ಮಂಗಳೂರು: ಸೃಜನ್ ಮತ್ತು ಮೋಹಿತ್ ಅವರ ಅಮೋಘ ಆಟದ ಬಲದಿಂದ ಸೇಂಟ್ ಜೋಸೆಫ್ಸ್ ಎಂಜಿನಿಯರಿಂಗ್ ಕಾಲೇಜು ತಂಡವನ್ನು 15 ಪಾಯಿಂಟ್‌ಗಳಿಂದ ಮಣಿಸಿದ ಕಾರ್ಕಳದ ನಿಟ್ಟೆ ಕ್ಯಾಂಪಸ್ ತಂಡ ಆರ್.ಎಲ್.ಜೈಪುರಿಯಾ ಸ್ಮಾರಕ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪುರುಷರ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಮಹಿಳಾ ವಿಭಾಗದ ಪ್ರಶಸ್ತಿಯೂ ನಿಟ್ಟೆ ಕ್ಯಾಂಪಸ್ ತಂಡದ ಪಾಲಾಯಿತು.
ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್, ಐಎಲ್‌ಜಿ ಕ್ರೌನ್ ಕಂಪನಿಯ ಸಹಯೋಗದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯು.ಎಸ್.ಮಲ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ನಿಟ್ಟೆ ಕ್ಯಾಂಪಸ್ 51–36ರಿಂದ ಜಯಿಸಿತು.
ಮೊದಲಾರ್ಧದ ಮುಕ್ತಾಯಕ್ಕೆ 10 (28–18) ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದ ನಿಟ್ಟೆ ತಂಡ ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. ಸೃಜನ್ 16 ಮತ್ತು ಮೋಹಿತ್ 8 ಪಾಯಿಂಟ್ ಗಳಿಸಿ ಉತ್ತಮ ಕಾಣಿಕೆ ನೀಡಿದರು. ಜೋಸೆಫ್ಸ್ ಪರವಾಗಿ ರೆನಿಶ್ 12 ಮತ್ತು ಆಲ್ಡೆನ್ 8 ಪಾಯಿಂಟ್ ಗಳಿಸಿದರು.
ಮಹಿಳೆಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ನಿಟ್ಟೆ ಕ್ಯಾಂಪಸ್ ತಂಡ ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜು ವಿರುದ್ಧ 38–25ರಲ್ಲಿ ಗೆಲುವು ಸಾಧಿಸಿತು. ನಿಟ್ಟೆಗಾಗಿ ಹಂಸ 13 ಮತ್ತು ಹರಿಣಿ 11 ಪಾಯಿಂಟ್ ಗಳಿಸಿದರೆ, ಕೆಎಂಸಿ ಪರ ಅನನ್ಯ 10 ಪಾಯಿಂಟ್ ಗಳಿಸಿದರು.
ಮೌಂಟ್ ಕಾರ್ಮೆಲ್ ಜಯಭೇರಿ: ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ತಂಡದವರು ಹೈಸ್ಕೂಲ್ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಬಾಲಕರ ಫೈನಲ್‌ನಲ್ಲಿ ಬೆಂಗಳೂರಿನ ಸೇಂಟ್ ಪೀಟರ್ಸ್ ತಂಡವನ್ನು ಮತ್ತು ಬಾಲಕಿಯರ ವಿಭಾಗದಲ್ಲಿ ನಿಟ್ಟೆ ಸ್ಕೂಲ್ ವಿರುದ್ಧ ಮೌಂಟ್ ಕಾರ್ಮೆಲ್ ಗೆದ್ದಿತು. ಪ್ರಾಥಮಿಕ ಶಾಲಾ ಬಾಲಕರ ಫೈನಲ್‌ನಲ್ಲಿ ನಿಟ್ಟೆ ಸ್ಕೂಲ್ ವಿರುದ್ಧ ಪ್ರೆಸಿಡೆನ್ಸಿ ಶಾಲೆ ಜಯ ಗಳಿಸಿದರೆ, ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ನಿಟ್ಟೆ ಸ್ಕೂಲ್ ವಿರುದ್ಧ ಸೇಂಟ್ ಥೆರೆಸಾ ಶಾಲೆ ಗೆಲುವು ಸಾಧಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.