ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು | ಬಿಡಾಡಿ ದನಗಳ ಹಾವಳಿ ತಡೆಯಲು ಆಡಳಿತ ವಿಫಲ: ಸಂಚಾರಕ್ಕೆ ತೊಂದರೆ

ಮಂಜುನಾಥ್ ಎಸ್. ಅಂಗಡಿ
Published 20 ಮೇ 2024, 5:07 IST
Last Updated 20 ಮೇ 2024, 5:07 IST
ಅಕ್ಷರ ಗಾತ್ರ

ಕುಕನೂರು: ಪಟ್ಟಣ ಬಹುತೇಕ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ವಾಹನ ಸವಾರರು, ಜನರು, ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 30ರಿಂದ 40 ದನಗಳು ನಿತ್ಯ ಕಂಡು ಬರುತ್ತವೆ. ರಸ್ತೆ ಮೇಲೆ ಕುಳಿತರೆ ಮೇಲೆ ಏಳುವುದೇ ಇಲ್ಲ.

ವೀರಭದ್ರಪ್ಪ ವೃತ್ತ, ಸಂತೆ ಬೇಜಾರು, ತೇರಿನ ಗಡ್ಡಿ, ಬಸ್ ನಿಲ್ದಾಣ ಮುಂದಿನ ರಸ್ತೆ ಮೇಲೆ ಕುಳಿತುಕೊಳ್ಳುವ ದನಗಳು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ. ಕೆಲವೊಮ್ಮೆ ವಾಹನಗಳು ದನಗಳ ಕಾಲುಗಳ ಮೇಲೆಯೇ ಹಾದು ಹೋಗಿರುವ ಘಟನೆಗಳೂ ನಡೆದಿವೆ. ಆದರೂ ದನಗಳ ಮಾಲೀಕರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಪಟ್ಟಣ ಪಂಚಾಯಿತಿ ಸದಸ್ಯರ ಆಯ್ಕೆಯಾದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ಸರ್ಕಾರದಿಂದ ಆದೇಶ ಬಂದಿಲ್ಲ. ಹೊಸ ಸದಸ್ಯರು ಆಯ್ಕೆಯಾದ ಬಳಿಕ ಒಂದೂ ಸಭೆ ನಡೆದಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳ ಪರಿಹಾರ ಬಗ್ಗೆ ಯೋಚನೆಯನ್ನೇ ಮಾಡಿಲ್ಲ.

‘ಬಿಡಾಡಿ ದನಗಳನ್ನು ನಿಯಂತ್ರಿಸುವಂತೆ ಸಾರ್ವಜನಿಕರು ಲಿಖಿತ ಮನವಿ ಕೊಟ್ಟರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕರೆ ಮಾಡಿ ತಿಳಿಸಿದರೂ ಬೆಲೆ ಕೊಡುತ್ತಿಲ್ಲ’ ಎಂದು ಯುವಕ ರುದ್ರೇಶ್ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಧ ವ್ಯಕ್ತಪಡಿಸಿದರು.

ಮಾರುಕಟ್ಟೆಯಲಂತೂ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಮಾರಟಕ್ಕೆ ಇಟ್ಟ ಹಣ್ಣು–ತರಕಾರಿಗಳನ್ನು ತಿನ್ನಲು ನುಗ್ಗಿ ಬರುತ್ತವೆ. ದನಗಳನ್ನು ಮಾರುಕಟ್ಟೆಯಿಂದ ಓಡಿಸಲು ವ್ಯಾಪಾರಿಗಳು ಹರಸಾಹಸ ಪಡುವಂತಾಗಿದೆ. ಒಂದು ಕಡೆ ಓಡಿಸಿದರೆ ಮತ್ತೊಂದು ಅಂಗಡಿಗಳಿಗೆ ನುಗ್ಗುತ್ತವೆ. ನಿತ್ಯ ವ್ಯಾಪಾರ ಮಾಡುವುದಕ್ಕಿಂತ ಹೆಚ್ಚಾಗಿ ದನ ಓಡಿಸುವುದೇ ದೊಡ್ಡ ಕೆಲಸವಾಗಿದೆ. ಸಂತೆಯ ದಿನ ವ್ಯಾಪಾರಕ್ಕೆ ಬಂದ ಮಕ್ಕಳು, ಮಹಿಳೆಯರು, ವೃದ್ಧರು ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣದಲ್ಲಿ ಗೂಳಿಗಳ ಹಾವಳಿಯೂ ಹೆಚ್ಚಿದೆ. ಮಾರುಕಟ್ಟೆ, ಬಸ್‌ ನಿಲ್ದಾಣ ಹಾಗೂ ಚಳೇಶ್ವರ ದೇವಸ್ಥಾನದ ಪರಿಸರದಲ್ಲಿ ಅಲೆದಾಡುತ್ತಿವೆ. ಕೆಲ ದಿನಗಳ ಹಿಂದೆ ಎರಡು ಗೂಳಿಗಳು ಮಾರುಕಟ್ಟೆ ಪ್ರದೇಶದಲ್ಲಿ ಕಾದಾಟಕ್ಕೆ ಇಳಿದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದವು.

‘ರಸ್ತೆ ಮೇಲೆ ಕುಳಿತುಕೊಳ್ಳುವ ಬಿಡಾಡಿ ದನಗಳನ್ನು ಹಿಡಿದು ಕೊಂಡವಾಡ ಅಥವಾ ಗೋಶಾಲೆಗಳಿಗೆ ಕಳಿಸಿ ಮಾಲೀಕರಿಗೆ ದಂಡ ವಿಧಿಸಬೇಕು. ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ

ರಸ್ತೆಯಲ್ಲಿ ಸಂಚಾರಕ್ಕೆ ಬಹಳ ಅಡಚಣೆಯಾಗುತ್ತಿದೆ. ದನಗಳು ದ್ವಿಚಕ್ರ ವಾಹನಗಳಿ ಅಡ್ಡವಾಗಿ ನಿಲ್ಲುತ್ತವೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀಡಾಡಿ ದನಗಳ ಹಾವಳಿ ತಡೆಗೆ ಮುಂದಾಗಬೇಕು
ಯಮನೂರ್ ನಾಯಕ್ ಪಟ್ಟಣದ ನಿವಾಸಿ
ರಸ್ತೆ ಮೇಲೆ ದನಗಳನ್ನು ಬಿಡುವ ಮಾಲೀಕರನ್ನು ಗುರುತಿಸಿ ಎಚ್ಚರಿಕೆ ನೀಡಲಾಗಿದೆ. ರಸ್ತೆಯಲ್ಲಿ ದನಗಳು ಕಂಡು ಬಂದರೆ ತಕ್ಷಣ ಗೋಶಾಲೆಗೆ ಕಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ
ರವಿ.ಬಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT