ಕೊಪ್ಪಳ: ಭೈರಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭಯಾನಕ

ಗುರುವಾರ , ಮೇ 23, 2019
31 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಟ್ಯಾಂಕ್ ಇದ್ದರೂ ಬಾರದ ನೀರು: ಶುದ್ಧ ನೀರಿನ ಘಟಕ ಬಂದ್

ಕೊಪ್ಪಳ: ಭೈರಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭಯಾನಕ

Published:
Updated:
Prajavani

ಕೊಪ್ಪಳ: ನೀರಿನಲ್ಲಿಯೇ ಇದ್ದು ಬಾಯಾರಿ ಸತ್ತಂತೆ ಎಂಬ ಮಾತಿನಂತೆ ಪಕ್ಕದಲ್ಲಿ ತುಂಗಭದ್ರಾ ನದಿ ಇದ್ದು, ಕುಡಿಯುವ ನೀರಿಗೆ ಪರಿತಪಿಸುವಂತಹ ಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದ್ದು, ಒಂದು ಕೊಡ ನೀರಿಗೆ ಊರ ತುಂಬೆಲ್ಲ ಅಲೆದಾಡುವ ಪರಿಸ್ಥಿತಿ ತಾಲ್ಲೂಕಿನ ಭೈರಾಪುರ ಗ್ರಾಮದಲ್ಲಿ ಇದೆ.

ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಡಾ ಜನರ ಕೈಗೆ ಸಿಗುತ್ತಿಲ್ಲ. ಗ್ರಾಮದಲ್ಲಿ ಓವರ್ ಹೆಡ್‌ ಟ್ಯಾಂಕ್ ಅನ್ನು 2014ರಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ರಾಘವೇಂದ್ರ ಹಿಟ್ನಾಳ ಅವರು ನಿರ್ಮಿಸಿದ್ದರು. ನಂತರ ಎರಡು ಬಾರಿ ಅವರೇ ಶಾಸಕರಾಗಿದ್ದರೂ ಟ್ಯಾಂಕಿಗೆ ಮಾತ್ರ ನೀರು ಬಂದಿಲ್ಲ. ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಆರಂಭದಲ್ಲಿ ಚೆನ್ನಾಗಿ ನಡೆದು ನಂತರ ಬಂದ್ ಆಯಿತು. ಈಗ ಅದನ್ನು ಕೇಳುವವರು ಯಾರೂ ಇಲ್ಲದಾಗಿದೆ. ನಿರ್ವಹಣೆ ಸೇರಿದಂತೆ ಅನೇಕ ಸಮಸ್ಯೆಗಳು ಇದ್ದು, ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಆಡಳಿತ ಆಸಕ್ತಿ ತೋರಿಸುತ್ತಿಲ್ಲ. ಪರಿಣಾಮವಾಗಿ ಇರುವ ಒಂದೇ ಕೊಳವೆಬಾವಿಗೆ ಜನ ಮುಗಿ ಬಿದ್ದಿದ್ದಾರೆ.

ಬೋಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೈರಾಪುರದ ಜನತೆ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿ ಮನವಿ ಸಲ್ಲಿಸುವುದು, ಸಮಸ್ಯೆ ಹೇಳಿಕೊಳ್ಳಲು ಹೋಗೋಣ ಎಂದರೆ ಪಿಡಿಒ ಮಾತ್ರ ಸಿಗುವುದೇ ಇಲ್ಲ. ಅಪರೂಪಕ್ಕೊಮ್ಮೆ ಬರುತ್ತಾರೆ ಎಂಬುವುದು ಗ್ರಾಮಸ್ಥರ ಆರೋಪ.

212 ಸಮಸ್ಯಾತ್ಮಕ ಗ್ರಾಮ: ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 212 ಸಮಸ್ಯಾತ್ಮಕ ಗ್ರಾಮಗಳು ಎಂದು ಗುರುತಿಸಲಾಗಿದೆ. ಇಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮೇವು, ಗೋಶಾಲೆ ಆಗಬೇಕಾಗಿದೆ. ಗ್ರಾಮಗಳಲ್ಲಿ ವಿವಿಧ ಸಮಸ್ಯೆಗಳಿರುವ ಬಗ್ಗೆ ಪಟ್ಟಿ ಮಾಡಲಾಗಿದ್ದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಎಸ್‌.ಪೆದ್ದಪ್ಪಯ್ಯ.

ಗೊಂದಲ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಪಂಚಾಯಿತಿ ಸದಸ್ಯರು ಆಸಕ್ತಿ ತೋರಿಸುತ್ತಿಲ್ಲ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ. ಅಲ್ಲದೆ ಅಭಿವೃದ್ಧಿಗೆ ಮುಂದಾಗುವ ಬದಲು ತಮ್ಮ ವೈಯಕ್ತಿಯ ಪ್ರತಿಷ್ಠೆಯಿಂದ ನೀರಿನ ಕಾಮಗಾರಿಗೆ ಅಡೆತಡೆ ಉಂಟು ಮಾಡುತ್ತಿದ್ದಾರೆ. ಪಿಡಿಒ ಪಾರ್ವತಿ ಅವರು ಸಮಸ್ಯೆ ಆಲಿಸಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ತೀವ್ರ ಬರಗಾಲದ ಪ್ರದೇಶ ಮತ್ತು ಸತತ ನೀರಿನ ಸಮಸ್ಯೆ ಎದುರಿಸುತ್ತಿರುವ ಭೈರಾಪುರ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕಲ್ಪಿಸಬೇಕು ಎಂಬುವುದು ಜನರ ಒತ್ತಾಯವಾಗಿದೆ. ಸಮೀಪದಲ್ಲಿ ನದಿ ಹರಿಯುತ್ತಿದ್ದರೂ ಇಚ್ಛಾಶಕ್ತಿ ಕೊರತೆಯಿಂದ ಜನ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಬಂದಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !