ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ ಪುರಸಭೆಯ ನಾಲ್ವರು ನೌಕರರ ಅಮಾನತು

ಅಭಿವೃದ್ಧಿಗೊಳ್ಳದ ಬಡಾವಣೆಗಳು, ನಿವೇಶನ ಬಿಡುಗಡೆ ಅಕ್ರಮ ಪ್ರಕರಣ
ನಾರಾಯಣರಾವ್‌ ಕುಲಕರ್ಣಿ
Published 14 ಫೆಬ್ರುವರಿ 2024, 6:00 IST
Last Updated 14 ಫೆಬ್ರುವರಿ 2024, 6:00 IST
ಅಕ್ಷರ ಗಾತ್ರ

ಕುಷ್ಟಗಿ: ವಸತಿ ವಿನ್ಯಾಸ ಬಡಾವಣೆಗಳಲ್ಲಿ ನಿಯಮಗಳ ಅನುಸಾರ ಮೂಲಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದ ಅವುಗಳ ಮಾಲೀಕರಿಗೆ ಅಕ್ರಮವಾಗಿ ನಮೂನೆ-3ರ ಮೂಲಕ ನಿವೇಶನಗಳನ್ನು ಬಿಡುಗಡೆ ಮಾಡಿ ಸರ್ಕಾರದ ನಿಯಮ ಉಲ್ಲಂಘಿಸಿದ ಇಲ್ಲಿಯ ಪುರಸಭೆಯ ಅಧಿಕಾರಿ ಸೇರಿ ನಾಲ್ವರು ಸಿಬ್ಬಂದಿಯನ್ನು ಸರ್ಕಾರ ಅಮಾನತುಗೊಳಿಸಿದೆ.

ಈ ವಿಷಯ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ನೌಕರರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿ, ಶಿಸ್ತುಕ್ರಮಕ್ಕೆ ಸೂಚಿಸಿದ್ದರು. ಪೌರಾಡಳಿತ ಇಲಾಖೆ ನಿರ್ದೇಶಕ ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕಂದಾಯ ಅಧಿಕಾರಿ ಎಂ.ಎನ್‌.ಖಾಜಾಹುಸೇನ್, ಕಂದಾಯ ನಿರೀಕ್ಷಕ ರಾಘವೇಂದ್ರ, ಕರವಸೂಲಿಗಾರ ಖಾಜಾಹುಸೇನ್ ಅಲಂಬರದಾರ ಮತ್ತು ದ್ವಿತೀಯ ದರ್ಜೆ ಸಹಾಯಕ ಚಿರಂಜೀವಿ ದೊಡ್ಡಮನಿ ಎಂಬುವರು ಅಮಾನತುಗೊಂಡವರು.

ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಹಿಂದಿನ ಮುಖ್ಯಾಧಿಕಾರಿ ಉಮೇಶ ಹಿರೇಮಠ ಅವರನ್ನು ಆಗ ಸ್ಥಳ ನಿಯುಕ್ತಿಗೊಳಿಸದೇ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದರು. ಸದ್ಯ ಹೂವಿನಹಡಗಲಿ ಪುರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಹೊರತುಪಡಿಸಿ ಉಳಿದವರನ್ನು ಅಮಾನತುಗೊಳಿಸಲಾಗಿದೆ ಎಂದು ಪೌರಾಡಳಿತ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಈ ಅಕ್ರಮ ಕುರಿತಂತೆ 2022ರ ಮಾರ್ಚ್ 10ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಅನ್ವಯ ಆಗಿನ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್‌ ತನಿಖೆ ನಡೆಸಿದ್ದರು. 2023ರ ಜು.29ರಂದು ಜಿಲ್ಲಾಧಿಕಾರಿಗಳು ಈ ಸಂಬಂಧ ನಡೆದ ತನಿಖಾ ವರದಿ ಪರಿಗಣಿಸಿ ನೌಕರರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆದರೆ ಉಮೇಶ ಹಿರೇಮಠ ಅವರೇ ಅಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪಗಳಿದ್ದವು. ಅವರ ವಿರುದ್ಧ ಕ್ರಮ ಜರುಗಿಸದೆ ಕೈಬಿಟ್ಟಿರುವುದಕ್ಕೆ ಹೆಸರು ಪ್ರಕಟಿಸಲು ಇಚ್ಛಿಸದ ಇಲ್ಲಿಯ ಪುರಸಭೆಯಲ್ಲಿನ ಕೆಲ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು: ನಿಯಮಗಳ ಪ್ರಕಾರ ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ ಹೊಂದಿದ ಸರ್ವೆ ಸಂಖ್ಯೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ ಮಾಲೀಕರಿಗೆ ಪ್ರಾರಂಭದಲ್ಲಿ ಶೇಕಡ 44ರಷ್ಟು ನಿವೇಶನಗಳನ್ನು ಮಾತ್ರ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕಾಗುತ್ತದೆ. ಉಳಿದ ಶೇ 56ರಷ್ಟು ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಸಂಬಂಧಿಸಿದ ಬಡಾವಣೆಯಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯ ಕಲ್ಪಿಸಿದ್ದನ್ನು ಖಚಿತಪಡಿಸಿಕೊಂಡು ಮಾರಾಟಕ್ಕೆ ಪುರಸಭೆ ನಮೂನೆ 3ರ ಮೂಲಕ ಬಿಡುಗಡೆ ಮಾಡಬೇಕು. ಅಭಿವೃದ್ಧಿಗೊಳ್ಳದೇ ಇದ್ದಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿಯಾಗುವವರೆಗೂ ನಿವೇಶನಗಳನ್ನು ಬಿಡುಗಡೆಗೆ ಅನುಮತಿ ನೀಡುವಂತಿಲ್ಲ ಎಂಬುದು ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿದೆ.

ಆದರೆ, ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿರುವ ಪುರಸಭೆ ಅಧಿಕಾರಿಗಳು, ಕೆಲ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿ, ಬಡಾವಣೆಗಳ ಮಾಲೀಕರೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಆದೇಶಕ್ಕೆ ವಿರುದ್ಧವಾಗಿ ದಾಖಲೆಗಳನ್ನು ನೀಡಿರುವುದಕ್ಕೆ ಸಂಬಂಧಿಸಿದಂತೆ ಆಗ 'ಪ್ರಜಾವಾಣಿ'ಯಲ್ಲಿ ಅಧಿಕೃತ ದಾಖಲೆಗಳ ಸಹಿತ ವರದಿ ಪ್ರಕಟವಾಗಿತ್ತು.

ಪಟ್ಟಣದ ಶಶಿಧರ ಕವಲಿ, ಯಮನಪ್ಪ ಸಣ್ಣದುರಗಪ್ಪ, ಕೃಷ್ಣಮೂರ್ತಿ ಕಂದಕೂರು ಮತ್ತು ಮದ್ದಾನಯ್ಯ ಎಂಬುವವರಿಗೆ ಸೇರಿದ ಬಡಾವಣೆಗಳಲ್ಲಿ ನಗರ ಯೋಜನಾ ಪ್ರಾಧಿಕಾರದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಕೃಷಿಯೇತರಗೊಂಡ ದಿನಾಂಕದಿಂದ ತೆರಿಗೆ ವಸೂಲಿ ಮಾಡಬೇಕಿದ್ದರೂ ಕೇವಲ ಒಂದು ವರ್ಷದ ತೆರಿಗೆ ವಸೂಲಿ ಮಾಡಿ ಪುರಸಭೆಗೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ. ಕೆಲ ಬಡಾವಣೆಗಳಲ್ಲಿ ಕೆಲ ಮೂಲಸೌಲಭ್ಯ ಕಲ್ಪಿಸಿದ್ದರೂ ಉದ್ಯಾನ ಅಭಿವೃದ್ಧಿಪಡಿಸಿಲ್ಲ ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕರೆ ಸ್ವೀಕರಿಸದ ಜಿಲ್ಲಾಧಿಕಾರಿ: ಈ ಮಧ್ಯೆ ಪಟ್ಟಣದ ಶಾಖಾಪುರ ರಸ್ತೆಯಲ್ಲಿರುವ ದ್ಯಾಮಣ್ಣ ಕಟ್ಟಿಹೊಲ ಎಂಬ ವಸತಿ ವಿನ್ಯಾಸದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯದಿದ್ದರೂ ಹಾಲಿ ಮುಖ್ಯಾಧಿಕಾರಿ ಶೇ 100ರಷ್ಟು ನಿವೇಶನಗಳ ಬಿಡುಗಡೆಗೆ ಅನುಮತಿಸಿರುವುದು ಮತ್ತು ಅದೇ ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸರಲಿಸಿದ ಪುರಸಭೆಗೆ ಸೇರಿದ ಪ್ರದೇಶದಲ್ಲಿ ಅಕ್ರಮವಾಗಿ ದೊಡ್ಡ ಪ್ರಮಾಣದ ಗುಂಡಿ ತೋಡಿ ಗಣಿಗಾರಿಕೆ ನಡೆಸಿರುವ ಬಗ್ಗೆ ಕಳೆದ ತಿಂಗಳು 'ಪ್ರಜಾವಾಣಿ' ವಿಶೇಷ ವರದಿ ಪ್ರಕಟಿಸಿತ್ತು.

ಆದರೆ, ಈವರೆಗೂ ಅದರ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದಾಗ ಡಿಯುಡಿಸಿ ಯೋಜನಾ ನಿರ್ದೇಶಕಿ ’ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿ ಲಿಖಿತ ವರದಿಯನ್ನೇ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಪತ್ರ ಬರೆಯುವುದಾಗಿ’ ತಿಳಿಸಿದರು.

ಕುಷ್ಟಗಿ ಪುರಸಭೆಯಲ್ಲಿ ಹೊಸ ಬಡಾವಣೆಗಳ ವಿಷಯದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮಗಳು ನಡೆಯುತ್ತಿದ್ದು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಗಾಗಿ ಅನೇಕ ದಿನಗಳಿಂದ ಸಂಪರ್ಕಿಸಿದರೂ ಜಿಲ್ಲಾಧಿಕಾರಿ ನಲೀನ್‌ ಅತುಲ್‌ ಅವರು ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ವರದಿ ಹಿನ್ನೆಲೆಯಲ್ಲಿ ನೀಡಿದ್ದ ಷೋಕಾಸ್ ನೋಟಿಸ್
ಪ್ರಜಾವಾಣಿ ವರದಿ ಹಿನ್ನೆಲೆಯಲ್ಲಿ ನೀಡಿದ್ದ ಷೋಕಾಸ್ ನೋಟಿಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT