ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮೂವರಲ್ಲಿ ಸಂಪುಟ ಸೇರುವವರು ಯಾರು?

ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ವಿಸ್ತರಣೆ: ಜಿಲ್ಲೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
Last Updated 29 ಜುಲೈ 2021, 19:30 IST
ಅಕ್ಷರ ಗಾತ್ರ

ಕೊಪ್ಪಳ: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜಿಲ್ಲೆಗೆ ಸಚಿವ ಸ್ಥಾನವಿಲ್ಲದೆಪರದಾಡುತ್ತಿದ್ದ ಶಾಸಕರಿಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇದ್ದು, ಆಕಾಂಕ್ಷಿಗಳಲ್ಲಿ ಸಚಿವ ಸ್ಥಾನದ ಆಸೆ ಗರಿಗೆದರುವಂತೆ ಮಾಡಿದೆ.

ಜಿಲ್ಲೆಯ ಐವರು ಶಾಸಕರಲ್ಲಿ ಇಬ್ಬರು ಕಾಂಗ್ರೆಸ್‌, ಮೂವರು ಬಿಜೆಪಿ ಶಾಸಕರು ಇದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಯಲಬುರ್ಗಾದ ಹಾಲಪ್ಪ ಆಚಾರ್, ಗಂಗಾವತಿಯ ಪರಣ್ಣ ಮುನವಳ್ಳಿ, ಕನಕಗಿರಿ ಕ್ಷೇತ್ರದ ಬಸವರಾಜ ದಡೇಸಗೂರ್ ಬಿಜೆಪಿ ಶಾಸಕರು ಇದ್ದಾರೆ.

ಪರಣ್ಣ ಮುನವಳ್ಳಿ ಎರಡು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರೆ, ದಡೇಸಗೂರ್ ಮತ್ತು ಆಚಾರ್ ಪ್ರಥಮ ಬಾರಿಗೆ ಶಾಸಕರಾಗಿದ್ದಾರೆ. ಅನುಭವ, ಹಿರಿತನ, ಲಿಂಗಾಯತ ರಡ್ಡಿ ಕೋಟಾ ಮತ್ತು ಸಹಕಾರಿ ಕ್ಷೇತ್ರದ ಅನುಭವದ ಆಧಾರದ ಮೇಲೆ ಹಾಲಪ್ಪ ಆಚಾರ್‌ಗೆ ಸಚಿವ ಸ್ಥಾನ ಒಲಿದು ಬರಲಿದೆ ಎಂಬ ನಿರೀಕ್ಷೆ ಇದೆ. ಈ ಹಿಂದೆ ವಿಧಾನ ಪರಿಷತ್‌ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು ರಾಯಚೂರು, ಕೊಪ್ಪಳ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಜಿಲ್ಲೆಗೆ ಸಚಿವ ಸ್ಥಾನ ತಾತ್ಕಾಲಿಕ:ನೂತನ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಒಬ್ಬರೇ ಒಬ್ಬ ಶಾಸಕರು ಪೂರ್ಣಾವಧಿ ಸಚಿವರಾಗಿ ಸೇವೆ ಸಲ್ಲಿಸಿದ ನಿದರ್ಶನ ಇಲ್ಲ. ಹಿಂದಿನ ಸರ್ಕಾರಗಳಲ್ಲಿ ಸಚಿವರಾಗಿದ್ದ ವಿರುಪಾಕ್ಷಪ್ಪ ಅಗಡಿ (ಎರಡೇ ದಿನ), ಇಕ್ಬಾಲ್‌ ಅನ್ಸಾರಿ, ಶಿವರಾಜ ತಂಗಡಗಿ, ಬಸವರಾಜ ರಾಯರಡ್ಡಿ ಪೂರ್ಣಾವಧಿ ಸಚಿವರು ಆಗಿರಲೇ ಇಲ್ಲ.

ಕೊಪ್ಪಳ ಮತ್ತು ಕುಷ್ಟಗಿ ಕ್ಷೇತ್ರಕ್ಕೆ ಒಮ್ಮೆಯೂ ಅವಕಾಶ ದೊರೆತಿಲ್ಲ. ಸತತ ಐದು ಬಾರಿ ಶಾಸಕರಾಗಿದ್ದ ಸಂಗಣ್ಣ ಕರಡಿ ಅವರಿಗೆ ಸಚಿವ ಸ್ಥಾನ ದೊರೆಯಲೇ ಇಲ್ಲ. ಅಲ್ಲದೆ ಜಿಲ್ಲೆಗೆ ಬೇರೆ ಜಿಲ್ಲೆಯ ಸಚಿವರೇ ಉಸ್ತುವಾರಿ ಸಚಿವರು ಹೆಚ್ಚು ಬಾರಿ ಸ್ಥಾನ ಅಲಂಕರಿಸಿದ್ದಾರೆ. ಇದರಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುವುದು ಇಲ್ಲಿನ ರಾಜಕೀಯ ತಜ್ಞರ ಕೊರಗು ಆಗಿದೆ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಮೂರು ವರ್ಷಗಳಲ್ಲಿ 6 ಸಚಿವರು ಜಿಲ್ಲಾ ಉಸ್ತುವಾರಿಯಾಗಿ ಬದಲಾಗಿದ್ದು, ರಾಜಕೀಯ ಜಿದ್ದಾಜಿದ್ದಿಗೆ ಕೊಪ್ಪಳಜಿಲ್ಲೆ ಬಲಿಯಾಗಿದೆ.

ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಲಿಂಗಾಯತ ರಡ್ಡಿ ಸಮುದಾಯಕ್ಕೆ ಸೇರಿದ 10ಕ್ಕೂ ಹೆಚ್ಚು ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಬಲ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯಲಿದೆ ಎಂಬ ಅಂದಾಜಿದೆ. ಈ ಎಲ್ಲ ಪೂರಕ ಅಂಶಗಳನ್ನು ಹೈಕಮಾಂಡ್‌ ಗಣನೆಗೆ ತೆಗೆದುಕೊಂಡಿದ್ದು, ಹಾಲಪ್ಪ ಆಚಾರ್‌ಗೆ ಸಚಿವ ಸ್ಥಾನ ದೊರಕುವ ನಿರೀಕ್ಷೆ ಇದೆ ಎನ್ನಲಾಗಿದೆ.

**
ಜಿಲ್ಲೆಯ ಅಭಿವೃದ್ಧಿ ದೃಷ್ಟಿ ಯಿಂದ ಅವಕಾಶ ನೀಡಬೇಕು. ಮೂವರು ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನದ ಜೊತೆಗೆ ಉಸ್ತುವಾರಿ ನೀಡಿದರೆ ಅಭಿವೃದ್ಧಿಗೆ ಪೂರಕ. ಹೈಕಮಾಂಡ್‌ ನಿರ್ಣಯವೇ ಅಂತಿಮ.
– ಸಂಗಣ್ಣ ಕರಡಿ, ಸಂಸದ

**
ಪಕ್ಷ ಅವಕಾಶ ನೀಡಿದರೆ ಸಚಿವ ಸ್ಥಾನ ನಿಭಾಯಿಸಲಾಗುವುದು. ಅದಕ್ಕೆ ಲಾಬಿ ನಡೆಸುವುದಿಲ್ಲ. ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ.
– ಹಾಲಪ್ಪ ಆಚಾರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT