ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: 24X7 ನೀರು, 2,800 ಕೋಟಿ ವೆಚ್ಚ; ಭೈರತಿ ಬಸವರಾಜ್‌

Last Updated 28 ಆಗಸ್ಟ್ 2020, 15:08 IST
ಅಕ್ಷರ ಗಾತ್ರ

ಮಂಡ್ಯ: ‘ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಹಾಗೂ ಮೈಸೂರು ನಗರಗಳಿಗೆ 24X7 ಕುಡಿಯುವ ನೀರು ಪೂರೈಸಲು ₹ 2,800 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಶುಕ್ರವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮಹಾನಗರ ಪಾಲಿಕೆ ವ್ಯಾಪ್ತಿಯ ನಗರಗಳಲ್ಲಿ ಈಗಲೂ 24 X7 ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಹಲವು ನೀರು ಸರಬರಾಜು ಯೋಜನೆಗಳು ನನೆಗುದಿಗೆ ಬಿದ್ದಿವೆ. ಎಲ್ಲಾ ಯೋಜನೆಗಳಿಗೆ ಪುನಶ್ಚೇತನ ನೀಡಿ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು’ ಎಂದರು.

‘ಕೆಆರ್‌ಎಸ್‌ ಜಲಾಶಯ ಸಮೀಪವೇ ಇದ್ದರೂ ಮೈಸೂರು ನಗರಕ್ಕೆ ಸಂಪೂರ್ಣವಾಗಿ ನಿತ್ಯ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಉಂಡವಾಡಿ ನೀರು ಸರಬರಾಜು ಯೋಜನೆ ಪೂರ್ಣಗೊಳಿಸಿ ಶೀಘ್ರ 24 ಗಂಟೆಯೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮಂಡ್ಯದ ವಿವೇಕಾನಂದ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಉಂಟಾಗಿದ್ದ ಗೊಂದಲ ಕುರಿತು ಸಿಬಿಐ ವಿಚಾರಣೆ ನಡೆಯುತ್ತಿದೆ. ವಿಚಾರಣಾ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದು ಅದನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು. ನಿವೇಶನಗಳ ಹರಾಜು ಹಾಕಿ ಬಂದ ಹಣವನ್ನು ನಗರಾಭಿವೃದ್ಧಿಗೆ ಬಳಸಲಾಗುವುದು. ಪತ್ರಕರ್ತರಿಗೆ ಶೇ 5ರಷ್ಟು ನಿವೇಶನ ಮೀಸಲಿಡಲಾಗುವುದು’ ಎಂದರು.

ಪುಂಡರ ವಿರುದ್ಧ ಕ್ರಮ: ‘ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್‌ ಪುಂಡರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಹೋರಾಟಗಾರರ ಮೇಲೆ ದಾಖಲು ಮಾಡಲಾಗಿರುವ ಪ್ರಕರಣ ವಾಪಸ್‌ ಪಡೆಯುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT