ನಾಗಮಂಗಲ: ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಯ ಚಿಂತನೆಯೊಂದಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮತ್ತು ನಾನು ರಾಜ್ಯದಲ್ಲಿ 50 ವರ್ಷದಲ್ಲಿ ನಡೆಯದ ಕೆಲಸಗಳನ್ನು ಕೈಗೆತ್ತಿಕೊಂಡು ಎರಡು ವರ್ಷದಲ್ಲಿ ಪೂರ್ಣಗೊಳಿಸಲು ಕ್ರಮವಹಿಸಿದ್ದೇವೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭಾನುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆಂಧ್ರ ಪ್ರದೇಶದ ರಾಯದುರ್ಗ, ಮಡಿಕೆಶಿರ, ರಾಜ್ಯದ ಮಧುಗಿರಿ, ಪಾವಗಡ, ತುಮಕೂರು, ಊರುಕೇರಿ ಮಾರ್ಗದ 206 ಕಿ.ಮೀ. ರೈಲ್ವೆ ಯೋಜನೆಯನ್ನು 1996 ರಲ್ಲಿ ಘೋಷಿಸಿದ್ದರೂ ಕೆಲಸವಾಗಿರಲಿಲ್ಲ. ಆ ಯೊಜನೆಗೆ ₹6000 ಕೋಟಿ ಬಿಡುಗಡೆ ಮಾಡಿ, ಮಾರ್ಗದ ಭೂಸ್ವಾಧೀನ ಕಪ್ರಕ್ರಿಯೆ ನಾಲ್ಕು ಭಾಗಗಳಲ್ಲಿ ನಡೆಯುತ್ತಿದೆ ಎಂದರು.
ತುಮಕೂರು, ಚಿತ್ರದುರ್ಗ, ದಾವಣಗೆರೆ ಸಂಪರ್ಕಿಸವ 192 ಕಿ.ಮೀ ರೈಲ್ವೆ ಯೋಜನೆ ಕಡತದಲ್ಲೇ ಉಳಿದಿತ್ತು. ಅದೀಗ ಟೆಂಡರ್ ಹಂತದಲ್ಲಿದೆ. 2,300 ಎಕರೆ ಜಾಗತ್ಯವಿದ್ದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ 1,900 ಎಕರೆ ಜಾಗವನ್ನು ಕೊಡಿಸಿ ದೆ. ಈ ಎರಡು ಯೋಜನೆಗಳಿಗೂ ಕೂಡ ರಾಜ್ಯ ಸರ್ಕಾರ ಜಾಗವನ್ನು ಕೊಡುತ್ತದೆ. ಉಳಿದೆಲ್ಲವನ್ನು ಕೇಂದ್ರ ಸರ್ಕಾರ ಮಾಡಲು ತೀರ್ಮಾನಿಸಲಾಗಿದೆ ಎಂದರು.
‘ ನನ್ನ ಕ್ಷೇತ್ರ ತುಮಕೂರಿನಲ್ಲಿ ಈಗಾಗಲೇ 8 ಆರ್.ಒ.ಬಿ. ಮಂಜೂರು ಮಾಡಿದ್ದೇನೆ. ಮಠದಲ್ಲಿ ಭಕ್ತರು ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಹೆಸರನ್ನು ರೈಲಿಗೆ ಇಡುವಂತೆ ಭಕ್ತರು ಮನವಿ ಮಾಡಿದ್ದು, ಬೇರೆ ರಾಜ್ಯಗಳಿಗೆ ಹೋಗುವ ರೈಲುಗಳಿಗೂ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುತ್ತೇವೆ. ನನ್ನ ತಾಲ್ಲೂಕು ಕನಕಪುರದ ಮೂಲಕ ಹೆಜ್ಜಾಲ, ಹಾರೋಹಳ್ಳಿ, ಕಗ್ಗಲೀಪುರ, ಕನಕಪುರ, ಸಾತನೂರು, ಹಲಗೂರು, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು, ಸಂತೇಮಾರನಹಳ್ಳಿ ಮತ್ತು ಚಾಮರಾಜನಗರಕ್ಜೆ ಹೊಸ ಮಾರ್ಗವನ್ನು ₹142 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಕ್ರಮವಹಿಸಲಾಗುತ್ತಿದೆ’ ಎಂದರು.
ವಿಶೇಷ ಪೂಜೆ: ಬೆಳಿಗ್ಗೆ ಕ್ಷೇತ್ರಕ್ಕೆ ಬಂದ ಸಚಿವ ವಿ.ಸೋಮಣ್ಣ ಮಠದ ದೇವಾಲಯಗಳಲ್ಲಿ ಜರುಗುತ್ತಿದ್ದ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಕಾಲಭೈರವೇಶ್ವರ ಸ್ವಾಮಿ, ಕ್ಷೇತ್ರಾಧಿದೇವತೆಗಳಿಗೆ ಪೂಜೆ ಸಲ್ಲಿಸಿದರು. ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಸ್ವಾಮೀಜಿ ಮಾರ್ಗದರ್ಶನ ಪಡೆದುಕೊಂಡರು. ಸ್ವಾಮೀಜಿ ಕೇಂದ್ರ ಸಚಿವರನ್ನು ಸನ್ಮಾನಿಸಿದರು. ಸಚಿವರು ಮಠದಲ್ಲಿಯೇ ಪ್ರಸಾದ ಸೇವಿಸಿದರು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಭಕ್ತರು ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.