ಬುಧವಾರ, ಏಪ್ರಿಲ್ 14, 2021
31 °C
ವಿವಿಧೆಡೆ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಣೆ: ವನಿತಾ ಗಡಾದ ಅಭಿಮತ

ಪರಿವರ್ತನೆಯಲ್ಲಿ ಸ್ತ್ರೀಯರ ಪಾತ್ರ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನೆಹರೂ ಯುವ ಕೇಂದ್ರ, ಶ್ರೀಮಾತಾ ಮಹಿಳಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ತಾಳಕನಕಾಪುರ ಗ್ರಾಮದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ವನಿತಾ ಗಡಾದ ಮಾತನಾಡಿ,‘ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಜವಾಬ್ದಾರಿ ನಿಭಾಯಿಸಿದ್ದಾರೆ. ಕೇವಲ ಕುಟಂಬಕ್ಕೆ ಸೀಮಿತವಾಗದೆ, ರಾಜಕೀಯ, ಶಿಕ್ಷಣ, ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರ’ ಎಂದು ಹೇಳಿದರು.

ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಾಂಟು ಪಾತರ್, ಕಲಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ವವ್ವ ಈರಪ್ಪ ಕಟ್ಟಿಮನಿ, ಯಲ್ಲಮ್ಮ ಗಂಟಿ, ಶಾವಂತ್ರವ್ವ ಹರಟಿ, ಮರದಾನಿ ಬೀ ಹಾಗೂ ಗೋಹಿಚಂದ್ರ ಇದ್ದರು. ನಾಗರಾಜ ಸ್ವಾಗತಿಸಿದರು. ಹುಚ್ಚಿರಪ್ಪ ಹಂದ್ರಾಳ ವಂದಿಸಿದರು. ಭೂಮಿಕಾ ಎಸ್.ಅಂಗಡಿ ನಿರೂಪಿಸಿದರು.

‘ಸಮಾನವಾಗಿ ಬೆಳೆಸಿ’

ಕೊಪ್ಪಳ: ‘ಮಕ್ಕಳಲ್ಲಿ ಆರಂಭದಿಂದಲೇ ಹೆಣ್ಣು, ಗಂಡು, ಜಾತಿ ಮತವೆಂಬ ಭೇದ ತರದಂತೆ ಬೆಳೆಸಬೇಕು’ ಎಂದು ಹೋರಾಟಗಾರ್ತಿ ಜ್ಯೋತಿ.ಎಂ.ಗೊಂಡಬಾಳ ಹೇಳಿದರು.

ನಗರದ ಕಿನ್ನಾಳ ರಸ್ತೆಯಲ್ಲಿರುವ ಅಭಿನವ ನ್ಯೂ ಡ್ಯಾನ್ಸ್ ಅಕಾಡೆಮಿಯಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಕ್ಕಳ ಮನಸ್ಸು ಬಿಳಿ ಹಾಳೆಯಂತೆ ಅದರಲ್ಲಿ ಏನು ಬರೆಯುತ್ತೀರಿ ಅಥವಾ ಗೀಚುತ್ತೀರಿ ಎಂಬುವುದರ ಅರಿವಿರಬೇಕು. ಬರೆಯುವುದಕ್ಕೂ ಮತ್ತು ಗೀಚುವುದಕ್ಕೂ ಇರುವ ವ್ಯತ್ಯಾಸ ತಿಳಿದುಕೊಂಡು ಅವರನ್ನು ಬೆಳೆಸಬೇಕು. ಸಂಸ್ಕಾರ ಕೇವಲ ಹೆಣ್ಣಿಗಷ್ಟೇ ಬೇಕು, ಗಂಡು ಗೂಳಿಯಾದರೂ ನಡೆಯುತ್ತದೆ ಎಂಬ ಅಹಂ ಇವತ್ತು ಮಹಿಳೆಯ ಅಸುರಕ್ಷತೆಯ ಮುಖ್ಯ ಸಂಗತಿಯಾಗಿದೆ. ಎಷ್ಟೇ ಕಾನೂನು ಮಾಡಿದರೂ ಮನುಷ್ಯ ಬದಲಾಗದ ಹೊರತು ಬದಲಾವಣೆ ಸಾಧ್ಯವಿಲ್ಲ. ಮಾನಸಿಕ ಸ್ಥೀಮಿತತೆ ಉಳಿಸಿಕೊಳ್ಳಲು ನಿರಂತರ ಓದು ಮತ್ತು ಸತ್ಸಂಗ ಅಗತ್ಯ’ ಎಂದರು.

ಅಭಿನವ ನ್ಯೂ ಡ್ಯಾನ್ಸ್ ಅಕಾಡೆಮಿ ಅಧ್ಯಕ್ಷ ರಾಮು ಪೂಜಾರ ಮಾತನಾಡಿ,‘ನಿರಂತರವಾಗಿ ಮಕ್ಕಳು ವಿವಿಧ ಕಲೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಉತ್ತಮ ಕಲಿಕೆಗೆ ಬಳಸಿಕೊಳ್ಳುವ ಮೂಲಕ ತಪ್ಪು ದಾರಿಗೆ ಹೋಗದಂತೆ ಪಾಲಕರು ಎಚ್ಚರಿಕೆ ವಹಿಸಿಕೊಳ್ಳಬೇಕು’ ಎಂದರು.

ವೇದಿಕೆಯಲ್ಲಿ ವಿದ್ಯಾ ಶರಣಪ್ಪ, ಅಶ್ವಿನಿ ಹಿರೇಮಠ ಇತರರು ಇದ್ದರು. ಸಾಹಿತ್ಯ ಗೊಂಡಬಾಳ, ಸ್ಪಂದನ ತಂಡ ಪ್ರಾರ್ಥಿಸಿದರು. ನೃತ್ಯ ಶಿಕ್ಷಕ ಸಲ್ಮಾನ್ ಖಾನ್ ಕಿನ್ನಾಳ ನಿರೂಪಿಸಿ ವಂದಿಸಿದರು.

‘ವೈಜ್ಞಾನಿಕವಾಗಿ ಆಲೋಚನೆ ಮಾಡಿ’

ಕೊಪ್ಪಳ: ‘ಮಹಿಳೆಯರು ಉನ್ನತ ಶಿಕ್ಷಣ ಪಡೆದು ವೈಜ್ಞಾನಿಕವಾಗಿ ಆಲೋಚನೆ ಮಾಡಬೇಕು. ವೈಚಾರಿಕವಾಗಿ ಚಿಂತನೆ ಮಾಡಬೇಕು’ ಎಂದು ಪ್ರಾಧ್ಯಾಪಕಿ ನಾಗರತ್ನ.ಬಿ ತಮ್ಮಿನಾಳ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕಾಲೇಜಿನ ವಿಜ್ಞಾನದ ವಿಭಾಗದ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಹಿಳಾ ಮತ್ತು ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮನೆಯಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ದುಡಿಮೆಯಲ್ಲಿ ಮಹಿಳೆಯರ ಪಾಲು ಹೆಚ್ಚಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ನಾವು ತಾಯಂದಿರಿಗೆ ಹೆಚ್ಚು ಗೌರವ ಕೊಡಬೇಕು. ತಾಯಿಯ ಸ್ಥಾನ ಬಹಳ ಉನ್ನತವಾದದು’ ಎಂದು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕ ಡಾ.ಪ್ರದೀಪಕುಮಾರ್ ಮಾತನಾಡಿ,‘ಮೊದಲು ಮಹಿಳೆಯರಿಗೆ ಶಿಕ್ಷಣ ಇರಲಿಲ್ಲ. ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಬೇಕು. ನಮ್ಮ ಮೇಲೆ, ನಮ್ಮ ತಂದೆ, ತಾಯಿಯವರ ನಂಬಿಕೆ, ಹಣ ಮತ್ತು ಸಮಯ ಹೂಡಿಕೆ ಮಾಡಿದ್ದಾರೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ಗಣಪತಿ ಲಮಾಣಿ ಮಾತನಾಡಿ,‘ನಮ್ಮದು ಪುರುಷ ಪ್ರಧಾನ ಸಮಾಜವಾಗಿದೆ. ಮೊದಲು ಮಹಿಳೆಯರಿಗೆ ಮಾತನಾಡುವ ಸ್ವಾತಂತ್ರ್ಯ ಇರಲಿಲ್ಲ. ಇಂದು ಉದ್ಯೋಗದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನಾಗಿ ದುಡಿಯುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣು, ಗಂಡು ಎಂಬ ತಾರತಮ್ಯ ಈಗಲೂ ಇದೆ’ ಎಂದರು.

ಸುಬ್ಹಾನಿ, ಅನಿತಾ, ಶಿವಪ್ರಸಾದ್ ಹಾದಿಮನಿ, ಶರಣಮ್ಮ ಮತ್ತು ಅನಿತಾ ಮಾತನಾಡಿದರು.

ಮಹಾಂತೇಶ್ ಮಧೋಳ ಹಾಗೂ ನರಸಿಂಹ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.