಎಂಬ ಲೆಕ್ಕಾಚಾರ ಕೂಡಾ ಹಾಕಿತ್ತು. ಆದರೆ ಆ ಯೋಜನೆ ಕೂಡಾ ಯಾವುದೇ ಅನುಷ್ಠಾನವಾಗಿಲ್ಲ.

ಜಿಲ್ಲಾಡಳಿತ ಭವನ, ಸರ್ಕಾರಿ ಕಟ್ಟಡಗಳು, ಉಗ್ರಾಣಗಳು, ಕಾರ್ಖಾನೆಗಳು ಇದ್ದರೂ ಬೆರಳೆಣಿಕೆ ಸಂಸ್ಥೆಯವರು ಮಾತ್ರ ಸೋಲಾರ್‌ ಫಲಕ ಅಳವಡಿಸಿಕೊಂಡು ತಮ್ಮ ಅಗತ್ಯಕ್ಕೆ ತಕ್ಕ ಹಾಗೆ ವಿದ್ಯುತ್ ಉತ್ಪಾದನೆ ಮಾಡುತ್ತಾ ಬಂದಿರುವುದು ಹೆಚ್ಚಿದ ಯೂನಿಟ್‌ ವಿದ್ಯುತ್‌ ಅನ್ನು ಕೆಪಿಟಿಸಿಎಲ್‌ಗೆ ಮಾರಾಟ ಮಾಡಿ ಲಾಭ ಗಳಿಸಿಕೊಂಡ ಕೆಲವು ಉಗ್ರಾಣಗಳು ಮಾಲೀಕರು ಜಿಲ್ಲೆಯಲ್ಲಿ ಇದ್ದಾರೆ.

ಸದ್ಯದ ಪರಿಸ್ಥಿತಿ: ಜಿಲ್ಲೆಯಲ್ಲಿ ಒಟ್ಟು ಖಾಸಗಿಯಾಗಿ 15ಕ್ಕೂ ಹೆಚ್ಚು ಸೋಲಾರ್ ಪ್ಲ್ಯಾಂಟ್‌ಗಳು ಇವೆ. ಕೊಪ್ಪಳ-2, ಯಲಬುರ್ಗಾ-4, ಕುಷ್ಟಗಿ 5, ಗಂಗಾವತಿ-4 ಇವೆ. ಸಿಸ್ಕೋ ಕಂಪೆನಿ ಮಾತ್ರ ಬೃಹತ್‌ ಪ್ರಮಾಣದಲ್ಲಿ ಘಟಕವನ್ನು ಸ್ಥಾಪಿಸಿದೆ. ‘ರೇಸ್‌ ಪವರ್‌ ಇನ್ಫಾ ಲಿಮಿಟೆಡ್‌ ಸೋಲಾರ್‌ ಪವರ್‌ ಗ್ರಿಡ್‌', ವೀಮಾ ಪವರ್ಸ್‌ ಸೇರಿದಂತೆ ಅನೇಕ ಸೋಲಾರ್ ಕಂಪೆನಿಗಳು ಸಾವಿರಾರು ಯೂನಿಟ್‌ ವಿದ್ಯುತ್ ಅನ್ನು ಉತ್ಪತ್ತಿ ಮಾಡುತ್ತಿವೆ.

ಜಿಲ್ಲೆಯಲ್ಲಿ ಸೋಲಾರ್‌ ಬಳಕೆಗೆ ವಿಫುಲ ಅವಕಾಶವಿದ್ದರೂ ಅದರ ಬಳಕೆ ಮಾಡುವಲ್ಲಿನ ಜ್ಞಾನ, ತಂತ್ರಜ್ಞಾನದ ಕೊರತೆ, ಪರಿಸರ ಸ್ನೇಹಿ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಆಸಕ್ತಿ ಕಡಿಮೆ ಎಂದೇ ಹೇಳಬಹುದು. 

12 ಸಾವಿರ ಎಕರೆಯಲ್ಲಿ ಪ್ಲ್ಯಾಂಟ್‌?

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ  ಸೋಲಾರ್ ಎನರ್ಜಿಗೆ ಇನ್ನಷ್ಟು ಬಲ ತುಂಬಲು ಜಿಲ್ಲೆಯ 12,500 ಎಕರೆ ಭೂಮಿಯಲ್ಲಿ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಕೇಂದ್ರ ಸರ್ಕಾರದ ಸೋಲಾರ್ ಎನರ್ಜಿ ಕಾರ್ಪೋರೇಶನ್ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧಿಕಾರಿಗಳು ಜಿಲ್ಲೆಯ ಅಳವಂಡಿ ಹೋಬಳಿಯ ಕವಲೂರ, ಯಲಬುರ್ಗಾ ತಾಲ್ಲೂಕಿನ ಗುಡಗೇರಿ, ಬನ್ನಿಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೃಹತ್ ಸೋಲಾರ್ ಪಾರ್ಕ್‌ ನಿರ್ಮಾ ಣಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

‘ಸೂರ್ಯನ ಶಕ್ತಿ ಪ್ರದರ್ಶನ’ ಜಿಲ್ಲೆಯಲ್ಲಿಯೂ ಅಧಿಕ. ಆ ಸೂರ್ಯ ಶಕ್ತಿಯನ್ನು ಪಡೆಯಲು ಇಂಧನ ಇಲಾಖೆ ಯೋಜನೆ ರೂಪಿಸಿದೆ. ಜಿಲ್ಲಾಡಳಿತದ ಸಹಯೋಗದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಾಟ ನಡೆಸಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸುತ್ತಿದ್ದು, ಬಂಜರು ಭೂಮಿಗಳಿಗೆ ಆದ್ಯತೆ ನೀಡಬೇಕು ಎನ್ನುವುದೇ ರೈತರ ಒತ್ತಾಯ.

ಹಿಂದುಳಿದ ಈ ಜಿಲ್ಲೆಯಲ್ಲಿ ಸ್ವಂತ ಜಮೀನಿನಲ್ಲಿ ಸೋಲಾರ್ ಘಟಕ ಆರಂಭಕ್ಕೆ ಯಾವುದೇ ತೊಂದರೆ ಇಲ್ಲ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ತಕ್ಷಣವೇ ಕಾರ್ಯಾರಂಭ ಮಾಡಬಹುದು. ಸೋಲಾರ್‌ ಪ್ಲ್ಯಾಂಟ್‌ಗಾಗಿ ಬ್ಯಾಂಕ್‌ಗಳು ಸಹಾಯಧನ ನೀಡುತ್ತಿದ್ದು, ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಘಟಕಗಳನ್ನು ಸ್ಥಾಪಿಸಬಹುದು. ಸೋಲಾರ್ ಪ್ಲ್ಯಾಂಟ್‌ಗಾಗಿ ಜಮೀನಿನ ಚಾಲ್ತಿ ಪಹಣಿ ಪತ್ರಿಕೆ, ಮ್ಯೂಟೇಶನ್, ಆಧಾರ್ ಕಾರ್ಡ್, ₹200 ಮೌಲ್ಯದ ವೈಯಕ್ತಿಕ ಬಾಂಡ್ ನೀಡಿದರೆ ಘಟಕ ಆರಂಭಕ್ಕೆ ಅನುಮೋದನೆ ಶೀಘ್ರ ದೊರೆಯಲಿದೆ
- ವಿಕಾಸ್‌ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ

ಸೋಲಾರ್ ಬೃಹತ್‌ ಪ್ರಮಾಣದ ವಿದ್ಯುತ್‌ ಘಟಕ ಸ್ಥಾಪನೆಗೆ ಕೋಟ್ಯಾಂತರ ಹಣ ಬೇಕಾಗುತ್ತದೆ. ಆದರೆ ಅದು ಅಷ್ಟೊಂದು ಲಾಭ ತಂದು ಕೊಡುವುದಿಲ್ಲ. ಇದಕ್ಕಾಗಿ ಸಣ್ಣ ಪ್ರಮಾಣದ ರೈತರಿಗೆ ಪ್ಲ್ಯಾಂಟ್ ಹಾಕುವುದು ಕಷ್ಟವಾಗುತ್ತಿದೆ. ಘಟಕ ನಿರ್ಮಾಣಕ್ಕೆ ಅಗತ್ಯ ಮೂಲಸೌಕರ್ಯ ಉಚಿತ ಜಮೀನು, ಆದ್ಯತೆ ಮೇರೆಗೆ ವಿದ್ಯುತ್ ಖರೀದಿ ಮಾಡುವ ಮೂಲಕ ಉದ್ಯಮದ ಸ್ವರೂಪದಲ್ಲಿ ಬೆಳಸಬಹುದು.
- ಶಿವರಾಜ ಯಲಿಗಾರ್, ವೀಣಾ ಪವರ್ಸ್ ಸೋಲಾರ್ ಕಂಪನಿ ಸಂಸ್ಥಾಪಕ, ಗಂಗಾವತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು