ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಪೂರೈಕೆ

ಮಳೆಯ ಕಾರಣದಿಂದ ಸರಬರಾಜು ತಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್‌ ಮಾಹಿತಿ
Last Updated 22 ಸೆಪ್ಟೆಂಬರ್ 2020, 11:51 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ಸೆ.24 ರಿಂದ 29ರವರೆಗೆ ವಿವಿಧ ಕಂಪನಿಗಳ 10 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ ಜಿಲ್ಲೆಗೆ ಸರಬರಾಜು ಆಗಲಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್‌ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರಸಕ್ತ ಸಾಲಿನಲ್ಲಿ 43,650 ಮೆಟ್ರಿಕ್‌ ಟನ್‌ ಯೂರಿಯಾ ಬೇಡಿಕೆ ಇದ್ದು, ಇಲ್ಲಿಯವರೆಗೆ 35,838 ಮೆಟ್ರಕ್‌ ಟನ್‌ ಸರಬರಾಜಾಗಿದೆ. ಸೆಪ್ಟೆಂಬರ್‌ನ ಬೇಡಿಕೆಯ 9,750 ಮೆಟ್ರಿಕ್‌ ಟನ್‌ನಲ್ಲಿ 3,180 ಮೆಟ್ರಿಕ್‌ ಟನ್‌ ಸರಬರಾಜಾಗಿದೆ. ಇನ್ನು ಒಂದು ವಾರದಲ್ಲಿ ಕ್ರಿಬ್ಕೊ 3ಸಾವಿರ, ಐಪಿಎಲ್‌ 1,300, ಇಫ್ಕೊ 2,600, ಕೋರಮಂಡಲ್‌ 1,300, ಆರ್‌ಸಿಎಫ್‌ 2 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ ಜಿಲ್ಲೆಗೆ ಸರಬರಾಜಾಗಲಿದೆ’ ಎಂದರು.

‘ಉತ್ತರ ಕರ್ನಾಟಕ, ಮುಂಬೈ, ಪುಣೆ, ಮಂಗಳೂರಿನಲ್ಲಿ ಮಳೆಯ ಕಾರಣದಿಂದ ಗೊಬ್ಬರ ಬರುವುದು ತಡವಾಗುತ್ತಿದೆ. ಪ್ರಸ್ತುತ ಪಿಎಸಿಎಸ್‌, ಖಾಸಗಿ ಅಂಗಡಿ, ಫೆಡರೇಷನ್‌ನಲ್ಲಿ 2,280 ಮೆಟ್ರಿಕ್‌ ಟನ್‌ ಲಭ್ಯವಿದ್ದು, ಪಿಒಎಸ್‌ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ಒಂದು ಚೀಲ ಯೂರಿಯಾಗೆ ₹266 ದರ ಇದ್ದು, ರೈತರಿಂದ ಆಧಾರ್‌ ನಂಬರ್‌ ಪಡೆದು ಪಿಒಎಸ್‌ ಮೂಲಕ ವಿತರಿಸಲಾಗುತ್ತಿದೆ. ಈ ವಿಧಾನದಲ್ಲಿ ರೈತರಿಂದ ಹೆಚ್ಚು ದರ ಪಡೆಯುವ ಸಾಧ್ಯತೆ ಕಡಿಮೆ ಇದೆ. ಹಾಗಿದ್ದರೂ ಹೆಚ್ಚು ದರ ಪಡೆದರೆ, ಬೇರೆಡೆ ಖರೀದಿಸಲು ಹೇಳಿದರೆ ತಕ್ಷಣವೇ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ದೂರು ನೀಡಬಹುದು’ ಎಂದರು.

‘ವಾರದಲ್ಲಿ 2–3ದಿನ ಯಾವ ಸೊಸೈಟಿ, ಅಂಗಡಿಯಲ್ಲಿ ಎಷ್ಟು ಪ್ರಮಾಣದಲ್ಲಿ ರಸಗೊಬ್ಬರ ಇದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಷ್ಟು ಪ್ರಮಾಣದ ರಸಗೊಬ್ಬರ ಇದೆ ಎಂಬುದನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದಾಗಿದೆ’ ಎಂದರು.

‘210 ಪಿಎಸಿಎಸ್‌ ಸೊಸೈಟಿ ಇದ್ದು, ಇಲ್ಲಿ ಹೆಚ್ಚಾಗಿ ವಿತರಿಸುವ ಗುರಿ ಹೊಂದಲಾಗಿದೆ. 18 ದಿನಗಳ ಹಿಂದೆ 14,850 ಮೆಟ್ರಿಕ್‌ ಟನ್‌ ಇದ್ದ ರಸಗೊಬ್ಬರ ಪ್ರಸ್ತುತ 3,680 ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ಕೆ.ಆರ್‌.ಪೇಟೆ ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ಇತ್ತೀಚೆಗೆ ಅನುಮತಿ ನೀಡಿದ ಸ್ಥಳ ಬಿಟ್ಟು ಬೇರೆಡೆ ರಸಗೊಬ್ಬರ ದಾಸ್ತಾನು ಮಾಡಿದ್ದಕ್ಕೆ ಸಂಬಂಧಿಸಿದಂತೆ 15 ಟನ್‌ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, ಪರವಾನಗಿಯನ್ನು 21 ದಿನ ಅಮಾನತಿನಲ್ಲಿ ಇಡಲಾಗಿದೆ. ಬೇರೆಡೆ ಎಲ್ಲಿಯೂ ದಾಸ್ತಾನು ಮಾಡುವುದು ಕಾನೂನು ಬಾಹಿರ’ ಎಂದು ಎಚ್ಚರಿಕೆ ನೀಡಿದರು.

‘ಕಡಿಮೆ ಬೆಲೆಯ ಕಾರಣಕ್ಕೆ ಹೆಚ್ಚು ಯೂರಿಯಾ ಬಳಸಿದರೆ ಮಣ್ಣಿನ ಗುಣಮಟ್ಟ ಹಾಳಾಗುತ್ತದೆ. ಯೂರಿಯಾ ಬಳಕೆಯಿಂದ ಭತ್ತದಲ್ಲಿರುವ ಸಿಲಿಕಾ ಅಂಶ ಇರುತ್ತದೆ. ಹೆಚ್ಚು ಯೂರಿಯಾ ಬಳಸಿದರೆ ಸಿಲಿಕಾ ಪರದೆ ಹೊಡೆದು ಹೋಗಿ ಕೀಟ ಬಾಧೆ ಶುರುವಾಗುತ್ತದೆ. ಇದರ ಬದಲು ಭೂಮಿಗೆ ಬೇಕಾದ ಅಮೋನಿಯಮ್‌ ಸಲ್ಫೇಟ್‌ ಬಳಸಿದರೆ ಸಲ್ಫರ್‌ ಅಂಶ ಭೂಮಿಗೆ ಸಿಗುತ್ತದೆ’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ರೈತರಿಂದಲೇ 3,89,283 ತಾಕುಗಳ ಬೆಳೆಗಳ ಸಮೀಕ್ಷೆ ನಡೆದಿದೆ. ಖಾಸಗಿ ನಿವಾಸಿಗಳಿಂದ 6,81,604 ತಾಕುಗಳ ಬೆಳೆ ಸಮೀಕ್ಷೆ ಸೇರಿದಂತೆ ಇಲ್ಲಿಯವರೆಗೆ 10,70,887 ತಾಕುಗಳ ಬೆಳೆ ಸಮೀಕ್ಷೆ ನಡೆದಿದೆ. ಇನ್ನೂ 6,81,604 ತಾಕುಗಳ ಬೆಳೆ ಸಮೀಕ್ಷೆ ನಡೆಯಬೇಕಿದೆ. ರಾಜ್ಯದಲ್ಲಿ ತುಮಕೂರು ಮೊದಲ ಸ್ಥಾನ, ಮಂಡ್ಯ ಎರಡನೇ ಸ್ಥಾನದಲ್ಲಿ ಇದೆ’ ಎಂದರು.

*******

ಶೇ 28ರಷ್ಟು ಹೆಚ್ಚುವರಿ ಮಳೆ

‘ಜಿಲ್ಲೆಯಲ್ಲಿ ಏ.12 ರಿಂದ ಸೆ. 21ರವರೆಗೆ ವಾಡಿಕೆ 429 ಮಿ.ಮೀ. ಮಳೆಯಾಗಬೇಕಿತ್ತು. ವಾಸ್ತವದಲ್ಲಿ 552.2 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ 28.7ರಷ್ಟು ಹೆಚ್ಚು ಉತ್ತಮ ಮಳೆಯಾಗಿದೆ. ಇಲ್ಲಿಯವರೆಗೆ ಶೇ 89 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಶೇ 66.20 ಬಿತ್ತನೆಯಾಗಿತ್ತು. ಶೇ 98.1 ರಷ್ಟು ಭತ್ತದ ನಾಟಿ ಪೂರ್ಣಗೊಂಡಿದೆ’ ಚಂದ್ರಶೇಖರ್‌ ತಿಳಿಸಿದರು.

‘ರಾಗಿ ಬಿತ್ತನೆ ಶೇ 91ರಷ್ಟು ಪೂರ್ಣಗೊಂಡಿದೆ. 30,510 ಹೆಕ್ಟೇರ್‌ ಪ್ರದೇಶದಲ್ಲಿ ತನಿ, ಕೂಳೆ ಕಬ್ಬು ಬಿತ್ತನೆಯಾಗಿದೆ. ಪಿಎಸ್‌ಎಸ್‌ಕೆ ಪ್ರಾರಂಭವಾಗುತ್ತಿದ್ದು, ಬಿತ್ತನೆ ಕಬ್ಬು ಹೆಚ್ಚು ಕೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 93.5 ರಷ್ಟು ಕಬ್ಬು ಬಿತ್ತನೆಯಾಗಿದೆ. ಬೇಸಿಗೆ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ಶೇ 74.5 ರಷ್ಟು ಉದ್ದು, ಹೆಸರು, ಅಲಸಂದೆ, ಅವರೆ ಬಿತ್ತನೆಯಾಗಿತ್ತು. ಕಳೆದ ವರ್ಷ ಶೇ 55.5 ರಷ್ಟು ಬಿತ್ತನೆಯಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT