ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳ ಸಂತೆ | ಕೊಳ್ಳುವವರೇ ಇಲ್ಲ; ಕೊಡುವವರೇ ಎಲ್ಲ!

ಬರಗಾಲದ ಭೀಕರತೆಗೆ ಸಾಕ್ಷಿಯಾದ ಜಾನುವಾರು ವಾರದ ಸಂತೆ, ಸಿಕ್ಕಷ್ಟು ಹಣವೇ ಬದುಕಿಗೆ ಆಸರೆ
Published 21 ಅಕ್ಟೋಬರ್ 2023, 5:29 IST
Last Updated 21 ಅಕ್ಟೋಬರ್ 2023, 5:29 IST
ಅಕ್ಷರ ಗಾತ್ರ

ಕೊಪ್ಪಳ: 'ಬದುಕಿಗೆ ಆಸರೆಯಾಗುತ್ತದೆ ಎನ್ನುವ ಕಾರಣಕ್ಕೆ ಎರಡು ವರ್ಷಗಳ ಹಿಂದೆ ₹80 ಸಾವಿರ ನೀಡಿ ಎತ್ತು ಖರೀದಿ ಮಾಡಿದ್ದೆ. ಈಗ ₹30 ಸಾವಿರಕ್ಕೆ ಕೇಳಿದರೂ ಕೊಟ್ಟು ಹೋಗಲು ಸಿದ್ಧನಾಗಿದ್ದೇನೆ. ನಮಗೇ ಊಟವಿಲ್ಲ, ಇನ್ನು ಜಾನುವಾರುಗಳಿಗೆ ಎಲ್ಲಿಂದ ಊಟ (ಮೇವು) ಹಾಕುವುದು...’

ತಾಲ್ಲೂಕಿನ ಗಿಣಿಗೇರಾದಲ್ಲಿ ಶುಕ್ರವಾರ ನಡೆದ ಜಾನುವಾರುಗಳ ಸಂತೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಹಿರೇಕೆರನಳ್ಳಿ ಗ್ರಾಮದ ಅಂಜಿನಪ್ಪ ಹೀಗೆ ಹೇಳುವಾಗ ಕಣ್ಣೀರು ಹಾಕಿದರು.

‘ನನಗಿರುವ ಒಂದು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಕೈ ಕೊಟ್ಟಿದೆ. ಈ ಬಾರಿ 50 ಕೆ.ಜಿ. ಮಾತ್ರ ಫಸಲು ಬಂದಿದೆ. ಜಾನುವಾರುಗಳಿಗೆ ಮೇವು ಇಲ್ಲ, ಕುಡಿಯಲು ನೀರು ಸಿಗುತ್ತಿಲ್ಲ. ಕೃಷಿ ಕೆಲಸವೂ ಇಲ್ಲ. ನಮ್ಮ ಬದುಕೇ ಬೀದಿಗೆ ಬಂದು ಬಿದ್ದಾಗ ಇನ್ನು ಇವುಗಳನ್ನು ಹೇಗೆ ಸಾಕಬೇಕು?’ ಎಂದು ಅವರು ಪ್ರಶ್ನಿಸಿದರು.

ಕೊಪ್ಪಳ ತಾಲ್ಲೂಕಿನ ಬಸಾಪುರದಿಂದ ಬಂದಿದ್ದ ರೈತ ರಾಮಣ್ಣ ‘₹1.10 ಲಕ್ಷಕ್ಕೆ ಖರೀದಿಸಿದ್ದ ಜಾನುವಾರು ಈಗ ₹50 ಸಾವಿರಕ್ಕೆ ಕೊಡುತ್ತಿದ್ದೇನೆ. ಸರಿಯಾಗಿ ಮಳೆಯಾಗಿದ್ದರೆ ಬದುಕು ಚೆಂದವಾಗಿಯೇ ಇರುತ್ತಿತ್ತು. ಮೇವಿನ ಕೊರತೆಯಿಂದಾಗಿ ದಿನದೂಡುವುದೇ ಕಷ್ಟವಾಗಿದೆ. ಒಂದು ಗಾಡಿಯ ಮೇವಿಗೆ ₹6ರಿಂದ ₹7 ಸಾವಿರ ಕೊಡಬೇಕಿದೆ. ಒಂದು ಸಲ ತಂದರೆ ಎರಡು ತಿಂಗಳು ಕೂಡ ಆಗುವುದಿಲ್ಲ’ ಎಂದು ನೋವು ತೋಡಿಕೊಂಡರು.

ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ ಚಿತ್ರಣಗಳು ರೈತರನ್ನು ಮಾತನಾಡಿಸುತ್ತ ಹೋದಂತೆ ಅನಾವರಣವಾಗುತ್ತಲೇ ಹೋದವು. ಪ್ರತಿ ಅನ್ನದಾತನ ಮಾತಿನಲ್ಲಿ ‘ಮಳೆಯೇ ಇಲ್ಲವಲ್ರೀ.... ಹೆಂಗ್ರೀ ಸಾಕೋದು’ ಎನ್ನುವ ಅಸಹಾಯಕತೆ ವ್ಯಕ್ತವಾಗುತ್ತಿತ್ತು. 

ಗಿಣಿಗೇರಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಶುಕ್ರವಾರ ಜಾನುವಾರುಗಳ ಸಂತೆ ನಡೆಯುತ್ತದೆ. ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೈತರು ಬಂದು ಜಾನುವಾರುಗಳ ಮಾರಾಟ ಹಾಗೂ ಖರೀದಿ ವ್ಯವಹಾರದಲ್ಲಿ ತೊಡಗುತ್ತಾರೆ. ಬರಗಾಲ ವ್ಯಾಪಕವಾಗಿರುವ ಕಾರಣ ಈ ಬಾರಿ ಕೊಳ್ಳುವವರ ಸಂಖ್ಯೆ ಬೆರಳೆಣಿಕೆಯಲ್ಲಿತ್ತು. ಬಹುತೇಕತರು ಮಾರಾಟ ಮಾಡಲು ಗ್ರಾಹಕರನ್ನು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದರು.

ತಮ್ಮ ಜಿಲ್ಲೆಗಳ ಜಾನುವಾರು ಸಂತೆಯಲ್ಲಿ ಉತ್ತಮ ಬೆಲೆ ಸಿಗಬಹುದು ಎನ್ನುವ ನಿರೀಕ್ಷೆ ಹೊಂದಿದ್ದ ಅನೇಕ ರೈತರಿಗೆ ಅಲ್ಲಿ ನಿರಾಸೆಯಾಗಿತ್ತು. ಹೀಗಾಗಿ ಅವರು ಇಲ್ಲಿಯಾದರೂ ಉತ್ತಮ ಹಣ ಸಿಗುವ ನಿರೀಕ್ಷೆಯ ಮೂಟೆ ಹೊತ್ತು ವಿಜಯನಗರ, ಗದಗ, ಬಳ್ಳಾರಿ, ಯಾದಗಿರಿ, ಕಲಬುರಗಿ ಜಿಲ್ಲೆಗಳಿಂದ ಬಂದಿದ್ದರು.

ಹಗರಿಬೊಮ್ಮನಹಳ್ಳಿಯಿಂದ ಬಂದಿದ್ದ ರೈತ ಬಸವರಾಜ ಹುಲವತ್ತಿ  ‘ಬರಗಾಲದಿಂದಾಗಿ ಈ ಸಲದ ಸಂತೆಯಲ್ಲಿ ಬಹಳಷ್ಟು ರೈತರು ಮಾರಾಟ ಮಾಡುವವರೇ ಬಂದಿದ್ದಾರೆ. ಕೊಳ್ಳುವ ಕೈಗಳು ಬಹಳಷ್ಟು ಕಡಿಮೆಯಿವೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಸಾವಿರಾರು ರೂಪಾಯಿ ವಾಹನಗಳ ಬಾಡಿಗೆ ಕೊಟ್ಟು ಬಂದಿದ್ದೇವೆ. ಹೀಗೆ ಅಲೆದಾಡುತ್ತ ಹೋದರೆ ಜಾನುವಾರು ಮಾರಾಟದ ಹಣ ವಾಹನಕ್ಕೆ ವ್ಯಯ ಮಾಡಬೇಕಾಗುತ್ತದೆ. ಇಲ್ಲವಾದರೆ ಕಸಾಯಿ ಖಾನೆಗೆ ಕಳಿಸಿ ಬಂದಷ್ಟು ಹಣ ತೆಗೆದಕೊಂಡು ಹೋಗಬೇಕಾದ ಸ್ಥಿತಿಯೂ ಇದೆ’ ಎಂದಾಗ ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಎದ್ದು ಕಾಣುತ್ತಿದ್ದವು.

ಜಾನುವಾರುಗಳಿಗೆ ಬಳಸುವ ಸಾಮಗ್ರಿಗಳ ಮಾರಾಟದ ವ್ಯಾಪಾರಿ ಗ್ರಾಹಕರ ನಿರೀಕ್ಷೆಯಲ್ಲಿರುವುದು
ಜಾನುವಾರುಗಳಿಗೆ ಬಳಸುವ ಸಾಮಗ್ರಿಗಳ ಮಾರಾಟದ ವ್ಯಾಪಾರಿ ಗ್ರಾಹಕರ ನಿರೀಕ್ಷೆಯಲ್ಲಿರುವುದು
ನಿಂಗಪ್ಪ
ನಿಂಗಪ್ಪ
ಹನುಮಂತಗೌಡ
ಹನುಮಂತಗೌಡ

₹85ಸಾವಿರ ಕೊಟ್ಟು ಖರೀದಿಸಿದ್ದ ಜಾನುವಾರು ಈಗ ₹50 ಸಾವಿರಕ್ಕೆ ಕೇಳುತ್ತಿದ್ದಾರೆ. ಮೇವು ಇಲ್ಲ ಮಳೆಯೂ ಇಲ್ಲ. ಕಟುಗರ ಬಳಿ ಹೋದರೆ ಇನ್ನೂ ಕಡಿಮೆ ಹಣ ಕೇಳುತ್ತಾರೆ.

ನಿಂಗಪ್ಪ ಗಂಗಾವತಿ

ಎಂಟು ಎಕರೆ ಹೊಲದಲ್ಲಿ ಶೇಂಗಾ ಹಾಗೂ ಮೆಕ್ಕೆಜೋಳ ಹಾಕಿದ್ದೆ. ಏನೂ ಬೆಳೆ ಬಂದಿಲ್ಲ. ಜಾನುವಾರುಗಳಿಗೆ ಮೇವು ಸಿಗದೇ ಪರದಾಡುವ ಪರಿಸ್ಥಿತಿಯಿದೆ. ಈ ವಾರ ಮಾರಾಟ ಮಾಡುವವರು ಬಹಳಷ್ಟು ಜನ ಬಂದಿದ್ದಾರೆ.

-ಹನುಮಂತಗೌಡ ಯಲಬುರ್ಗಾ

ಬೆದರಿಕೆ ಒಡ್ಡಿದ ದಲ್ಲಾಳಿ!

ಸಂಕಷ್ಟಕ್ಕೆ ಸಿಲುಕಿದ ರೈತರು ಜಾನುವಾರು ಮಾರಾಟ ಮಾಡಲು ಮುಂದಾದರೆ ಅದರಲ್ಲೇ ಒಂದಷ್ಟು ಲಾಭ ಮಾಡಿಕೊಳ್ಳಲು ದಲ್ಲಾಳಿಗಳು ಲಾಭಿ ನಡೆಸುತ್ತಿದ್ದ ಚಿತ್ರಣ ಕಂಡು ಬಂದಿತು. ಜಾನುವಾರು ಮಾರುವ ಹಾಗೂ ಕೊಡುವವರ ಎದುರು ನೇರವಾಗಿ ವ್ಯವಹಾರ ಮಾತನಾಡದೇ ಇಬ್ಬರನ್ನೂ ಪ್ರತ್ಯೇಕವಾಗಿರಿಸಿ ವಹಿವಾಟು ನಡೆಸಲಾಗುತ್ತಿತ್ತು. ಇನ್ನೂ ಕೆಲ ದಲ್ಲಾಳಿಗಳು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ತಾವು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ತೊಡಗಿದ್ದರು. ಕ್ಯಾಮೆರಾ ಕಂಡ ದಲ್ಲಾಳಿಯೊಬ್ಬ ’ನೀವೇಕೆ ಇಲ್ಲಿ ಬಂದಿದ್ದೀರಿ. ಯಾಕೆ ಫೋಟೊ ತೆಗೆಯುತ್ತೀರಿ’ ಎಂದು ಖಾರವಾಗಿ ಪ್ರಶ್ನಿಸಿದರು. ’ಇದು ನಮ್ಮ ಕೆಲಸ ನಿಮ್ಮ ಕೆಲಸ ನೀವು ಮಾಡಿ’ ಎಂದರೆ ಫೋಟೊ ತೆಗೆದರೆ ಸುರಕ್ಷಿತವಾಗಿ ಇಲ್ಲಿಂದ ಹೋಗುವುದಿಲ್ಲ’ ಎಂದು ಬೆದರಿಕೆಯೊಡ್ಡಿದ. ಸಂತೆ ಜಾಗ ಪ್ರವೇಶಿಸಿದಾಗಿನಿಂದ ಹೊರಬರುವ ತನಕ ಆ ದಲ್ಲಾಳಿ ‘ಯಾಕೆ ಫೋಟೊ ತೆಗೆಯುತ್ತೀರಿ’ ಎಂದು ಪದೇ ಪದೇ ಪ್ರಶ್ನಿಸುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT