ಬುಧವಾರ, ಜುಲೈ 28, 2021
20 °C
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿಮತ

ಒತ್ತಡದ ಬದುಕಿಗೆ ಯೋಗ ಅತ್ಯವಶ್ಯ: ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್ ಸುರಳ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಒತ್ತಡದ ಬದುಕಿಗೆ ಯೋಗ ಅವಶ್ಯಕ’ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಎನ್.ಎಸ್.ಎಸ್ ಘಟಕ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೋಮವಾರ ಅಂತರ್ಜಾಲದ ಮೂಲಕ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಹಕ್ಕೆ ಆಹಾರ ಹೇಗೆ ಅಗತ್ಯವೋ, ಹಾಗೆಯೇ ಪ್ರತಿನಿತ್ಯ ಯೋಗ ಮತ್ತು ಧ್ಯಾನದ ಅಭ್ಯಾಸ ಅವಶ್ಯಕವಾಗಿವೆ. ಅಷ್ಟಾಂಗ ಯೋಗದ ಅನುಷ್ಠಾನದಿಂದ ಚಿತ್ತಚಂಚಲತೆ ನಿವಾರಣೆಯಾಗಿ ಮಾನಸಿಕ ಸ್ಥಿರತೆ ದೊರೆತು ವಿವೇಕ ಲಭಿಸುವುದು. ಕೋವಿಡ್‌ನಂಥ ಶ್ವಾಸಕೋಶ ಸಂಬಂಧಿ ರೋಗಗಳಿಗೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊಪ್ಪಳ ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಸವರಾಜ ಕುಂಬಾರ ಮಾತನಾಡಿ,‘ಆಧುನಿಕ ಜೀವನಶೈಲಿಯಿಂದ ಬದುಕು ಸಂಕೀರ್ಣವಾಗುತ್ತಿದೆ. ಹೀಗಾಗಿ ಯೋಗ ಮಾಡಿ ರೋಗ ಬರದಂತೆ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಿ.ಎಸ್. ಸವಡಿ ಮಾತನಾಡಿ,‘ಯೋಗದಿಂದ ಶರೀರ ಚೈತನ್ಯಗೊಳ್ಳುತ್ತದೆ. ಮನಸ್ಸು ಪ್ರಶಾಂತಗೊಳ್ಳುವುದರ ಜತೆಗೆ ಯೋಗವು ಧನಾತ್ಮಕ ಭಾವನೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಂದಿನ ದಿನಮಾನಗಳಲ್ಲಿ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇವುಗಳಿಗೆ ಯೋಗವೇ ಮದ್ದು’ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಸೂಚಿಸಿದ ಯೋಗಭ್ಯಾಸ ಕ್ರಮಗಳನ್ನು ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರಭು. ಸಿ.ನಾಗಲಾಪುರ ನಡೆಸಿಕೊಟ್ಟರು. ಶ್ರೀಲತಾ ಪ್ರಾರ್ಥಿಸಿದರು. ಡಾ. ಚಂದ್ರಶೇಖರ ರಡ್ಡಿ, ಎಸ್.ಕರಮುಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಎನ್.ಎಸ್.ಎಸ್ ಘಟಕದ ಡಾ.ಶಿರೂರಮಠ ಹಾಗೂ ಡಾ.ರುದ್ರಾಕ್ಷಿ ದೇವರಗುಡಿ ಹಾಗೂ ಸರಕಾರಿ ಆಯುಷ್ ವೈದ್ಯಾಧಿಕಾರಿ ಡಾ.ಶರಣಪ್ಪ ಹೈದ್ರಿ ಪಾಲ್ಗೊಂಡಿದ್ದರು.

‘ಜೀವನದ ಭಾಗವಾಗಲಿ’

ಕಾರಟಗಿ: ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಯೋಗ ದಿನ ಆಚರಿಸಲಾಯಿತು.

ಸಮಿತಿಯ ಜಿಲ್ಲಾ ಪ್ರಭಾರಿ ಸಿ.ಎಚ್.ಶರಣಪ್ಪ ಚಾಲನೆ ನೀಡಿ ಮಾತನಾಡಿ,‘ಸ್ಪರ್ಧಾತ್ಮಕ, ವೇಗದ ಹಾಗೂ ಆಧುನಿಕ ಜೀವನ ಶೈಲಿಯಿಂದ ಪ್ರತಿಯೊಬ್ಬರೂ ಒತ್ತಡಕ್ಕೆ ಸಿಲುಕಿ, ನೆಮ್ಮದಿಯನ್ನೇ ಹಾಳು ಮಾಡಿಕೊಂಡಿದ್ದಾರೆ. ಯೋಗದ ಸಾಧನೆಯ ಹಾದಿಯಲ್ಲಿರುವವರು ಮಾನಸಿಕ ಒತ್ತಡದಿಂದ ಮುಕ್ತರಾಗಿ ಆನಂದದ ಜೀವನ ನಡೆಸುತ್ತಿದ್ದಾರೆ. ಯೋಗದಿಂದ ದೈಹಿಕ ಆರೋಗ್ಯವೂ ಸುಧಾರಣೆ
ಗೊಳ್ಳುವುದು. ಪ್ರತಿಯೊಬ್ಬರೂ ಮಾನಸಿಕ ಒತ್ತಡ ನಿಯಂತ್ರಿಸಿಕೊಂಡು, ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ಯೋಗಾಭ್ಯಾಸವನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು’ ಎಂದರು.

ಸಮಿತಿಯ ಜಿಲ್ಲಾ ಮಹಿಳಾ ಪ್ರಭಾರಿ ಸಿ. ಎಚ್.ಮೀನಾಕ್ಷಿ, ತಾಲ್ಲೂಕು ಪ್ರಭಾರಿ ಪ್ರಸಾದ ಚಿಟ್ಟೂರಿ, ಯುವ ಬ್ರಿಗೇಡ್‍ನ ಶರಣೇಗೌಡ, ದುರುಗೇಶ ಗಚ್ಚಿನಮನಿ, ಪಿ. ಬಸವರಾಜ, ಗೌರಿ ಅಶೋಕ ಚಿನಿವಾಲ ಹಾಗೂ ಜ್ಯೋತಿ ಕೆಂಗಲ್ ಇದ್ದರು.

‘ಯೋಗದಿಂದ ರೋಗ ದೂರ’

ಹುಲಿಗಿ (ಮುನಿರಾಬಾದ್): ‘ಸರಳ ವ್ಯಾಯಾಮ, ಯೋಗಾಸನ ಮತ್ತು ಪ್ರಾಣಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಪತಂಜಲಿ ಯೋಗ ಸಮಿತಿ ಶಿಕ್ಷಕ ವೆಂಕಟೇಶ್ ವಾಸೆ ಅವರು
ಹೇಳಿದರು.

ಹುಲಿಗಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಭದ್ರಾಸನ ಅಭ್ಯಾಸ ಮಾಡುವುದರಿಂದ ಮನಸ್ಸಿನ ಮೇಲೆ ಹತೋಟಿ, ಏಕಾಗ್ರತೆ ಉಂಟಾಗುತ್ತದೆ. ವಜ್ರಾಸನ ಭೋಜನದ ನಂತರ ಮಾಡುವ ಏಕಮಾತ್ರ ಆಸನ, ಇದರಿಂದ ಅಜೀರ್ಣತೆ ದೂರವಾಗುತ್ತದೆ’ ಎಂದು ಹೇಳಿದರು.

‘ಉಷ್ಟ್ರಾಸನದಿಂದ ಉಸಿರಾಟ ಸರಾಗವಾಗುತ್ತದೆ. ಅಸ್ತಮಾ ಇರುವವರಿಗೆ ಇದು ಒಳ್ಳೆಯ ಆಸನ. ಶಶಾಂಕಾಸನ ಮಾಡುವುದರಿಂದ ಹೃದಯಕ್ಕೆ ಮಸಾಜ್ ಆಗುತ್ತದೆ. ಹೃದ್ರೋಗಿಗಳಿಗೆ ಇದರಿಂದ ಲಾಭವಾಗುತ್ತದೆ.  ಉತ್ತಾನ ಮಂಡೂಕಾಸನದಿಂದ ಶ್ವಸನ ತಂತ್ರ ಹಾಗೂ ಕುತ್ತಿಗೆ ನೋವು ದೂರವಾಗುತ್ತದೆ. ವಕ್ರಾಸನ
ಸೊಂಟದ ಕೊಬ್ಬನ್ನು ಕರಗಿಸುತ್ತದೆ’ ಎಂದರು.

ಭುಜಂಗಾಸನ, ಮೇರು ದಂಡದ ರೋಗಿಗಳಿಗೆ ಲಾಭದಾಯಕ ಆಸನ. ಭುಜಂಗಾಸನ ವಿಧಿ 2, ಇದನ್ನು ಅಭ್ಯಾಸ ಮಾಡುವುದರಿಂದ ಸ್ಲಿಪ್ ಡಿಸ್ಕ್ ಸಮಸ್ಯೆ ದೂರವಾಗುತ್ತದೆ. ಶಲಭಾಸನ,  ಸೊಂಟದ ಹಾಗೂ ಸಿಯಾಟಿಕ ನೋವುಗಳಿಗೆ ಲಾಭಕಾರಿ. ಸೇತು ಬಂಧಾಸನದಿಂದ ಬೆನ್ನು, ಕತ್ತು, ಉದರಕ್ಕೆ ಲಾಭ. ಪವನ ಮುಕ್ತಾಸನವು  ಉದರದಲ್ಲಿ ಇರುವ ವಾಯುವನ್ನು ತೊಲಗಿಸುತ್ತದೆ. ಶವಾಸನದಲ್ಲಿಯ ಎರಡು ನಿಮಿಷದ ನಿದ್ರೆ, ಎರಡು ತಾಸಿಗೆ ಸಮಾನ, ದೇಹದ ಪ್ರತಿಯೊಂದು ಅಂಗಾಂಗಗಳಿಗೂ ವಿಶ್ರಾಂತಿ ಲಭಿಸುತ್ತದೆ ಎಂದು ತಿಳಿಸಿದರು.

ಪ್ರತಿದಿನ ನಡೆಯುವ ಉಚಿತ ತರಗತಿಗೆ ಹಾಜರಾಗಬಹುದು ಅಥವಾ ಮನೆಯಲ್ಲಿ ಅಭ್ಯಾಸ ಮಾಡಬಹುದು ಎಂದರು.

‘ಮಾನಸಿಕ, ದೈಹಿಕ ಸದೃಢತೆ’

ಗಂಗಾವತಿ: ಶಾಸಕ ಪರಣ್ಣ ಮುನವಳ್ಳಿ ಅವರ ಕಚೇರಿಯಲ್ಲಿ ಸೋಮವಾರ ಯೋಗ ದಿನ ಆಚರಿಸಲಾಯಿತು.

ಶಾಸಕ ಪರಣ್ಣ ಮುನವಳ್ಳಿ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ,‘ಪ್ರತಿಯೊಬ್ಬರು ಆರೋಗ್ಯದಿಂದ ಜೀವನ ನಡೆಸಲು ಯೋಗ ಅತ್ಯಂತ ಅವಶ್ಯಕ. ಯೋಗ ಮಾಡುವವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಕೋವಿಡ್‌ನಂಥ ಮಹಾಮಾರಿಯನ್ನು ಎದುರಿಸಲು ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗ ಉಪಯುಕ್ತವಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಪ್ರತಿನಿತ್ಯ ಅರ್ಧಗಂಟೆಯಾದರೂ ಯೋಗ ಮಾಡಬೇಕು’ ಎಂದರು.

ನಂತರ ಯೋಗಗುರು ಡಾ.ಎಸ್.ಬಿ.ಹಂದ್ರಾಳ್ ಅವರು ಕಾರ್ಯಕರ್ತರಿಗೆ ಯೋಗ ಶಿಬಿರ ನಡೆಸಿ, ಯೋಗದ ಮಹತ್ವ ತಿಳಿಸಿಕೊಟ್ಟರು.

ನಗರ ಮಂಡಲ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಪ್ರಮುಖರಾದ ಸಣ್ಣಕ್ಕಿ ನೀಲಪ್ಪ, ರೇಖಾ ರಾಯಬಾಗಿ, ಜ್ಯೋತಿ ವೀರೇಶ, ಶೋಭಾ ರಾಯ್ಕರ್, ಶೈಲಜಾ, ಟಿ.ಆರ್.ರಾಯಬಾಗಿ, ಮಹಾಲಿಂಗಪ್ಪ.ಬಿ, ಶ್ರೀನಿವಾಸ ಧೂಳ ಹಾಗೂ ಸಂಗಯ್ಯ ಸ್ವಾಮಿ ಸೇರಿದಂತೆ ಕಾರ್ಯಕರ್ತರು ಇದ್ದರು.

‘ಜನಪ್ರಿಯತೆ ಹೆಚ್ಚಳ’

ಹನುಮಸಾಗರ: ‘ಪ್ರಪಂಚದಾದ್ಯಂತ ಜನ ಯೋಗಾಭ್ಯಾಸ ಮಾಡುತ್ತಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿಯೂ ಯೋಗವು ದೈನಂದಿನ ಜೀವನಶೈಲಿಯ ಭಾಗವಾಗಿರುವುದು ಕಂಡುಬರುತ್ತದೆ’ ಎಂದು ಜ್ಞಾನಾಯಿನಿ ಸಂಸ್ಕೃತ ಪಾಠ ಶಾಲೆಯ ಮುಖ್ಯಸ್ಥ ಪ್ರಹ್ಲಾದಾಚಾರ್ಯ ಪೂಜಾರ ಅವರು
ಹೇಳಿದರು.

ಸೋಮವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಸಾರ್ವಜನಿಕರಿಗೆ ಸಸಿ ವಿತರಣೆ ಮಾಡಿ ಮಾತನಾಡಿದರು.

ಯೋಗ ಶಿಕ್ಷಕ ಶಿವಶಂಕರ ಮೆದಿಕೇರಿ ಮಾತನಾಡಿ,‘ಸಮಗ್ರ ಆರೋಗ್ಯ ಮತ್ತು ಜನರ ಯೋಗಕ್ಷೇಮಕ್ಕೆ ಯೋಗ ಪರಿಣಾಮಕಾರಿ. ಈಗಿನ ಸಾಂಕ್ರಾಮಿಕದ ಕಾಲದಲ್ಲಿ ಕೂಡ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಕುರಿತು ಹೆಚ್ಚು ಗಮನ ಕೊಡಲು ಅನೇಕರು ಯೋಗದತ್ತ ಮುಖ ಮಾಡಿದ್ದಾರೆ. ಇದರ ಮಹತ್ವ ಎಲ್ಲರಿಗೂ ಗೊತ್ತಾಗಿದೆ. ಯುವ ಜನರು ಸಹ ಇದರ ಕಡೆ ಆಕರ್ಷಿತರಾಗಬೇಕು ಎಂದರು.

ಮುಖಂಡ ಬಸವರಾಜ ಹಳ್ಳೂರ, ಯೋಗ ಸಾಧಕ ಆನಂದ ಕಾಟವಾ ಮಾತನಾಡಿದರು.

ಸಾರ್ವಜನಿಕರಿಗೆ ಸಸಿ ವಿತರಣೆ ಮಾಡಲಾಯಿತು.

ಪ್ರಮುಖರಾದ ಬಸವರಾಜ ಹಳ್ಳೂರು, ಬಸವರಾಜ ಬಾಚಲಾಪೂರು, ರುದ್ರಗೌಡ ಗೌಡಪ್ಪನವರ್, ಡಾ.ಚಂದ್ರಶೇಖರ ಪಟ್ಟಣಶೆಟ್ಟಿ, ಯೋಗ ಶಿಕ್ಷಕರಾದ ಶಿವಶಂಕರ ಮೇದಿಕೇರಿ, ಆನಂದ ಕಾಟವಾ, ಮಾಂತಯ್ಯ ಕೂಮಾರಿ, ಸತೀಶ್ ಜಮುಖಂಡಿಕರ, ಈರಣ್ಣ ಹುನಗುಂಡಿ, ರಮೇಶ ಬಡಿಗೇರ, ನೂರುಸಾ ರಂಗ್ರೇಜ್, ಬಸವರಾಜ ಕವಲೂರು ಹಾಗೂ ಅಂಬಾಸಾ ರಾಯಬಾಗಿ ಇದ್ದರು.

‘ಸಮಾಜ ನಿರ್ಮಾಣಕ್ಕೆ ಪೂರಕ’

ಕನಕಗಿರಿ: ಪಟ್ಟಣದ ಶ್ರಮಿಕರ ಭವನದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಶಿಕ್ಷಕ ಶೇಖರಯ್ಯ ಕಲ್ಮಠ ಅವರು ಯೋಗದ ಮಹತ್ವದ ಕುರಿತು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್ ಮಾತನಾಡಿ,‘ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಯೋಗದ ಪಾತ್ರ ಹಿರಿದು. ಪ್ರತಿಯೊಬ್ಬರು ಪ್ರತಿನಿತ್ಯ ಯೋಗ ಮಾಡಬೇಕು’ ಎಂದು ಅವರು ಹೇಳಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವೀಂದ್ರ ಸಜ್ಜನ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಾಗೀಶ ಹಿರೇಮಠ, ರವೀಂದ್ರ ಸಜ್ಜನ ಹಾಗೂ ಬಿಜೆಪಿ ಎಸ್‌.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿದರು.

ಪ್ರಮುಖರಾದ ಕನಕರೆಡ್ಡಿ ಕೆರಿ, ಶರಣಪ್ಪ ಭಾವಿಕಟ್ಟಿ, ಶರತ್ ನಾಯಕ, ರಂಗಪ್ಪ ಕೊರಗಟಗಿ, ಗ್ಯಾನಪ್ಪ ಗಾಣದಾಳ, ಹನುಮಂತಪ್ಪ ಬಸರಿಗಿಡದ ಹಾಗೂ ತಿಪ್ಪಣ್ಣ ಮಡಿವಾಳರ ಇದ್ದರು.

‘ಆರೋಗ್ಯ ವೃದ್ಧಿಗೆ ಸಹಕಾರಿ’

ಯಲಬುರ್ಗಾ: ‘ಪ್ರಸ್ತುತ ಸನ್ನಿವೇಶಗಳಲ್ಲಿ ವಿವಿಧ ಕಾರಣಗಳಿಂದ ಹದಗೆಡುತ್ತಿರುವ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕಾದರೆ ಪ್ರತಿಯೊಬ್ಬರು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದು ಅವಶ್ಯಕ’ ಎಂದು ಶಾಸಕ ಹಾಲಪ್ಪ ಆಚಾರ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಯೋಗ ಸಮಿತಿ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯೋಗ ದೇಶದ ಹೆಮ್ಮೆ. ಇದನ್ನು ಎಲ್ಲರೂ ಅನುಸರಿಸಬೇಕು’ ಎಂದು ಹೇಳಿದರು.

ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ ಮಾತನಾಡಿ,‘ಯೋಗದಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜತೆಗೆ ರೋಗಗಳು ಸುಳಿಯದಂತೆ ದೇಹವನ್ನು ಆರೋಗ್ಯಯುತವಾಗಿ ಇರುತ್ತದೆ. ವಿವಿಧ ಕಾಯಿಲೆ ಗುಣಪಡಿಸುವ ಸಾಮರ್ಥ್ಯ ಯೋಗಕ್ಕಿದೆ. ಅವುಗಳಿಗೆ ಪ್ರತ್ಯೇಕ ಆಸನಗಳಿದ್ದು, ಅವುಗಳನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ಗುಣಮುಖರಾಗುವುದು ನಿಶ್ಚಿತ’ ಎಂದು ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಕಳಕಪ್ಪ ತಳವಾರ, ವೀರಣ್ಣ ಹುಬ್ಬಳ್ಳಿ, ಪ.ಪಂ. ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ, ದೊಡ್ಡಯ್ಯ, ಪಿಎಸ್‍ಐ ಶಿವಕುಮಾರ ಮುಗ್ಗಳ್ಳಿ ಹಾಗೂ ಪ.ಪಂ. ಮುಖ್ಯಾಧಿಕಾರಿ ಚಂದ್ರಕಾಂತ ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು