ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ ಚಿರತೆ ಜಾಡು

ಸಕ್ರೆಬೈಲಿನ ಆನೆಗಳು ವಾಪಸ್‌: ಅರಣ್ಯ ಇಲಾಖೆಯಿಂದ ಮುಂದುವರಿದ ಕಾರ್ಯಾಚರಣೆ
Last Updated 9 ಜನವರಿ 2021, 16:06 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ವ್ಯಾಪ್ತಿಯಲ್ಲಿ ನರಭಕ್ಷಕ ಚಿರತೆ ಸೆರೆಗೆ 6 ದಿನ ನಡೆದ ಕಾರ್ಯಾಚರಣೆ ಫಲಪ್ರದವಾಗದ ಕಾರಣ ಶುಕ್ರವಾರ ಕುಂತಿ ಮತ್ತು ಸಾಗರ ಎಂಬ ಎರಡು ಆನೆಗಳನ್ನು ವಾಪಸ್ ಸಕ್ರೈಬೈಲು ಶಿಬಿರಕ್ಕೆ ಕಳುಹಿಸಲಾಯಿತು.

ವಿರುಪಾಪುರ ಗಡ್ಡಿ, ಸಣಾಪುರ, ಆನೆಗೊಂದಿ, ಚಿಕ್ಕರಾಂಪುರ, ಜಂಗ್ಲಿ, ಹನುಮನಹಳ್ಳಿ, ಅಂಜನಾದ್ರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಆನೆಗಳ ಜೊತೆ 11 ಮಂದಿ ಚಿರತೆಗಾಗಿ ಶೋಧ ನಡೆಸಿದ್ದರು. ಆದರೆ, ಪ್ರಯೋಜನವಾಗಲಿಲ್ಲ.

ಆನೆಗೊಂದಿಯ ಭೌಗೋಳಿಕ ಪ್ರದೇಶವು ಬಂಡೆಗಲ್ಲು, ಬೆಟ್ಟಗುಡ್ಡಗಳಿಂದ ಕೂಡಿದ್ದು, ಚಿರತೆಯು ಅಲ್ಲಲ್ಲಿ ಗುಹೆಗಳಲ್ಲಿ ಅಡಗಿರುವ ಸಾಧ್ಯತೆ ಇದೆ. ಇಂಥ ಪ್ರದೇಶಗಳಲ್ಲಿ ಆನೆಗಳು ಸುಲಭವಾಗಿ ಓಡಾಡುವುದು ಕಷ್ಟ ಎಂಬ ಕಾರಣಕ್ಕೆ ಕಾರ್ಯಾಚರಣೆ ಕೈ ಬಿಡಲಾಯಿತು.

ಚಿರತೆಯ ಜಾಡು ಪತ್ತೆ ಮಾಡಲೆಂದೇ ಅರಣ್ಯ ಇಲಾಖೆಯು 52 ಕ್ಯಾಮರಾಗಳನ್ನು ಅಳವಡಿಸಿದೆ. ಲೈನ್ ಸರ್ವೆ ಅನುಸಾರ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ ದಿನ ಬೆಟ್ಟಗುಡ್ಡಗಳನ್ನು ಸುತ್ತಿ ಚಿರತೆ ಸುಳಿವಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅವರು ಚಿರತೆಯ ಮಲ, ಮೂತ್ರ, ಕೂದಲು ಪತ್ತೆಯಾಗಿದ್ದು ಮಾಹಿತಿ ಕಲೆಹಾಕುತ್ತಿದ್ದಾರೆ.

ಜಾಗೃತಿ : ‘ಆನೆಗೊಂದಿ ವ್ಯಾಪ್ತಿಯ ಗ್ರಾಮಗಳಾದ ಸಣಾಪುರ, ಹನುಮನಹಳ್ಳಿ, ಜಂಗ್ಲಿ, ರಂಗಾಪುರ, ಚಿಕ್ಕರಾಂಪುರ, ಕರಿಯಮ್ಮನಗಡ್ಡಿ, ವಿರುಪಾಪುರಗಡ್ಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಜೆ 6 ರಿಂದ ಬೆಳಗಿನ ಜಾವ 6 ರವರೆಗೆ ಒಬ್ಬೊಬ್ಬರೇ ತಿರುಗಾಬಾರದು. ಕೃಷಿ ಕೆಲಸಕ್ಕೆ ಹೋಗುವಾಗಲೂ ಕೈಯಲ್ಲಿ ಯಾವುದಾರೂ ಆಯುಧ ಇಟ್ಟುಕೊಂಡು ಓಡಾಡಬೇಕು. ಸಂಜೆ ವೇಳೆ ಮಕ್ಕಳನ್ನು ಹೊರಗಡೆ ಆಡಲು ಬಿಡಬಾರದು’ ಎಂದು ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಕರಪತ್ರಗಳನ್ನೂ ಹೊರಡಿಸಿದ್ದಾರೆ.

ಬೋನಿಗೆ ಬಿದ್ದ ಚಿರತೆ

ಕನಕಗಿರಿ: ಕಳೆದ ಇಪ್ಪತ್ತು ದಿನಗಳ ಹಿಂದೆ ಈ ಭಾಗದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟುಮಾಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಸಮೀಪದ ಅಡವಿಬಾವಿ ಗ್ರಾಮದ ಪರಿಸರದಲ್ಲಿ ಅಂದಾಜು ನಾಲ್ಕು ವರ್ಷದ ಗಂಡು ಚಿರತೆ ಶನಿವಾರ ನಸುಕಿನ ಜಾವ ಬೋನಿಗೆ ಬಿದ್ದಿದೆ.

ಬೋನಿನ ಒಂದು ಭಾಗದಲ್ಲಿ ನಾಯಿಯನ್ನು ಬಿಟ್ಟು ಉಳಿದ ಭಾಗವನ್ನು ತಪ್ಪಲಿನಿಂದ ಮುಚ್ಚಲಾಗಿತ್ತು. ನಾಯಿ ತಿನ್ನಲು ಬಂದ ಚಿರತೆ ಬೋನಿಗೆ ಬಿದ್ದಿದೆ.

ಅಡವಿಬಾವಿ, ಹುಲಸನಹಟ್ಟಿ, ಬಸರಿಹಾಳ ಹಾಗೂ ಸೋಮಸಾಗರ ಸೇರಿ ವಿವಿಧ ಗ್ರಾಮಗಳ ಜನ ತಂಡೋಪ–ತಂಡವಾಗಿ ಬಂದು ಚಿರತೆ ವೀಕ್ಷಿಸಿದರು. ವಲಯ ಅರಣ್ಯ ಅಧಿಕಾರಿ ಶಿವರಾಜ ಮೇಟಿ ಮಾತನಾಡಿ,‘ಚಿರತೆ ಸೆರೆಗೆ ಬೋನಿನ ವ್ಯವಸ್ಥೆ ಮಾಡಿ ದಿನಲೂ ನಾಯಿಗೆ ಆಹಾರ ನೀಡಲಾಗುತ್ತಿತ್ತು. ಬೋನಿಗೆ ಬಿದ್ದಿದೆ. ಹೊಸಪೇಟೆ ಜಿಲ್ಲೆಯ ಕಮಲಾಪುರ ಪ್ರಾಣಿ ಸಂಗ್ರಹಾಲಯಕ್ಕೆ ಕಳಿಸಿಕೊಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT