ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿನ್ನಾಳ ಆಗುವುದೇ ತ್ಯಾಜ್ಯ, ವ್ಯಾಜ್ಯ ಮುಕ್ತ?

Published : 30 ಸೆಪ್ಟೆಂಬರ್ 2024, 4:41 IST
Last Updated : 30 ಸೆಪ್ಟೆಂಬರ್ 2024, 4:41 IST
ಫಾಲೋ ಮಾಡಿ
Comments

ಕೊಪ್ಪಳ: ಕರಕುಶಲ ಕಲೆಗಳ ತವರೂರು ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ಕಿನ್ನಾಳ ಗ್ರಾಮದ ‘ಕಿಸ್ಕಾಲು’ ಗೊಂಬೆಗಳ ಮೊಗದ ಮೇಲಿರುವ ನಗು ಆ ಊರಿನ ಜನರಲ್ಲಿಲ್ಲ. ನಮ್ಮೂರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಹಲವು ಬಾರಿ ಆಗ್ರಹಿಸಿದರೂ ಜನಪ್ರತಿನಿಧಿಗಳು ಕಿವಿಯಾಗಿಲ್ಲ.

ಈ ಗ್ರಾಮಸ್ಥರು ಅಭಿವೃದ್ಧಿಗಾಗಿ ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ. ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಗುಣಮಟ್ಟದ ರಸ್ತೆ ನಿರ್ಮಿಸಿಕೊಟ್ಟು ವಾಹನ ಸವಾರರ ಸಾವು ನೋವುಗಳನ್ನು ತಡೆಗಟ್ಟಿ ಎಂದು ಮಾಡಿದ ಮನವಿಗೆ ಪೂರ್ಣ ಸ್ಪಂದನೆ ಸಿಕ್ಕಿಲ್ಲ.  ಜಿಲ್ಲಾಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಕಿನ್ನಾಳ ಗ್ರಾಮ ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿದ್ದರೂ ವಿಧಾನಸಭಾ ಕ್ಷೇತ್ರ ಮಾತ್ರ 45 ಕಿ.ಮೀ. ದೂರದಲ್ಲಿರುವ ಗಂಗಾವತಿ ಒಳಗೊಂಡಿದೆ. ಆಡಳಿತಾತ್ಮಕವಾಗಿ ಕೊಪ್ಪಳ ತಾಲ್ಲೂಕು ಪಂಚಾಯಿತಿ, ತಹಶೀಲ್ದಾರ್‌ ಕಚೇರಿಗಳು ಕೆಲಸ ಮಾಡಬೇಕಿದ್ದರೂ ವಿಧಾನಸಭಾ ಕ್ಷೇತ್ರ ಗಂಗಾವತಿಯದ್ದು.

ಹೀಗಾಗಿ ಕಿನ್ನಾಳ ಮೇಲಿಂದ ಮೇಲೆ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಇದ್ದು, ಪ್ರಥಮಾದ್ಯತೆಯಾಗಿ ರಸ್ತೆ ನಿರ್ಮಾಣವಾಗಬೇಕಾಗಿದೆ. ಕಿನ್ನಾಳ ಹಾಗೂ ಸುತ್ತಮುತ್ತ ಇರುವ ಮರಳು ಮಾಫಿಯಾದಿಂದಾಗಿ ಭಾರಿ ಗಾತ್ರದ ವಾಹನಗಳ ಓಡಾಟದಿಂದಾಗಿ ರಸ್ತೆಗಳು ಹಾಳಾಗಿವೆ. ಇವುಗಳಿಗೆ ಕಾಯಕಲ್ಪ ನೀಡಿದರೆ ಅರ್ಧ ಸಮಸ್ಯೆ ಪರಿಹಾರದವಾದಂತೆ ಎನ್ನುತ್ತಾರೆ ಆ ಗ್ರಾಮದ ಜನ.

ರಸ್ತೆ  ಸೌಲಭ್ಯ ಕಲ್ಪಿಸಿದರೆ ಅರ್ಧ ಸಮಸ್ಯೆಗಳು ಪರಿಹಾರವಾದಂತೆ. ಇದಕ್ಕಾಗಿ ಕಿನ್ನಾಳದ ಜನ ಹೋರಾಟ ಮಾಡಿದ್ದಾರೆ. ಪಾದಯಾತ್ರೆಯನ್ನೂ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಬಹಳಷ್ಟು ಜನ ಕೂಲಿ ಕೆಲಸ ನಂಬಿಕೊಂಡವರು. ಅದರಲ್ಲಿ ಅನೇಕರು ಭಾಗ್ಯನಗರಕ್ಕೆ ಬರುತ್ತಾರೆ. ಪ್ರತಿ ಕೆಲಸಕ್ಕೂ ಜಿಲ್ಲಾಕೇಂದ್ರವನ್ನು ಅವಲಂಬಿಸಿದ್ದರಿಂದ ಜನರ ಓಡಾಟ ನಿತ್ಯ ಇದ್ದೇ ಇರುತ್ತದೆ.

ಬದಲಾವಣೆಯತ್ತ: ಇತ್ತೀಚೆಗೆ ಮುಗಿದ ಗಣೇಶ ಚತುರ್ಥಿ ಮೆರವಣಿಗೆ ವೇಳೆ ಗ್ರಾಮಸ್ಥರು ಹಾಗೂ ಹಿಂದೂ ಮಹಾಮಂಡಳಿ ಕಾಮನಕಟ್ಟಿ ಗೆಳೆಯರ ಬಳಗ ಡಿ.ಜೆ. ಬಳಕೆಗೆ ಸ್ವಯಂ ನಿರ್ಬಂಧ ಹೇರಿಕೊಂಡು ಆ ಹಣವನ್ನು ರಸ್ತೆ ದುರಸ್ತಿಗೆ ವಿನಿಯೋಗಿಸಿಕೊಂಡಿತ್ತು. ಯುವಕರ ಈ ಕಾರ್ಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಶ್ಲಾಘನೆಗೂ ಪಾತ್ರವಾಗಿದೆ. ಆದ್ದರಿಂದ ನ್ಯಾಯಾಲಯ ಇತ್ತೀಚೆಗೆ ಆ ಯುವಕರನ್ನು ಆಹ್ವಾನಿಸಿ ಚಹಾ ಕೂಟ ನೀಡಿತ್ತು.

ಇದರ ಮುಂದುವರಿದ ಭಾಗವಾಗಿ ನ್ಯಾಯಾಲಯವೇ ಈಗ ಕಿನ್ನಾಳ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಹೊಸ ಶಕೆ ಬರೆಯಲು ಮುಂದಾಗಿದೆ. ಕಿನ್ನಾಳ ವ್ಯಾಜ್ಯಮುಕ್ತ ಹಾಗೂ ತ್ಯಾಜ್ಯ ಮುಕ್ತ ಆಗಬೇಕು ಎನ್ನುವ ಆಶಯ ಹೊಂದಿದೆ. ಅಂದುಕೊಂಡ ಕೆಲಸ ಮಾಡಲು ಈಗಾಗಲೇ ಸರಣಿ ಸಭೆಗಳು ನಡೆದಿದ್ದು, ಅನುಷ್ಠಾನಕ್ಕೆ ತಯಾರಿಯೂ ನಡೆದಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರದ ವಿವಿಧ ಇಲಾಖೆಗಳು ಮತ್ತು ಕಿನ್ನಾಳದ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅ. 2ರಂದು ಸ್ವಚ್ಛತಾ ಕಾರ್ಯಕ್ರಮ ಜರುಗಲಿದೆ. 3ರಂದು ಅಲ್ಲಿನ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ದತ್ತು ಗ್ರಾಮದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾ ನ್ಯಾಯಾಧೀಶರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಿನ್ನಾಳದ ಗ್ರಾಮಸ್ಥರು
ಜಿಲ್ಲಾ ನ್ಯಾಯಾಧೀಶರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಿನ್ನಾಳದ ಗ್ರಾಮಸ್ಥರು

‘ಸೌಲಭ್ಯ ಕಲ್ಪಿಸುವಂತೆ ನಾವು ಅನೇಕ ಬಾರಿ ನಡೆಸಿದ ಜನಮುಖಿ ಹೋರಾಟಗಳಿಗೆ ಸ್ಪಂದನೆ ಸಿಕ್ಕಿಲ್ಲ. ಸಿಕ್ಕರೂ ಆದ ತಾತ್ಪೂರ್ತಿಕ ಮಾತ್ರವಾಗಿತ್ತು. ಈಗ ನ್ಯಾಯಾಲಯವೇ ಮುತುವರ್ಜಿ ವಹಿಸಿ ದತ್ತು ಪಡೆಯುತ್ತಿರುವುದರಿಂದ ನಮ್ಮೂರಿನ ಅರ್ಧದಷ್ಟಾದರೂ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ’ ಎಂದು ಆ ಗ್ರಾಮದ ಕಲಾವಿದ ಲಚ್ಚಣ್ಣ ಹೇಳುತ್ತಾರೆ.

ಕಿನ್ನಾಳದಲ್ಲಿ ರಸ್ತೆ ಚರಂಡಿ ವ್ಯವಸ್ಥೆ ಸರಿ ಹೋಗಬೇಕು. ಕುಡಿಯುವ ನೀರು ಇದ್ದರೂ ಫ್ಲೋರೇಡ್‌ ಅಂಶ ಇರುವ ಕಾರಣ ಜನ ಅನಾರೋಗ್ಯದಿಂದ ಬಳಲುವಂತಾಗಿದೆ.
ಮಂಜುನಾಥ ಸಿರಿಗೇರಿ ಕಿನ್ನಾಳ
ರಸ್ತೆ ಅವ್ಯವಸ್ಥೆಯೇ ಪ್ರಮುಖ ಸಮಸ್ಯೆಯಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತು ಕೊಡುತ್ತಿಲ್ಲ. ಗ್ರಾಮ ದತ್ತು ಪಡೆಯುತ್ತಿರುವ ಕಾರಣ ಅಭಿವೃದ್ಧಿಯಾಗುವ ನಿರೀಕ್ಷೆಯಿದೆ
ಮೌನೇಶ್ ಕಿನ್ನಾಳ ಗ್ರಾಮಸ್ಥ
ಕಿನ್ನಾಳ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಬೇಕಾಗಿದೆ. ಈಗ ನ್ಯಾಯಾಲಯವೇ ಜನಪರ ಕಾರ್ಯಕ್ಕೆ ಮುಂದಾಗಿದ್ದು ಖುಷಿ ನೀಡಿದೆ.
ವೀರೇಶ ನಾಯಕ ಕಿನ್ನಾಳ ಗ್ರಾಮಸ್ಥ
ಜಿಲ್ಲಾ ವಕೀಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಜೊತೆಗೂಡಿ ಈಗ ನ್ಯಾಯಾಲಯವೂ ಗ್ರಾಮವನ್ನು ದತ್ತು ಪಡೆಯಲು ಮುಂದಾಗಿದೆ. ಇನ್ನು ಮುಂದೆ ಆ ಗ್ರಾಮದಲ್ಲಿ ಅಭಿವೃದ್ಧಿ ನಿಶ್ಚಿತ
ಎ.ವಿ. ಕಣವಿ ಜಿಲ್ಲಾ ವಕೀಲರ ಸಂಘ

ಕಿನ್ನಾಳದಲ್ಲಿ ಆಗಬೇಕಾದ ಪ್ರಮುಖ ಕೆಲಸಗಳು

  • ಕೊಪ್ಪಳ–ಕಿನ್ನಾಳ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು.

  • ಹೊಸದಾಗಿ ಗುಣಮಟ್ಟದ ರಸ್ತೆ ನಿರ್ಮಿಸಿ ಭಾರಿ ಗಾತ್ರದ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಬೇಕು.

  • ಗ್ರಾಮದ ಸಮೀಪದಲ್ಲಿಯೇ ಹಿರೇಹಳ್ಳ ಜಲಾಶಯವಿದ್ದರೂ ಜನರಿಗೆ ಫ್ಲೋರೈಡ್‌ ನೀರು ಬಳಕೆ ತಪ್ಪುತ್ತಿಲ್ಲ. ಇದನ್ನು ಸರಿಪಡಿಸಬೇಕು.

  • ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು.

  • ಮದ್ಯ ಅಕ್ರಮ ಮಾರಾಟ ಹಾಗೂ ಮರಳು ಸಾಗಾಣಿಕೆಗೆ ಕಡಿವಾಣ ಬೀಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT