ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Games | ಮಹಿಳಾ ಟಿ–20: ಭಾರತ, ಪಾಕಿಸ್ತಾನ ಸೆಮಿಫೈನಲ್‌ಗೆ

Published : 21 ಸೆಪ್ಟೆಂಬರ್ 2023, 13:50 IST
Last Updated : 21 ಸೆಪ್ಟೆಂಬರ್ 2023, 13:50 IST
ಫಾಲೋ ಮಾಡಿ
Comments

ಹಾಂಗ್‌ಝೌ: ಮಲೇಷ್ಯಾ ವಿರುದ್ಧ ಏಷ್ಯನ್ ಕ್ರೀಡಾಕೂಟದ ಮಹಿಳಾ ಟಿ–20 ಕ್ರಿಕೆಟ್‌ ಕ್ವಾರ್ಟರ್‌ಫೈನಲ್ ಪಂದ್ಯ ಗುರುವಾರ ಮಳೆಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಭಾರತ ತಂಡವು ಐಸಿಸಿಯ ಉತ್ತಮ  ರ‍್ಯಾಂಕಿಂಗ್ ಆಧಾರದಲ್ಲಿ ಸೆಮಿಫೈನಲ್ ತಲುಪಿತು.

ಪಾಕಿಸ್ತಾನ ವನಿತಾ ತಂಡವೂ ಸೆಮಿಫೈನಲ್ ತಲುಪಿತು.

ಅನನುಭವಿ ಮಲೇಷ್ಯಾ ದಾಳಿಯನ್ನು ದಂಡಿಸಿದ ಶಫಾಲಿ ವರ್ಮಾ 39 ಎಸೆತಗಳಲ್ಲಿ 67 ರನ್ ಸಿಡಿಸಿ  ಗಮನ ಸೆಳೆದರು. ಅವರ ಇನಿಂಗ್ಸ್‌ನಲ್ಲಿ ಐದು ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳಿದ್ದವು. ಮಳೆಯ ಕಾರಣ ಪಂದ್ಯವನ್ನು 15 ಓವರುಗಳಿಗೆ ಇಳಿಸಲಾಗಿದ್ದು ಭಾರತ 2 ವಿಕೆಟ್‌ಗೆ 173 ರನ್‌ ಗಳಿಸಿತು. ನಾಯಕಿ ಸ್ಮೃತಿ ಮಂದಾನಾ (16 ಎಸೆತಗಳಲ್ಲಿ 27), ಜೆಮಿಮಾ ರಾಡ್ರಿಗಸ್ (29 ಎಸೆಗಳಲ್ಲಿ 47) ಮತ್ತು ರಿಚಾ ಘೋಷ್ (7 ಎಸೆಗಳಲ್ಲಿ 21) ಅವರೂ ಮೊತ್ತ ಹೆಚ್ಚಲು ನೆರವಾದರು.

ಟಾಸ್‌ ಗೆದ್ದಿದ್ದ ಮಲೇಷ್ಯಾ ನಾಯಕಿ ವಿನಿಫ್ರೆಡ್‌ ದುರೈಸಿಂಗಂ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಫೀಲ್ಡರ್‌ಗಳೂ ಕೆಲವು ಸುಲಭ ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದರು.

ಮಳೆಯಿಂದ ಮಲೇಷ್ಯಾ ತಂಡದ ಗುರಿಯನ್ನು ಪರಿಷ್ಕರಿಸಿ ಡಿಎಲ್‌ಎಸ್‌ ಆಧಾರದಲ್ಲಿ 177 ರನ್‌ಗಳಿಗೆ ನಿಗದಿಪಡಿಸಲಾಯಿತು. ಆದರೆ ಕೇವಲ ಎರಡೇ ಎಸೆತಗಳ ನಂತರ ಮಳೆ ಸುರಿಯತೊಡಗಿ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಜೂನ್‌ 1ರ ಐಸಿಸಿ ರ್‍ಯಾಂಕಿಂಗ್‌ ಪ್ರಕಾರ ಭಾರತ ಏಷ್ಯಾದಲ್ಲಿ ಅಗ್ರಸ್ಥಾನದಲ್ಲಿದೆ.

ಮಂದಾನ ಮತ್ತು ಶಫಾಲಿ ಮೊದಲ ವಿಕೆಟ್‌ಗೆ 59 ರನ್ ಸೇರಿಸಿದ್ದರೆ, ಶಫಾಲಿ ಮತ್ತು ರಾಡ್ರಿಗಸ್ ಎರಡನೇ ವಿಕೆಟ್‌ಗೆ 86 ರನ್ ಜೊತೆಯಾಟವಾಡಿದರು.

ಬಾಂಗ್ಲಾದೇಶ ತಂಡವು ಶುಕ್ರವಾರ  ನಡೆಯುವ ಕ್ವಾರ್ಟರ್‌ಫೈನಲ್‌ನಲ್ಲಿ ಹಾಂಗ್‌ಕಾಂಗ್ ತಂಡವನ್ನು ಎದುರಿಸಲಿದ್ದು ಈ ಪಂದ್ಯದ ವಿಜೇತರು ಭಾರತ ತಂಡವನ್ನು ಎದುರಿಸಲಿದ್ದಾರೆ.

ಸ್ಕೋರುಗಳು: ಭಾರತ: 15 ಓವರುಗಳಲ್ಲಿ 2 ವಿಕೆಟ್‌ಗೆ 173 (ಶಫಾಲಿ ವರ್ಮಾ 67, ಜೆಮಿಮಾ ರಾಡ್ರಿಗಸ್ 47); ಮಲೇಷ್ಯಾ: (ಪರಿಷ್ಕೃತ ಗುರಿ 177): 0.2 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 1. (ಪಂದ್ಯ ರದ್ದು, ರ‍್ಯಾಂಕಿಂಗ್ ಆಧಾರದಲ್ಲಿ ಭಾರತಕ್ಕೆ ಜಯ).

ಪಾಕ್‌ ಮುನ್ನಡೆ:

ಝೆಜಿಯಾಂಗ್ ಯುನಿವರ್ಸಿಟಿ ಆಫ್‌ ಟೆಕ್ನಾಲಜಿ ಪಿಂಗ್‌ಫೆಂಗ್‌ ಕ್ರಿಕೆಟ್‌ ಫೀಲ್ಡ್‌ನಲ್ಲಿ ನಿಗದಿಯಾಗಿದ್ದ  ಪಾಕಿಸ್ತಾನ– ಇಂಡೊನೇಷ್ಯಾ ಪಂದ್ಯವೂ ಮಳೆಯಿಂದ ಕೊಚ್ಚಿಹೋಗಿದ್ದು, ಉತ್ತಮ ರ್‍ಯಾಂಕಿಂಗ್ ಆಧಾರದಲ್ಲಿ ಪಾಕಿಸ್ತಾನ ಮಹಿಳೆಯರ ತಂಡ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.

ಪಾಕ್‌ ತಂಡವು ಸೆಮಿಫೈನಲ್‌ನಲ್ಲಿ ಶ್ರೀಲಕಾ– ಥಾಯ್ಲೆಂಡ್‌ ಪಂದ್ಯದ ವಿಜೇತರನ್ನು ಎದುರಿಸಲಿದೆ.

ಪಾಕ್ ತಂಡವು ಈ ಹಿಂದಿನ ಎರಡು ಏಷ್ಯನ್ ಕ್ರೀಡಾಕೂಟಗಳಲ್ಲಿ (2010ರ ಗುವಾಂಗ್‌ ಝೌ ಮತ್ತು 2014ರ ಇಂಚಿಯಾನ್ ಗೇಮ್ಸ್‌ನಲ್ಲಿ) ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಐದು ವರ್ಷಗಳ ಹಿಂದೆ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್‌ ಆಟ ಕೈಬಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT