ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಬೇಸಿಗೆ ಮುನ್ನವೇ ನೀರಿನ ಸಮಸ್ಯೆ

Published 29 ಫೆಬ್ರುವರಿ 2024, 4:53 IST
Last Updated 29 ಫೆಬ್ರುವರಿ 2024, 4:53 IST
ಅಕ್ಷರ ಗಾತ್ರ

ಅಳವಂಡಿ: ಕೊಪ್ಪಳ ಹಾಗೂ ಕುಕನೂರು ತಾಲ್ಲೂಕಿನ 32 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ನೀರಿನ ಯೋಜನೆಯ ಜಾಕವೆಲ್‌ನಲ್ಲಿ ನೀರು ಖಾಲಿಯಾಗಿದ್ದು, ಇದರಿಂದ ಕುಡಿಯುವ ನೀರಿನ ಅಭಾವ ಎದುರಾಗಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ಹಲವೆಡೆ ನೀರಿನ ಸಮಸ್ಯೆ ಎದುರಾಗಿದೆ. ಮುಂಬರುವ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.

ತುಂಗಾಭದ್ರಾ ನದಿ ಪಾತ್ರದ ನಿಲೋಗಿಪುರ ಗ್ರಾಮದಿಂದ ಕೊಪ್ಪಳ ಹಾಗೂ ಕುಕನೂರು ತಾಲ್ಲೂಕಿನ 32 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ತುಂಗಾಭದ್ರಾ ನದಿಯಲ್ಲಿ ನೀರು ಖಾಲಿಯಾಗಿದ್ದು, ಇದರಿಂದ ಹದಿನೈದು ದಿನಗಳಿಂದ ನೀರಿನ ಪೂರೈಕೆ ಬಂದ್‌ ಆಗಿದೆ.

ಇದರಿಂದ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ಕೆಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿದೆ. ಅವು ಸರಿಯಾಗಿ ಕಾರ್ಯ ನಿರ್ವಹಿಸದೇ ಬಂದ್‌ ಆಗಿವೆ. ಇನ್ನೂ ಕೆಲವು ಗ್ರಾಮಗಳ ಜನರು ಕುಡಿಯಲು ಕೆರೆಯ ನೀರನ್ನು ಅವಲಂಬಿತರಾಗಿದ್ದಾರೆ. ಆದರೆ, ಪ್ರಸ್ತುತ ವರ್ಷ ಸರಿಯಾದ ಮಳೆ ಇಲ್ಲದೇ ಕೆರೆಗಳು ಭರ್ತಿಯಾಗಿಲ್ಲ. ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಕೆರೆಯಲ್ಲಿ ನೀರು ಇದೆ. ಇದರಿಂದ ಅವೇ ನೀರನ್ನು ಕುಡಿಯಲು ಬಳಸುತ್ತಾರೆ. ಕೆರೆ ನೀರು ಬೇಕಾದರೆ ಮೂರ್ನಾಲ್ಕು ಕಿ.ಮೀ ನಡೆದು ಹೋಗಬೇಕಾಗಿದೆ.

ಬೇಸಿಗೆ ಆರಂಭಕ್ಕೂ ಮೊದಲೇ ನೀರಿನ ಸಮಸ್ಯೆಯಾಗಿದ್ದರಿಂದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿಯು ಕೊಳವೆಬಾವಿ, ಖಾಸಗಿ ಬೋರ್ ವೆಲ್ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿವೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ನೀರಿನ ಬವಣೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿವೆ.

ತುಂಗಾಭದ್ರಾ ನದಿಯ ನೀರು ಖಾಲಿಯಾಗಿದ್ದರಿಂದ ತಾಲ್ಲೂಕು ಹಾಗೂ ಗ್ರಾಮ ಆಡಳಿತಗಳು ಕೊಳವೆಬಾವಿಗಳ ಮೋರೆ ಹೋಗಿದೆ. ಖಾಸಗಿ ವ್ಯಕ್ತಿಗಳ ಕೊಳವೆಬಾವಿ ಬಳಸಿಕೊಂಡು ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಕೂಡ ಮುಂದಾಗಿವೆ. ತುಂಗಾಭದ್ರಾ ನದಿಗೆ ನೀರು ಬಿಡುವಂತೆ ಈಗಾಗಲೇ ಅನೇಕ ರೈತರು ಹಾಗೂ ವಿವಿಧ ಸಂಘಟನೆಗಳು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ತುಂಗಾಭದ್ರಾ ನದಿಗೆ ನೀರು ಬಿಟ್ಟರೇ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಇಲ್ಲಿನ ರೈತರು.

ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಕೊಳವೆ ಬಾವಿ ಮೂಲಕ ಜನರಿಗೆ ನೀರು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ
ದುಂಡಪ್ಪ ತುರಾದಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ. ಕೊಪ್ಪಳ
ಬೇಸಿಗೆ ಮುನ್ನವೇ ಹಲವೆಡೆ ನೀರಿನ ಸಮಸ್ಯೆ ಕಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಕೊರತೆ ನೀಗಿಸಬೇಕು. ಕೂಡಲೇ ತುಂಗಾಭದ್ರಾ ನದಿಗೆ ನೀರು ಹರಿಸಬೇಕು
ಸಂತೋಷ ಭಜಂತ್ರಿ ಅಳವಂಡಿ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT