ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭೂಮಿ ಖರೀದಿಗೂ ಇದೆ ಅನುದಾನ’

ಜಿಲ್ಲೆ, ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ಬಸವರಾಜ ರಾಯರಡ್ಡಿ ಸಭೆ
Published 19 ಜೂನ್ 2024, 15:35 IST
Last Updated 19 ಜೂನ್ 2024, 15:35 IST
ಅಕ್ಷರ ಗಾತ್ರ

ಕೊಪ್ಪಳ: ‘ವಿವಿಧ ಕಾಮಗಾರಿಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ಬಿಡುಗಡೆಯಾದರೂ ಜಮೀನು ಸಿಗುತ್ತಿಲ್ಲ ಎಂದು ಬಹುತೇಕ ಇಲಾಖೆಗಳ ಅಧಿಕಾರಿಗಳು ಹೇಳುತ್ತಿದ್ದು, ಜಮೀನು ಖರೀದಿ ಮಾಡಲು ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ಜಮೀನು ಸಿಗುತ್ತಿಲ್ಲ ಎಂದು ಅಧಿಕಾರಿಗಳು ಸುಮ್ಮನೆ ಕೂಡಬಾರದು’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೂ ಆದ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಯಲಬುರ್ಗಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಜೂರಾದ ಶಾಲೆಗಳಿಗೆ ಜಮೀನು ಲಭ್ಯತೆ, ಜಮೀನಿನ ಬೇಡಿಕೆಯ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಂದ ಮಾಹಿತಿ ಪಡೆದರು. ನಮ್ಮ ಜಿಲ್ಲೆಗೆ ಮಂಜೂರಾದ ಶಾಲೆಗಳಿಗೆ ಅನುದಾನ ನೀಡಲಾಗಿದೆ. ಆದ್ದರಿಂದ ಶಾಲೆಗಳಿಗೆ ನಿವೇಶನ ಲಭ್ಯವಿದ್ದ ಕಡೆಗಳಲ್ಲಿ ವಾರದೊಳಗೆ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಬೇಕು. ಡಿಡಿಪಿಐ ಮತ್ತು ತಹಸೀಲ್ದಾರರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಕೊಪ್ಪಳ ವಿಶ್ವವಿದ್ಯಾಲಯ ನಿರ್ಮಾಣ, ಜಿಲ್ಲಾ ನ್ಯಾಯಾಲಯ ನಿರ್ಮಾಣ, ಕೌಶಲ ಅಭಿವೃದ್ಧಿ ಕೇಂದ್ರ ನಿರ್ಮಾಣ ಸೇರಿದಂತೆ ಮಹತ್ವದ ಕಟ್ಟಡ ನಿರ್ಮಾಣಗಳಿಗೆ ಅವಶ್ಯವಿರುವಷ್ಟು ಜಮೀನು ನೀಡುವುದರ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು. ಕುಕನೂರ, ಕಾರಟಗಿ ಮತ್ತು ಕನಕಗಿರಿಯಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆಯ, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ  ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿ.ವಿ.ಗಳ ಕುಲಸಚಿವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT