ಬುಧವಾರ, ಡಿಸೆಂಬರ್ 8, 2021
28 °C
ತಾಲ್ಲೂಕು ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದ್ದರೂ ಸೌಲಭ್ಯ ಕೊರತೆ

ಕೊಪ್ಪಳ: ಹೆಸರಿಗೆ 100 ಹಾಸಿಗೆ ಆಸ್ಪತ್ರೆ, 30 ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ಪಟ್ಟಣದ ತಾಲ್ಲೂಕು ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದೆ. ಆದರೆ ವಿವಿಧ ಹುದ್ದೆಗಳು ಖಾಲಿ ಇದ್ದು, ಸಮರ್ಪಕ ಹಾಗೂ ಸೂಕ್ತ ಚಿಕಿತ್ಸೆಗೆ ರೋಗಿಗಳು ಪರದಾಡುತ್ತಿದ್ದಾರೆ.

ಮೂವರು ವಿಶೇಷ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಸಾಕಷ್ಟು ಸಂಖ್ಯೆಯ ವಿವಿಧ ಹುದ್ದೆಗಳು ಖಾಲಿ ಇವೆ. ಅವರ ಪರವಾಗಿ ಬಿಎಎಂಸಿ ಪದವಿ ಪಡೆದ ವೈದ್ಯರು ಇದ್ದಾರೆ. ತಾಲ್ಲೂಕಿಗೆ ಸಂಬಂಧಿಸಿದಂತೆ ಮಂಜೂರಾದ 15 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಪೈಕಿ 4 ಜನರು ಕಾರ್ಯನಿರ್ವಹಿಸುತ್ತಿದ್ದು, 11 ಸ್ಥಾನಗಳು ಖಾಲಿ ಉಳಿದಿವೆ. ತಜ್ಞ ವೈದ್ಯರ ಪೈಕಿ ಮಂಜೂರಾದ 9 ಹುದ್ದೆಗಳಲ್ಲಿ ಕೇವಲ ಒಬ್ಬರು ಮಾತ್ರ ನೇಮಕಗೊಂಡಿದ್ದು, ಇನ್ನೂ 8 ಹುದ್ದೆಗಳು ಖಾಲಿ ಉಳಿದಿವೆ.

'ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿವೆ. ಎಲ್ಲ ಕೇಂದ್ರಗಳಲ್ಲಿ ಸಾಕಷ್ಟು ಔಷಧಿ ಸಂಗ್ರಹ ಇರುವುದರಿಂದ ಯಾವುದೇ ರೋಗಿಗಳಿಗೆ ಔಷಧಿ ಕೊರತೆಯಾಗಿಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಕ್ಷ-ಕಿರಣ ಯಂತ್ರ, ಡಯಾಲಿಸಿಸ್ ಸೌಲಭ್ಯಗಳಿವೆ. ಅದಕ್ಕೆ ತಜ್ಞ ಸಿಬ್ಬಂದಿಯೂ ಇದ್ದಾರೆ. ಸ್ಕ್ಯಾನಿಂಗ್ ಯಂತ್ರ ಅಳವಡಿಸುವುದು ಅಗತ್ಯವಿದೆ' ಎಂದು ಹಿರಿಯ ಆರೋಗ್ಯಾಧಿಕಾರಿ ಪಿ.ವೈ.ಮ್ಯಾಗೇರಿ ತಿಳಿಸಿದ್ದಾರೆ.

ಅದೇ ರೀತಿ ಪ್ರಥಮ ದರ್ಜೆ ಸಹಾಯಕ 9 ಹುದ್ದೆ ಕೂಡಾ 9 ಹುದ್ದೆಗಳು ಖಾಲಿಯಿವೆ. ಹೀಗೆ ಬಹುತೇಕ ವಿವಿಧ ಹುದ್ದೆಗಳು ವಿವಿಧ ಕೇಂದ್ರಗಳಲ್ಲಿ ಖಾಲಿ ಇರುವುದರಿಂದ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರಕುತ್ತಿಲ್ಲ. ಹಾಗೆಯೇ ಸಕಾಲದಲ್ಲಿ ವಿವಿಧ ಹುದ್ದೆಗಳನ್ನು ನೇಮಿಸಿಕೊಳ್ಳದೆ ನಿರ್ಲಕ್ಷ್ಯ ತೋರುವುದರಿಂದ ಆರೋಗ್ಯ ಸೇವೆ ಸಮರ್ಪಕವಾಗುತ್ತಿಲ್ಲ ಎಂದು ಕನ್ನಡಪರ ಸಂಘಟನೆಯ ಮುಖಂಡ ರಾಜಶೇಖರ ಶ್ಯಾಗೋಟಿ ಹೊಸಳ್ಳಿ ಹೇಳುತ್ತಾರೆ.

ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಸಿಬ್ಬಂದಿ ಗೃಹಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಾಗರಿಕ ಸೌಲಭ್ಯಗಳ ಸಂಕೀರ್ಣ ಕೂಡಾ ನಿರ್ಮಾಣಗೊಂಡಿದೆ. ಅವುಗಳು ಬಳಕೆಯಾಗಿಲ್ಲ. ಆವರಣವನ್ನು ಅಭಿವೃದ್ಧಿಗೊಳಿಸಿದರೆ ಉತ್ತಮ ವಾತಾವರಣ ನಿರ್ಮಾಣಗೊಳ್ಳುತ್ತದೆ. ಇನ್ನೂ ಹೆಚ್ಚಿನ ಸೇವೆಗಾಗಿ ತಜ್ಞ ವೈದ್ಯರ ನೇಮಕವಾಗಬೇಕಾಗಿದೆ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಮೇಟಿ.

ಹಿರೇವಂಕಲಕುಂಟಾ, ಕುಕನೂರು ಹಾಗೂ ಯಲಬುರ್ಗಾ ಕೇಂದ್ರಗಳಿಗೆ ವಿವಿಧ ರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಚಿಕಿತ್ಸೆಗೆ ಬಹಳ ಹೊತ್ತು ಕಾಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರೇವಂಕಲಕುಂಟಾ ಗ್ರಾಮಕ್ಕೆ ದೂರದ ಗ್ರಾಮಗಳಿಂದ ಚಿಕಿತ್ಸೆಗಾಗಿ ಬರುತ್ತಿದ್ದು, ಅಗತ್ಯ ಸೌಲಭ್ಯಗಳಿದ್ದರೂ ಸಿಬ್ಬಂದಿ ಕೊರತೆ ಕಾಡುತ್ತಿದೆ.

ಯಲಬುರ್ಗಾ, ಕುಕನೂರು, ಮಂಗಳೂರು ಹಾಗೂ ಹಿರೇವಂಕಲಕುಂಟಾ ಕೇಂದ್ರಗಳಲ್ಲಿ ಆಪ್ತಸಮಾಲೋಚನಾ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಕೂಡಾ ಏಡ್ಸ್ ರೋಗ ನಿಯಂತ್ರಣದಲ್ಲಿ ಸಕ್ರಿಯವಾಗಿವೆ.

ಸಿಬ್ಬಂದಿ ಕೊರತೆ: ವೈದ್ಯರು, ತಜ್ಷರು ಒಳಗೊಂಡಂತೆ ಒಟ್ಟು ವಿವಿಧ 30ಕ್ಕೂ ಅಧಿಕ ಮಾದರಿಯ ಹುದ್ದೆಗಳಿಗೆ ಸಂಬಂಧಿಸಿದಂತೆ ಮಂಜೂರಾದ 562 ಹುದ್ದೆಗಳಲ್ಲಿ 410 ಕಾರ್ಯನಿರ್ವಹಿಸುತ್ತಿದ್ದಾರೆ. 152 ಹುದ್ದೆಗಳು ಖಾಲಿ ಉಳಿದಿವೆ ಇದು ತಾಲ್ಲೂಕಿನ ಆರೋಗ್ಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ರೋಗಿಗಳು: ಜೂನ್18ರ ಅಂತ್ಯಕ್ಕೆ ತಾಲ್ಲೂಕಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಒಳ ಮತ್ತು ಹೊರ ರೋಗಿಗಳಿಗೆ ಸಂಬಂಧಿಸಿದಂತೆ, 948 ಪುರುಷ, 1,905 ಮಹಿಳೆ ಹಾಗೂ 277 ಮಕ್ಕಳು ಸೇರಿ ಒಟ್ಟು 3,130 ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಹುತೇಕ ರೋಗಿಗಳು ಗುಣಮುಖರಾಗಿದ್ದಾರೆ. ಅಗತ್ಯ ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸೆ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ತಿಳಿಸಿದರು.

 ಜಿಲ್ಲೆಯ ವಿವಿಧ ತಾಲ್ಲೂಕಿಗೆ ಹೋಲಿಸಿದರೆ ಯಲಬುರ್ಗಾ ತಾಲ್ಲೂಕು (ಕುಕನೂರು ಸೇರಿ) ಹೆಚ್ಚಿನ ಆರೋಗ್ಯ ಕೇಂದ್ರಗಳನ್ನು ಹೊಂದಿದೆ. ಬಹುತೇಕ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿರುವುದಲ್ಲದೇ ಅಗತ್ಯ ಸೌಲಭ್ಯಗಳನ್ನು ಹೊಂದಿವೆ. ಆದರೆ ಎಲ್ಲ ಕೇಂದ್ರಗಳಲ್ಲಿ ವಿವಿಧ ಮಟ್ಟದ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಕೊರತೆಗಳ ನಡುವೆಯೂ ತಾಲ್ಲೂಕಿನಾದ್ಯಂತ ಪ್ರತಿ ತಿಂಗಳು ಸುಮಾರು 30ರಿಂದ 32 ಸಾವಿರ ಸಂಖ್ಯೆಯಲ್ಲಿ ಒಳ ಮತ್ತು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ 
ಉಮಾಶಂಕರ ಬ.ಹಿರೇಮಠ

  ಈ ಕೋಟ್‌ಗಳಿಗೆ ಚಿತ್ರವಿಲ್ಲ

ಒಂದೆರಡು ಕೇಂದ್ರಗಳಲ್ಲಿ ಸಣ್ಣಪುಟ್ಟ ಸೌಲಭ್ಯಗಳ ಕೊರತೆ ಹೊರತುಪಡಿಸಿ ಉಳಿದಂತೆ ಎಲ್ಲ ಕೇಂದ್ರಗಳಲ್ಲಿ ಸರಿಯಾದ ವೈದ್ಯಕೀಯ ಸೇವೆ ನಡೆಯುತ್ತಿದೆ. ಲಭ್ಯವಿರುವ ಸಿಬ್ಬಂದಿಯನ್ನು ವಿವಿಧ ಕೇಂದ್ರಗಳಿಗೆ ನಿಯೋಜನೆ ಮಾಡಿ ಸೇವೆ ಪಡೆಯಲಾಗುತ್ತಿದೆ
ಮಲ್ಲಿಕಾರ್ಜುನ ಮೇಟಿ, ತಾಲ್ಲೂಕು ವೈದ್ಯಾಧಿಕಾರಿ

ತಾಲ್ಲೂಕು ಆಸ್ಪತ್ರೆಗೆ ಸುತ್ತಲಿನ ಹಳ್ಳಿ ಹಾಗೂ ಪಟ್ಟಣದ ಜನತೆ ಹೆಚ್ಚಾಗಿ ಬರುತ್ತಾರೆ. ಎಲ್ಲ ಕಡೆಗೆ ಇರುವ ವೈದ್ಯರ ಸಮಸ್ಯೆ ಇಲ್ಲಿಯೂ ಇದೆ. ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ನಮ್ಮ ಮೇಲಿರುವ ಒತ್ತಡವೂ ಕಡಿಮೆಯಾಗುತ್ತದೆ
ಹಿರಿಯ ಆರೋಗ್ಯಾಧಿಕಾರಿ ಪಿ.ವೈ.ಮ್ಯಾಗೇರಿ

ವಿವಿಧ ಕೇಂದ್ರಗಳಿಗೆ ನೇಮಕಗೊಳ್ಳುವ ವೈದ್ಯಾಧಿಕಾರಿಗಳಿಗೆ ವಾಸ್ತವ್ಯಕ್ಕೆ ಸೂಕ್ತ ವಸತಿ ಗೃಹ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೇ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವುದರಿಂದ ವೈದ್ಯರ ಕೊರತೆ ಎದ್ದುಕಾಣುತ್ತಿದೆ.
– ರಾಜಶೇಖರ ಶ್ಯಾಗೋಟಿ, ಕನ್ನಡಪರ ಸಂಘಟನೆಯ ಮುಖಂಡ, ಹೊಸಳ್ಳಿ

ಹೆಸರಿಗೆ ಮಾತ್ರ 100 ಹಾಸಿಗೆ ಆಸ್ಪತ್ರೆ!

ಕಳೆದ ಐದು ವರ್ಷಗಳ ಹಿಂದೆಯೇ ಯಲಬುರ್ಗಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಯ ಸ್ಥಾನಮಾನ ಕಲ್ಪಿಸಿ ಕಟ್ಟಡ ಉದ್ಘಾಟನೆಯಾಗಿದ್ದರೂ ಇನ್ನೂವರೆಗೂ ಅಧಿಕೃತವಾಗಿ ಉನ್ನತೀಕರಣಗೊಂಡಿಲ್ಲ.

2013ರಲ್ಲಿ ಸರ್ಕಾರದ ರಚನೆಗೊಂಡ ಆರೇಳು ತಿಂಗಳಲ್ಲಿಯೇ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಹಾಸಿಗೆಯ ಆಸ್ಪತ್ರೆ ಉದ್ಘಾಟಿಸಿ ಜನರ ಬಳಕೆಗೆ ಅನುಕೂಲ ಕಲ್ಪಿಸಿದ್ದನ್ನು ಬಿಟ್ಟರೆ ಅಧಿಕೃತವಾಗಿ ಸರ್ಕಾರದ ಮಟ್ಟದಲ್ಲಿ ಇನ್ನೂ ಮೇಲ್ದರ್ಜೆಗೇರಿಲ್ಲ.

ಜನಪ್ರತಿನಿಧಿಗಳು ಕಾಳಜಿ ತೋರದೇ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇನ್ನೂವರೆಗೂ 30 ಹಾಸಿಗೆ ಆಸ್ಪತ್ರೆಯಾಗಿಯೇ ಉಳಿದಿದೆ. ಹೆಸರಿಗೆ ಮಾತ್ರ 100 ಹಾಸಿಗೆಯ ಆಸ್ಪತ್ರೆ ಎಂದು ಗುರುತಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು