ಸೋಮವಾರ, ಅಕ್ಟೋಬರ್ 18, 2021
27 °C

ಕೊಪ್ಪಳ: 232 ಕಟ್ಟಡ ತೆರವು, 13 ಧಾರ್ಮಿಕ ಕಟ್ಟಡಗಳಿಗೆ ಸಕ್ರಮ ಭಾಗ್ಯ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿರುವ ಮತ್ತು ಸಾರ್ವಜನಿಕ ಸ್ಥಳ, ಉದ್ಯಾನದಲ್ಲಿ ನಿರ್ಮಿಸಿರುವ 306 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಕುರಿತು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಅನಧಿಕೃತ ಕಟ್ಟಡ ತೆರವು ಕಾರ್ಯಾಚರಣೆ ಕುರಿತು ಸರ್ಕಾರ ಈಚೆಗೆ ಹೊರಡಿಸಿದ ಆಜ್ಞೆ ಮತ್ತು ಜನರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಮೂಲಕ ಯಾವುದೇ ವಿವಾದವಿಲ್ಲದೆ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲೆಯಲ್ಲಿ ಒಟ್ಟು 306 ಅನಧಿಕೃತ ಧಾರ್ಮಿಕ ಕಟ್ಟಡಗಳು ಇವೆ ಎನ್ನಲಾಗಿದೆ. 2009ರಲ್ಲಿ 158, ನಂತರ 74 ಸೇರಿದಂತೆ 232 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇದರಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳು ಸೇರಿವೆ. ಇನ್ನೂ 61 ಧಾರ್ಮಿಕ ಕಟ್ಟಡಗಳು ಬಾಕಿ ಉಳಿದಿವೆ. 13 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಸಮಗ್ರ ದಾಖಲೆಗಳನ್ನು ಪಡೆದುಕೊಂಡು ಅಧಿಕೃತಗೊಳಿಸಲಾಗಿದೆ.

ಇದರಿಂದ ಜಿಲ್ಲೆಯಲ್ಲಿ ತೆರವುಗೊಳಿಸಬೇಕಾದ ಯಾವುದೇ ಧಾರ್ಮಿಕ ಕಟ್ಟಡಗಳು ಇಲ್ಲ ಎಂದು ಜಿಲ್ಲಾಡಳಿತ ಹೈಕೋರ್ಟ್‌ ವಕೀಲರಿಗೆ ಮಾಹಿತಿ ನೀಡಿದೆ. ಕೆಲವು ವಿವಾದಾತ್ಮಕ ಕಟ್ಟಡಗಳು ಇದ್ದರೂ ಅವುಗಳನ್ನು ನ್ಯಾಯಾಲಯದ ಆದೇಶಕ್ಕಿಂತ ಮುಂಚೆಯೇ ನಿರ್ಮಿಸಲಾಗಿದೆ. ಅಲ್ಲದೆ ಕೆಲವರು ತಮ್ಮ ಕಾರ್ಖಾನೆ ಆವರಣದಲ್ಲಿ ಕೂಡಾ ನಿರ್ಮಿಸಿದ್ದಾರೆ. ಇದರಲ್ಲಿ ಕೆಲವು ಸಾರ್ವಜನಿಕ ಅಥವಾ ಬೇರೆ ಉದ್ದೇಶಕ್ಕೆ ನಿರ್ಮಿಸಲಾಗಿದೆ ಎಂದು ನೋಟಿಸ್‌ ಕೂಡಾ ನೀಡಲಾಗಿತ್ತು. ಆದರೆ ಅವುಗಳನ್ನು ಆದೇಶದಂತೆ ತೆರವುಗೊಳಿಸಲು ಬಾರದೇ ಇರುವುದರಿಂದ ದಾಖಲೆ ಪಡೆದು ಸಕ್ರಮಗೊಳಿಸಲಾಗಿದೆ.

ಈ ಕುರಿತು ತಹಶೀಲ್ದಾರ್, ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ನಗರ ಗ್ರಾಮೀಣ ಪ್ರದೇಶಗಳಲ್ಲಿ ಡಂಗೂರ, ಜಾಗೃತಿ ಮೂಲಕ ಅನಧಿಕೃತ ಕಟ್ಟಡ ತೆರವು ಮತ್ತು ಮಾಹಿತಿಯನ್ನು ನೀಡಲಾಗಿತ್ತು. ಆದರೆ ಸಮಿತಿ ಮುಂದೆ ಯಾವುದೇ ಆಕ್ಷೇಪಣೆ ಅರ್ಜಿ ಬಾರದೇ ಹಿನ್ನೆಲೆಯಲ್ಲಿ ಕೆಲವು ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು.

‘ಜಿಲ್ಲೆಯಲ್ಲಿ ವಿವಾದಿತ ಕಟ್ಟಡಗಳ ಕುರಿತು ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಸರ್ಕಾರದ ಮತ್ತು ನ್ಯಾಯಾಲಯದ ಆದೇಶದಂತೆ ಎಲ್ಲ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇನ್ನು ಮುಂದೆ ಮಾರ್ಗಸೂಚಿ ಅನ್ವಯ ಸಾರ್ವಜನಿಕ ಸ್ಥಳ, ಉದ್ಯಾನಗಳಲ್ಲಿ ಯಾವುದೇ ದೇವಸ್ಥಾನ, ಚರ್ಚ್‌, ಮಸೀದಿ ನಿರ್ಮಾಣಕ್ಕೆ ಅವಕಾಶವಿಲ್ಲ’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಪತ್ರಿಕೆಗೆ ಮಾಹಿತಿ ನೀಡಿದರು.

ಜಿಲ್ಲೆಯ ಅನಧಿಕೃತ ಧಾರ್ಮಿಕ ಕಟ್ಟಡ ತೆರವು ಸಂಬಂಧ ಎಲ್ಲ ಮಾಹಿತಿಯನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ವಿವಾದಿತ ಕಟ್ಟಡಗಳು ಇದ್ದರೆ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದರೆ ಅವುಗಳನ್ನು ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ ಸಮರ್ಪಕ ದಾಖಲೆ ಒದಗಿಸಿದಲ್ಲಿ ಅಧಿಕೃತಗೊಳಿಸುವ ಕುರಿತು ಜಿಲ್ಲಾಡಳಿತ ತಿಳಿಸಿದೆ. 2009ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ನ್ಯಾಯಾಲಯದ ತೀರ್ಪಿನ ಅನ್ವಯ 2013ರಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸರ್ಕಾರ ನೆಲಸಮ ಮಾಡಲು ಕ್ರಮ ಕೈಗೊಂಡಿತ್ತು. 2009ರ ನಂತರ ನಿರ್ಮಿಸಿದ ಕಟ್ಟಡ ತೆರವು ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು