ಯಲಬುರ್ಗಾ: ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ಕ್ಷೌರ ಮಾಡುವಾಗ ಉಂಟಾದ ತಂಟೆಯು ತೀವ್ರ ಸ್ವರೂಪಕ್ಕೆ ತಿರುಗಿ ಕ್ಷೌರಿಕ ಮುದಕಪ್ಪ ಹಡಪದ ಕತ್ತರಿಯಿಂದ ಇರಿದ ಪರಿಣಾಮ ಹನಮಂತ ಬಂಡಿಹಾಳ(29) ಮೃತಪಟ್ಟಿದ್ದಾರೆ. ಈ ಸಂಬಂಧ ಯಲಬುರ್ಗಾ ಠಾಣೆಯಲ್ಲಿ ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಇನ್ನು, ಮಾಟಲದಿನ್ನಿ ಗ್ರಾಮದ ಬಳಿ ಶನಿವಾರ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಹುನಗುಂದ ಮೂಲದ ಕಾರು ಚಾಲಕ ನರೇಶರಾಂ ತೇಜುರಾಂ (30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅವಘಡದಲ್ಲಿ ಮೂವರಿಗೆ ಗಾಯವಾಗಿವೆ. ಸೀಮಾದೇವಿ ನರೇಶರಾಂ, ಕೃಷ್ಣಾ ಉದಾರಾಂ, ಸೋನಾರಾಂ ಮನ್ನಾರಾಂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿಯಲ್ಲಿ ಮುತ್ತಪ್ಪ ಹಡಪದ ಎಂಬುವರು ಲಾರಿಯನ್ನು ರಸ್ತೆಯ ಮೇಲೆಯೇ ಯಾವುದೇ ಇಂಡಿಕೇಟರ್ ಹಾಕದೇ ನಿಲ್ಲಿಸಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.