ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಗಲ್ಲಿ ಮಾರಿದರೆ ₹ 50 ಕೋಟಿ ಆದಾಯ

ವಾಣಿಜ್ಯ ಮಳಿಗೆ ನಿರ್ಮಿಸಿದರೆ ತಿಂಗಳಿಗೆ ₹ 40 ಲಕ್ಷ ಬಾಡಿಗೆ, ಡಿ.ಸಿಗೆ ಸಲ್ಲಿಸುವ ವರದಿ ಸಿದ್ಧ
Last Updated 11 ಜನವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ನಗರಸಭೆ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿರುವ ಗಲ್ಲಿಗಳನ್ನು (ಕರ್ನವೆನ್ಸಿ) ಅಕ್ಕಪಕ್ಕದ ನಿವೇಶನದಾರರಿಗೆ ಮಾರಾಟ ಮಾಡಿ, ಬರುವ ಆದಾಯವನ್ನು ನಗರದ ಅಭಿವೃದ್ಧಿಗೆ ಬಳಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಅಶೋಕ್‌ನಗರ, ಸುಭಾಷ್‌ನಗರ, ಗಾಂಧಿ ನಗರ, ನೆಹರೂ ನಗರ, ಸ್ವರ್ಣಸಂದ್ರ ಮುಂತಾದ ಬಡಾವಣೆಗಳಲ್ಲಿ ನಿವೇಶನಗಳ ನಡುವೆ 6ರಿಂದ 16 ಅಡಿಗಳವರೆಗೆ ಗಲ್ಲಿ ಬಿಡಲಾಗಿದೆ. ವಿವಿಧೆಡೆ ಇವು ಒತ್ತುವರಿಗೆ ಒಳಗಾಗಿದ್ದು ಇಲ್ಲಿಯವರೆಗೂ ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಗಲ್ಲಿಗಳನ್ನು ಸ್ವಾಧೀನಕ್ಕೆ ಪಡೆಯುವ ಬದಲಾಗಿ ಅದಕ್ಕೆ ದರ ನಿಗದಿ ಮಾಡಿ ಮಾರಾಟ ಮಾಡಿದರೆ ನಗರಸಭೆಗೆ ಹೆಚ್ಚುವರಿ ಆದಾಯ ನಿರೀಕ್ಷಿಸಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಈ ನಿಟ್ಟಿನಲ್ಲಿ ನಗರದ ಸಮಾನ ಮನಸ್ಕ 100ಕ್ಕೂ ಹೆಚ್ಚು ಮಂದಿ ವರದಿಯೊಂದನ್ನು ಸಿದ್ಧಪಡಿಸಿದ್ದು, ಗಲ್ಲಿ ಮಾರಾಟದಿಂದ ನಗರಸಭೆಗೆ ₹ 50 ಕೋಟಿ ಆದಾಯ ಬರಲಿದೆ ಎಂದು ಅಂದಾಜು ಮಾಡಿದ್ದಾರೆ. ಈ ಹಣದಲ್ಲಿ ನಗರದ ಸೌಂದರ್ಯ ಹೆಚ್ಚಿಸುವಂತಹ ಅಭಿವೃದ್ಧಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಗಲ್ಲಿ ಮಾರಾಟದಿಂದಾಗುವ ಅನುಕೂಲಗಳ ಪಟ್ಟಿ ಸಿದ್ಧಪಡಿಸಿದ್ದು ಅದನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ನಿರ್ಧಾರ ಕೈಗೊಂಡಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದರಾಜು ಅವರ ನೇತೃತ್ವದಲ್ಲಿ ವರದಿ ಸಿದ್ಧವಾಗಿದೆ.

ಗಲ್ಲಿ ಮಾರಾಟ ಮಾಡುವ ಸಂಬಂಧ ಈಗಾಗಲೇ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸಮರ್ಪಕವಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ನಗರಸಭೆ ಬಡಾವಣೆ ನಿರ್ಮಿಸುವ ಸಂದರ್ಭದಲ್ಲಿ ನಿವಾಸಿಗಳಿಗೆ ಅವಶ್ಯಕವಾದ ವಿದ್ಯುತ್‌, ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ಉದ್ದೇಶಕ್ಕೆ ಗಲ್ಲಿ ಬಿಡಲಾಗಿತ್ತು.

ಆದರೆ, ನಗರಸಭೆ ಉದ್ದೇಶ ಈಡೇರದೆ ಅಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ಅನೈತಿಕ ಚಟುವಟಿಕೆಯ ತಾಣವಾಗಿವೆ. ಕೊಳಚೆ, ಕ್ರೀಮಿ–ಕೀಟಗಳ ಹಾವಳಿಯಿಂದ ನಿವಾಸಿಗಳಿಗೆ ರೋಗಭೀತಿ ಎದುರಾಗಿದೆ. ಕೆಲವೆಡೆ ಕಳ್ಳಕಾಕರ ಹಾವಳಿ, ಬೀದಿನಾಯಿಗಳ ಉಪಟಳಕ್ಕೂ ಗಲ್ಲಿ ಕಾರಣವಾಗಿವೆ. ಕೆಲವೆಡೆ ಅನಧಿಕೃತ ಕಟ್ಟಡ ನಿರ್ಮಾಣವಾಗಿದ್ದು ಅದಕ್ಕೆ ದಂಡ ವಿಧಿಸಿ, ಕಿಮ್ಮತ್ತು ಕಟ್ಟಿಸಿಕೊಳ್ಳಲಾಗಿತ್ತು. ಆದರೂ ಕರ್ನವೆನ್ಸಿ ಗಲ್ಲಿಗಳ ಸಮಸ್ಯೆ ಮುಗಿಯದ ಕಾರಣ ಮಾರಾಟವೇ ಸೂಕ್ತ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ವಾಣಿಜ್ಯ ಮಳಿಗೆ ನಿರ್ಮಾಣ: ಕರ್ನವೆನ್ಸಿಗಳ ಮಾರಾಟದಿಂದ ಬಂದ ಹಣದಿಂದ 200X 200 ಜಾಗ ಖರೀದಿಸಿ ಅವಶ್ಯಕತೆ ಇರುವೆಡೆ ಸುಸಜ್ಜಿತ ನಾಲ್ಕು ಅಂತಸ್ತಗಳ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಬಹುದು. ನೆಲಮಹಡಿಯಲ್ಲಿ ಸುಮಾನು 800 ದ್ವಿಚಕ್ರ ವಾಹನಗಳ ನಿಲುಗಡೆಗೆ ಸೌಲಭ್ಯ ಒದಗಿಸಬಹುದು. ಇದರಿಂದ ಜನನಿಬಿಡ ಪ್ರದೇಶಗಳ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ವಾಣಿಜ್ಯ ಮಳಿಗೆಯಿಂದ ತಿಂಗಳಿಗೆ ₹ 40 ಲಕ್ಷ ಆದಾಯ ಪಡೆಯಬಹುದು ಎಂದು ಅಂದಾಜು ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ನಿವೇಶನ ಖರೀದಿಸಿ ಇಲ್ಲವೇ ನಗರಸಭೆ ಲೀಸ್‌ ಪಡೆದು ಕಟ್ಟಡ ನಿರ್ಮಾಣ ಮಾಡಬಹುದು. ಅದೂ ಸಾಧ್ಯವಾಗದಿದ್ದರೆ ಲೋಕೋಪಯೋಗಿ ಇಲಾಖೆಯೇ ಯೋಜನೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

‘ಈಗಾಗಲೇ ರಾಜ್ಯದ ವಿವಿಧ ನಗರಸಭೆ, ಪಾಲಿಕೆ ವ್ಯಾಪ್ತಿಯ ಗಲ್ಲಿ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕನ್ಸರ್ವೆನ್ಸಿಗಳನ್ನು ವಶಕ್ಕೆ ಪಡೆಯುವುದು ಸಾಧ್ಯವಾಗದ ಮಾತು. ಅವುಗಳನ್ನು ಪಾಳು ಬಿಡುವ ಬದಲು ಮಾರಾಟ ಮಾಡುವುದೇ ಸರಿಯಾದ ನಿರ್ಧಾರ. ಈ ನಿಟ್ಟಿನಲ್ಲಿ ನಗರದ ಹಿರಿಯರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ಸಿದ್ದರಾಜು ತಿಳಿಸಿದರು.

ಹೆದ್ದಾರಿ ಬದಿಯ ಉದ್ಯಾನಕ್ಕೆ ರೂಪ ಕೊಡಿ

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಉದ್ಯಾನಕ್ಕೆ ಸುಂದರ ರೂಪ ನೀಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಹೆದ್ದಾರಿಯಲ್ಲಿ ಓಡಾಡುವ ಬೆಂಗಳೂರು, ಮೈಸೂರು ಜನರು ಮಂಡ್ಯದ ಉದ್ಯಾನದಲ್ಲಿ ಕೆಲ ಹೊತ್ತು ಕಳೆಯುವ ಸುಂದರ ರೂಪವನ್ನು ಉದ್ಯಾನಕ್ಕೆ ನೀಡಬಹುದು. ಗಲ್ಲಿ ಮಾರಾಟ ಮಾಡಿದ ಹಣದಲ್ಲಿ ಜನಾಕರ್ಷಕ ರೀತಿಯಲ್ಲಿ ಉದ್ಯಾನ ಅಭಿವೃದ್ಧಿಗೊಳಿಸಬಹುದು ಎಂದು ವರದಿ ಹೇಳಿದೆ.

ಉದ್ಯಾನಕ್ಕೆ ಜನರು ಬರಲು ಮೊದಲು ಅವರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಉದ್ಯಾನದಲ್ಲಿ ಪಾರ್ಕಿಂಗ್‌ ಕಟ್ಟಡ ನಿರ್ಮಿಸಲು ಕಾನೂನು ತಿದ್ದುಪಡಿ ಅಗತ್ಯವಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

***

ಸರ್ಕಾರ ಗಲ್ಲಿ ಮಾರಾಟಕ್ಕೆ ಅನುಮತಿ ನೀಡಿದರೆ ನಗರದ ಅಭಿವೃದ್ಧಿಗೆ ಆದಾಯದ ಹಣ ಬಳಸಬಹುದು. ಅವಕಾಶ ಸಿಕ್ಕರೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಾಗುವುದು

- ಎಸ್‌.ಲೋಕೇಶ್‌, ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT