ಸೋಮವಾರ, ಏಪ್ರಿಲ್ 6, 2020
19 °C
ತಿದ್ದುಪಡಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿರೋಧ

ಹೂಡಿಕೆ ಉತ್ತೇನಕ್ಕೆ ಭೂಮಿ ಖರೀದಿ ಸರಳೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹೂಡಿಕೆಗೆ ಉತ್ತೇಜನ ನೀಡಲು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿ ಭೂಮಿ ಖರೀದಿ ಸೆಕ್ಷನ್ 79 ‘ಎ’ ಮತ್ತು ‘ಬಿ’ ರದ್ದುಪಡಿಸಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸಿದೆ.

ಕಂದಾಯ ಸಚಿವ ಆರ್.ಅಶೋಕ್ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸುಳಿವು ನೀಡಿದ್ದಾರೆ. ಕೃಷಿ ಭೂಮಿ ಖರೀದಿ ನಿಯಮ ರದ್ದುಪಡಿಸಿದರೆ ರೈತರ ಬಳಿ ಭೂಮಿ ಉಳಿಯುವುದಿಲ್ಲ. ರೈತರು ಹೆಚ್ಚಿನ ಬೆಲೆಯ ಆಸೆಗೆ ಭೂಮಿ ಮಾರಾಟ ಮಾಡುತ್ತಾರೆ. ನಂತರ ಅವರ ಬದುಕು ಬೀದಿಗೆ ಬೀಳುತ್ತದೆ. ನಗರದತ್ತ ವಲಸೆ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ, ನಿಯಮ ಬದಲಿಸಬಾರದು ಎಂದು ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಬ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ದೇವರಾಜು ಅರಸು ಅವರು ಕೃಷಿ ಭೂಮಿ ಖರೀದಿಗೆ ಮಿತಿ ಹಾಕಿದ್ದರು. ವಾರ್ಷಿಕ ₨ 2 ಲಕ್ಷಕ್ಕಿಂತ ಹೆಚ್ಚಿಗೆ ಕೃಷಿಯೇತರ ಆದಾಯ ಇರುವವರು ಭೂಮಿ ಖರೀದಿಸದಂತೆ ನಿರ್ಬಂಧಿಸಿದ್ದರು. ಪರಿಣಾಮ ರೈತರಲ್ಲದವರು, ಉದ್ಯಮಿಗಳು, ವ್ಯಾಪಾರಸ್ಥರು ಭೂಮಿ ಖರೀದಿಸಲು ಸಾಧ್ಯವಾಗಲಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರ್ಷಿಕ ಆದಾಯ ಮಿತಿ ₨ 25 ಲಕ್ಷಕ್ಕೆ ಏರಿಸಿದರು. ಈಗ ಯಾರು ಬೇಕಾದರೂ ಭೂಮಿ ಖರೀಸುವ ಅವಕಾಶ ನೀಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ 70ರಷ್ಟಿರುವ ರೈತರು ಅನಕ್ಷರಸ್ಥರಿಗೂ ಸೇರಿ ಶೇ 80ರಷ್ಟು ಉದ್ಯೋಗ ನೀಡಿದ್ದಾರೆ. ಉದ್ಯಮಿಗಳಿಂದ ಕೇವಲ ಶೇ 20ರಷ್ಟು ಜನರಿಗೆ ಉದ್ಯೋಗ ದೊರೆತಿದೆ. ಒಂದು ಸಾವಿರ ಎಕರೆ ಕೃಷಿ ಭೂಮಿಯಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ. ಒಂದು ಸಾವಿರ ಎಕರೆಯಲ್ಲಿ ಕೈಗಾರಿಕೆ ಸ್ಥಾಪಿಸಿದರೆ 200 ಉದ್ಯೋಗ ದೊರಕುವುದಿಲ್ಲ ಎಂದರು.

ನಿರಾವರಿ, ರಸ್ತೆ, ರೈಲುಮಾರ್ಗ, ಕೈಗಾರಿಕೆ ಸ್ಥಾಪನೆ ಹೀಗೆ ಹಲವಾರು ಯೋಜನೆಗಳಿಗೆ ಕೃಷಿ ಭೂಮಿ ನಾಶವಾಗಿದೆ. ಇದೇ ರೀತಿ ಮುಂದುವರಿದರೆ ಆಹಾರ ಉತ್ಪಾದನೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಕೈಗಾರಿಕೆಗಳಿಗೆ ನೀಡಿರುವ ಭೂಮಿಯಲ್ಲಿ ಎಷ್ಟು ಬಳಕೆಯಾಗಿದೆ ಎಂಬ ಕುರಿತು ಸರ್ಕಾರ ಭೂಮಿಯ ಆಡಿಟ್ ಮಾಡಿಸಬೇಕು. ಬಳಸದ ಭೂಮಿ ವಾಪಸ್ ಪಡೆದು ಮತ್ತೆ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಡಾ.ಬಿ.ಎಂ.ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಸಿ.ಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ, ಡಿ.ಎಚ್.ರಾಮಚಂದ್ರಪ್ಪ, ಇ.ಬಿ.ಜಗದೀಶ್, ಕೆ.ಎನ್. ಜ್ಞಾನೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು