ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಅನಾಥ ವೃದ್ಧೆ ಕ್ಷೇಮ ವಿಚಾರಿಸಿದ ನ್ಯಾಯಾಧೀಶರು

ನ್ಯಾಯಾಧೀಶರು, ತಹಶೀಲ್ದಾರ್ ಭೇಟಿ, ಗಾಯಗಳಿದ್ದರೂ ಸೇವೆ ಬಿಡದ ವೃದ್ಧೆ
Published 21 ನವೆಂಬರ್ 2023, 14:23 IST
Last Updated 21 ನವೆಂಬರ್ 2023, 14:23 IST
ಅಕ್ಷರ ಗಾತ್ರ

ಕುಷ್ಟಗಿ: ಫಲಾಪೇಕ್ಷೆಯಿಲ್ಲದೆ ರಸ್ತೆ ಸ್ವಚ್ಛವಾಗಿಡುವ ಕಾಯಕದಲ್ಲಿ ತೊಡಗಿರುವ ಅನಾಥ ವೃದ್ಧೆ ಹನುಮವ್ವ ಅವರನ್ನು ನ್ಯಾಯಾಧೀಶರು ಮತ್ತು ಅಧಿಕಾರಿಗಳು ಮಂಗಳವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

‘ಅನಾಥ ಅಜ್ಜಿಯ ನಿಸ್ವಾರ್ಥ ಸೇವೆ’ ಶೀರ್ಷಿಕೆಯಲ್ಲಿ ನವೆಂಬರ್ 21ರಂದು ಪ್ರಕಟವಾದ ‘ಪ್ರಜಾವಾಣಿ’ ವರದಿ ಗಮನಿಸಿ ಇಲ್ಲಿಯ ಹಿರಿಯ ಶ್ರೇಣಿ ನ್ಯಾಯಾಧೀಶೆ ಸರಸ್ವತಿದೇವಿ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಬಿ.ಸತೀಶ್, ತಹಶೀಲ್ದಾರ್ ಶೃತಿ ಮಳ್ಳಪ್ಪಗೌಡ್ರ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್ ಯಶವಂತ ಬಿಸನಳ್ಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಒಟ್ಟಾಗಿ ಅಜ್ಜಿ ಇದ್ದಲ್ಲಿಗೆ ಖುದ್ದಾಗಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ವರದಿ ಗಮನಿಸಿದ ಜಿಲ್ಲಾ ನ್ಯಾಯಾಧೀಶರು ಅನಾಥ ವೃದ್ಧೆಯ ಸ್ಥಿತಿ ಗತಿ ಕುರಿತು ಪರಿಶೀಲಿಸಿ ಮಾಹಿತಿ ನೀಡುವಂತೆ ಇಲ್ಲಿಯ ನ್ಯಾಯಾಧೀಶರಿಗೆ ಸೂಚಿಸಿದರು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.  ನ್ಯಾಯಾಧೀಶರು ಮತ್ತು ಇತರೆ ಇಲಾಖೆಗಳ ಅಧಿಕಾರಿಗಳ ಮುತುವರ್ಜಿಗೆ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ನ್ಯಾಯಾಧೀಶರು, ಅಧಿಕಾರಿಗಳು ಮಾತನಾಡಿಸಿದರೂ ಹನುಮವ್ವ ತಲೆ, ಮತ್ತಿತರ ಕಡೆ ಆದ ಗಾಯಗಳನ್ನು ಮರೆತು  ದೈನಂದಿನ ಕಾರ್ಯದಲ್ಲಿ ತಲ್ಲೀನರಾಗಿದ್ದರು. ‘ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ, ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯುತ್ತೇವೆ, ಈ ರೀತಿ ರಸ್ತೆಯಲ್ಲಿ ಇರುವುದು ಬೇಡ’ ಎಂದು ಅಧಿಕಾರಿಗಳು ಮನ ಒಲಿಸುವ ಪ್ರಯತ್ನ ನಡೆಸಿದರಾದರೂ ಹನುಮವ್ವ ಓಗೊಡದೆ ನಿರಾಕರಿಸಿದರು.

ನಂತರ ಮಾಹಿತಿ ನೀಡಿದ ತಹಶೀಲ್ದಾರ್ ಶೃತಿ ಮಳ್ಳಪ್ಪಗೌಡ್ರ, ‘ಆಸ್ಪತ್ತೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದರೆ ವೃದ್ಧೆ ಸಹಕರಿಸಲಿಲ್ಲ. ಮಾನಸಿಕ ಅಸ್ವಸ್ಥತೆ ಕಾರಣ ಇಂಥ ಸಂದರ್ಭದಲ್ಲಿ ಒತ್ತಡ ಹೇರುವುದೂ ಸರಿಯಲ್ಲ. ಹಾಗಾಗಿ ಒಂದೆರಡು ದಿನ ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT