ಗುರುವಾರ , ಮೇ 6, 2021
25 °C
ಪಕ್ಷಿಗಳಿಗಾಗಿ ಮರಗಳಲ್ಲಿ ನೇತಾಡುವ ಅರವಟಿಗೆಗಳು

ಬಾನಾಡಿಗಳ ಮೇಲೆ ಬಾಲಕರ ಪ್ರೇಮ

ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಈ ಕಡು ಬೇಸಿಗೆಯಲ್ಲಿ ಜನಜಾನುವಾರುಗಳು ಕುಡಿಯುವ ನೀರಿಗೆ ಬಾಯಿಬಾಯಿ ಬಿಡುತ್ತಿವೆ. ಇನ್ನು ಪಕ್ಷಿಗಳ ಸ್ಥಿತಿ ಹೇಗಿರಬೇಡ ಎಂದು ತಮ್ಮಲ್ಲೇ ಮರುಗಿದ ಇಲ್ಲಿನ ನಾಲ್ಕಾರು ಯುವಕರು ಶಿಕ್ಷಕ ರಾಘವೇಂದ್ರ ಈಳಗೇರ ಅವರ ಮಾರ್ಗದರ್ಶನದಲ್ಲಿ ಮರಗಳಲ್ಲಿ ತತ್ರಾಣಿಗಳನ್ನು ಕಟ್ಟಿ ಪಕ್ಞಿಗಳಿಗೆ ನೀರುಣಿಸುವ ಕಾಯಕವನ್ನು ಮೂರು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಈ ಬಾರಿ ವಿನೂತನ ರೀತಿಯಲ್ಲಿ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದ್ದರಿಂದ ಸದ್ಯ ಹೆಚ್ಚು ಪಕ್ಷಿಗಳು ಇರುವ ಸುಮಾರು 60 ಮರಗಳಲ್ಲಿ ವಿನೂತನ ತತ್ರಾಣಿಗಳ ವ್ಯವಸ್ಥೆ ಮಾಡಿದ್ದಾರೆ.

ಈ ಹಿಂದೆ ಪಕ್ಷಿಗಳ ದಾಹ ನೀಗಿಸಲು ಕೆಲವೆಡೆ ಸಿಮೆಂಟ್‌ಗಳಿಂದ ಪುಟ್ಟ ದೋಣಿಗಳನ್ನು ಮಾಡಿದ್ದರು. ನಂತರದ ವರ್ಷದಲ್ಲಿ ಕುಂಬಾರ ಮನೆಗೆ ಹೋಗಿ ತಮಗೆ ಬೇಕಾದ ಅಳತೆಗೆ ತಕ್ಕಂತೆ ನೂರಾರು ಮಣ್ಣಿನ ತತ್ರಾಣಿಗಳನ್ನು ತಂದು ಮರಗಳಿಗೆ ನೇತು ಬಿಟ್ಟಿದ್ದರು. ಆದರೆ ಸಿಮೆಂಟ್ ದೋಣಿಗಳಲ್ಲಿ ಇತರೆ ಪ್ರಾಣಿಗಳಿಂದ ನೀರು ಮಲೀನವಾಗುತ್ತಿರುವುದು, ಬೇಗ ಆವಿಯಾಗುತ್ತಿರು ವುದು, ಬಿಸಿಲಿಗೆ ಬಿಸಿಯಾಗುತ್ತಿರುವುದು, ಗಾಳಿಗೆ ಕಸಬಂದು ಬೀಳುತ್ತಿರುವ ಕಾರಣವಾಗಿ ದೋಣಿಗಳನ್ನು ಮಾಡುವುದನ್ನು ಬಿಟ್ಟರು. ಅಲ್ಲದೆ ಮಡಿಕೆಗಳು ಬೇಗ ಒಡೆಯುವ ಕಾರಣವಾಗಿ ಅದನ್ನೂ ಕೈಬಿಟ್ಟು ಈಗ ತಗಡಿನ ಡಬ್ಬಿಗಳನ್ನು ಬಳಕೆ ಮಾಡುತ್ತಿದ್ದಾರೆ.

ದಿನಸಿ ಅಂಗಡಿಯಲ್ಲಿ ದೊರೆಯುವ ಅಡುಗೆ ಎಣ್ಣೆಯ ಖಾಲಿ ತಗಡಿನ ಡಬ್ಬಿಗಳನ್ನು ಸಂಗ್ರಹಿಸಿ ಸ್ವಚ್ಛವಾಗಿ ತೊಳೆಯುತ್ತಾರೆ. ಅವುಗಳ ನಾಲ್ಕು ಭಾಗಗಳಲ್ಲಿನ ತಗಡುಗಳನ್ನು ಅರ್ಧ ಭಾಗದ ವರೆಗೆ ಕತ್ತರಿಸಿ ಬಾಗಿಸಿದ್ದಾರೆ. ಹೀಗೆ ಬಾಗಿದ ತಗಡಿನ ಭಾಗದಲ್ಲಿ ಪಕ್ಷಿಗಳಿಗೆ ಧಾನ್ಯ ಹಾಕಲಾಗುತ್ತದೆ. ಧಾನ್ಯಗಳು ಹೊರಗೆ ಚೆಲ್ಲಬಾರದು ಎಂಬ ದೃಷ್ಟಿಯಿಂದ ಅಂಚುಗಳನ್ನು ಮಣಿಸಲಾಗಿದೆ. ಡಬ್ಬದ ಒಳಭಾಗದಲ್ಲಿ ನೀರು ಹಾಕಿರುವುದರಿಂದ ಭಾರಕ್ಕೆ ಡಬ್ಬಿಯೂ ಓಲಾಡುವುದಿಲ್ಲ. ಹೀಗಾಗಿ ಇಲ್ಲಿ ಪಕ್ಷಿಗಳಿಗೆ ನೀರಿನ ಜೊತೆಗೆ ಧಾನ್ಯವೂ ದೊರೆತಂತಾಗಿದೆ.

‘ಈ ಮೊದಲು ಒಂದು ಡಬ್ಬಿಯನ್ನು ಈ ರೀತಿ ಕತ್ತರಿಸಿ ಮರದಲ್ಲಿ ನೇತು ಬಿಟ್ಟಿದ್ದೆವು. ಸಾಕಷ್ಟು ಸಂಖ್ಯೆಯಲ್ಲಿ ಹಕ್ಕಿಗಳು ಬಂದು ಕಾಳು ತಿಂದು ನೀರು ಕುಡಿದು ಹೋಗಿದ್ದವು. ಈ ಪ್ರಯೋಗ ಯಶಸ್ವಿಯಾದ ಕಾರಣ ಹೆಚ್ಚಿನ ಡಬ್ಬಿಗಳನ್ನು ನೇತು ಹಾಕಿದ್ದೆವೆ. ಅಷ್ಟಿಷ್ಟು ಹಣ ಖರ್ಚಾಗಿದೆ’ ಎಂದು ಶಿಕ್ಷಕ ರಾಘವೇಂದ್ರ ಈಳಗೇರ ಹೇಳಿದರು.

ಈಗಾಗಲೇ ಗ್ರಾಮದಲ್ಲಿ ಸೇರಿದಂತೆ ವೆಂಕಟೇಶ್ವರ ಬೆಟ್ಟದಲ್ಲಿ ಈ ವಿದ್ಯಾರ್ಥಿಗಳ ತಂಡ ಅರವತ್ತಕ್ಕೂ ಹೆಚ್ಚು ಮರಗಳಿಗೆ ನೇತು ಹಾಕಿದ ಈ ಡಬ್ಬಿ ತತ್ರಾಣಿಗಳಲ್ಲಿ ಹಕ್ಕಿಗಳು ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ. ಪ್ರೌಢ ಶಾಲಾ ವಿದ್ಯಾರ್ಥಿಗಳಾದ ಹುಸೇನ ಅಮೀನಗಡ, ಸಂಜೀವ ಕುಲಕರ್ಣಿ, ಶಿವರಾಜ ಭೋವಿ, ಅಮೀತ ಬಡಿಗೇರ ಪಕ್ಷಿಗಳಿಗೆ ನೀರುಣಿಸುವ ಕಾರ್ಯದ ನೇತೃತ್ವ ವಹಿಸಿಕೊಂಡು ಬೆಳಿಗ್ಗೆ ಹಾಗೂ ಸಂಜೆ ಅರವಟಿಗೆ ಸೇವೆಗೆ ಮುಂದಾಗಿದ್ದಾರೆ.

ವಿದ್ಯಾರ್ಥಿಗಳು ಬೆಳಿಗ್ಗೆ ಹಾಗೂ ಸಂಜೆ ಹತ್ತಾರು ನೀರಿನ ಬಾಟಲ್‌ ಹಾಗೂ ಕೊಡಗಳನ್ನು ಹೊತ್ತುಕೊಂಡು ತಾವು ಕಟ್ಟಿದ ತತ್ರಾಣಿಗಳತ್ತ ಸಾಗಿ ನೀರು ಹಾಕಿ ಬರುತ್ತಾರೆ. ಕೆಲವೆಡೆ ಸಿಮೆಂಟ್‌ಗಳಿಂದ ಮಾಡಿದ್ದ ಪುಟ್ಟ ದೋಣಿಗಳಲ್ಲಿ ಅಳಿಲುಗಳು ನೀರು ಕುಡಿಯುತ್ತಿರುವುದಿಂದ ಅಂತಹ ಕೆಲ ತೊಟ್ಟಿಗಳಿಗೂ ನೀರು ಹಾಕುತ್ತಿದ್ದಾರೆ.

‘ಬೆಳಿಗ್ಗೆ ಹೋಗುವುದರೊಳಗೆ ತಗಡಿನ ತತ್ರಾಣಿಯಲ್ಲಿ ನೀರು ಖಾಲಿಯಾಗಿರುವುದು, ಅಲ್ಲದೆ ನಾವು ತತ್ರಾಣಿ ಕಟ್ಟಿದ ಮರಗಳಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ನಮಗೆ ಸಂತಸ ತಂದಿದೆ’ ಎಂದು ವಿದ್ಯಾರ್ಥಿಗಳು ಖುಷಿ ಹಂಚಿಕೊಳ್ಳುತ್ತಾರೆ.

ಆಸಕ್ತ ಪಕ್ಷಿಪ್ರೇಮಿಗಳು ಹೆಚ್ಚಿನ ಮಾಹಿತಿಗೆ (9611222479) ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು