ಕೊಪ್ಪಳ: ತಾಲ್ಲೂಕಿನ ಬೋಚನಹಳ್ಳಿ ಗ್ರಾಮದಲ್ಲಿ ಕಟ್ಟೆಯ ಮೇಲೆ ಕುಳಿತು ಸಿಗರೇಟು ಸೇದುತ್ತಿದ್ದ ಗುಡದಪ್ಪ ಮುಳ್ಳಣ್ಣ (21) ಎಂಬುವವರನ್ನು ಅದೇ ಗ್ರಾಮದ ಕೆಲವು ಯುವಕರು ಕಂಬಕ್ಕೆ ಕಟ್ಟಿ ಥಳಿಸಿದ ಆರೋಪ ಕೇಳಿಬಂದಿದೆ.
ಮಾದಿಗ ಸಮುದಾಯಕ್ಕೆ ಸೇರಿದ ಗುಡದಪ್ಪನ ಜೊತೆ ಆರಂಭದಲ್ಲಿ ಮಾತಿನ ಚಕಮಕಿ ನಡೆಸಿದ ಯುವಕರ ಗುಂಪು ಬಳಿಕ ಜಾತಿನಿಂದನೆ ಮಾಡಿದೆ ಎಂದು ಥಳಿತಕ್ಕೆ ಒಳಗಾದ ಯುವಕ ನೀಡಿದ ದೂರಿನ ಮೇರೆಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಳಿಗ್ಗೆ ಮಾತಿನ ಚಕಮಕಿ ನಡೆದ ಬಳಿಕ ಅದೇ ದಿನ ಸಂಜೆ ಆರು ಜನರನ್ನು ಒಳಗೊಂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಗುಡದಪ್ಪನನ್ನು ಥಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ದೂರು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.
ಪ್ರತಿದೂರು: ಥಳಿತದ ವೇಳೆ ಪರಸ್ಪರ ಎರಡೂ ಕಡೆಯುವರು ಹೊಡೆದಾಡಿಕೊಂಡಿದ್ದು ಇದರಲ್ಲಿ ಗಾಯಗೊಂಡಿರುವ ವಾಲ್ಮೀಕಿ ಸಮುದಾಯದ ನಾಗನಗೌಡ ಪೊಲೀಸ್ ಪಾಟೀಲ ಎಂಬುವರು ಕೂಡ ಶುಕ್ರವಾರ ಗುಡದಪ್ಪನ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಗುಡದಪ್ಪ ಹಾಗೂ ಕುಟುಂಬದವರು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ