ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಾಧಿಕಾರಿ, ಗುತ್ತಿಗೆದಾರರ ವಿರುದ್ಧ ದೂರು ದಾಖಲು

Last Updated 10 ಜುಲೈ 2012, 8:00 IST
ಅಕ್ಷರ ಗಾತ್ರ

ಕುಷ್ಟಗಿ:  ಬೋಗಸ್ ಬಿಲ್‌ಗಳಿಗೆ ಚೆಕ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪುರಸಭೆ ಲೆಕ್ಕಿಗ ದೇವೇಂದ್ರಪ್ಪ ಎಂಬುವವರ ಮೇಲೆ ಒತ್ತಡ ಹೇರಿದ್ದಲ್ಲದೇ  ಬೆದರಿಕೆಯೊಡ್ಡಿದ್ದರು ಎನ್ನಲಾದ ಈ ಹಿಂದಿನ ಇಲ್ಲಿಯ ಮುಖ್ಯಾಧಿಕಾರಿ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿಯ ಪೊಲೀಸ್‌ಠಾಣೆಯಲ್ಲಿ ಸೋಮವಾರ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಸದ್ಯ ಆನೇಕಲ್ ಪುರಸಭೆ ಮುಖ್ಯಾಧಿಕಾರಿಯಾಗಿರುವ ಬಿ.ಎನ್.ಮುನಿಸ್ವಾಮಿ, ಸ್ಥಳೀಯ ಗುತ್ತಿಗೆದಾರ ವಜೀರ್ ಅಲಿ ಗೋನಾಳ, ಇಲ್ಲಿಯ ಪುರಸಭೆ ಕರವಸೂಲಿಗಾರ ಮೋಹನ ಹಾಗೂ ಹೆಸರು ಗೊತ್ತಾಗದ ಇನ್ನೊಬ್ಬ ಸ್ಥಳೀಯ ವ್ಯಕ್ತಿಯ ವಿರುದ್ಧ ಐಪಿಸಿ 506 (ಜೀವಬೆದರಿಕೆ), ದೌರ್ಜನ್ಯ, ಅಸಭ್ಯವರ್ತನೆ, ಅಶ್ಲೀಲ ಪದಗಳಿಂದ ನಿಂದನೆಗೆ ಸಂಬಂಧಿಸಿದ ಕಲಂಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳವಾಗಿರುವ ಬುತ್ತಿಬಸವೇಶ್ವರ ನಗರದಲ್ಲಿನ ಲೆಕ್ಕಿಗ ದೇವೇಂದ್ರಪ್ಪ ಅವರ ಮನೆಯ ಬಳಿ ಪಂಚನಾಮೆ ನಡೆಸಲಾಗಿದೆ, ಆರೊಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ನಾರಾಯಣ ದಂಡಿನ ಸೋಮವಾರ ಸಂಜೆ ಮಾಹಿತಿ ನೀಡಿದರು.

ಜೂನ್ 25ರಂದು ಕುಟುಂಬ ಸಮೇತ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರನ್ನು ಭೇಟಿ ಮಾಡಿದ ದೇವೇಂದ್ರಪ್ಪ ಅವರ ಮುಂದೆ ಅಳಲು ತೋಡಿಕೊಂಡು ದೂರು ನೀಡಿದ್ದರು. ಜಿಲ್ಲಾಧಿಕಾರಿ ಸದರಿ ದೂರನ್ನು ಜಿಲ್ಲಾ ಪೊಲೀಸ್ ವರಿಷ್ಟರಿಗೆ ತಲುಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಎಸ್.ಪಿ ಅವರು ಇಲ್ಲಿಯ ಸಿಪಿಐ ನೀಲಪ್ಪ ಒಲೇಕಾರ ಅವರಿಗೆ ಸೂಚನೆ ನೀಡಿದ್ದರು.

ವಿವರ: ಇಲ್ಲಿಂದ ವರ್ಗವಾದರೂ ಮುಖ್ಯಾಧಿಕಾರಿ ಮುನಿಸ್ವಾಮಿ ಇತರೆ ಆರೋಪಿಗಳೊಂದಿಗೆ ರಾತ್ರಿ 11.30ರ ವೇಳೆಯಲ್ಲಿ ಲೆಕ್ಕಿಗ ದೇವೇಂದ್ರಪ್ಪ ಅವರ ಮನೆಗೆ ಹೋಗಿ ಬ್ರಾಹ್ಮಣ ಸಮಾಜಕ್ಕೆ ಸೇರಿದ ಸ್ಮಶಾನದಲ್ಲಿನ ಮುಳ್ಳುಕಂಟಿಗಳನ್ನು ಸ್ವಚ್ಛಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ವಜೀರ ಅಲಿ ಗೋನಾಳ ಎಂಬುವವರ ಹೆಸರಿನಲ್ಲಿದ್ದ ಅಂದಾಜು ರೂ 45 ಮೊತ್ತದ ಹಳೆಯ 10 ಬೋಗಸ್ ಬಿಲ್‌ಗಳಿಗೆ ಚೆಕ್ ಬರೆಯುವಂ ಒತ್ತಾಯಿಸಿದ್ದರು. ಆದರೆ ಒಂದೇ ಎಂ.ಬಿ ಇದ್ದರೂ ತಲಾ ಎರಡರಂತೆ ಬೋಗಸ್ ಬಿಲ್‌ಗಳನ್ನು ಸೃಷ್ಟಿಯಾಗಿದ್ದನ್ನು ಗಮನಿಸಿದ ದೇವೇಂದ್ರಪ್ಪ ಮುಖ್ಯಾಧಿಕಾರಿ ಒತ್ತಡಕ್ಕೆ ಮಣಿದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT