ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ಸಭೆ ನಡೆಸಿ ಹೊರಟಿದ್ದರು...

ನಾಗಮಂಗಲ ಬಳಿ ಅಪಘಾತ– 8ಕ್ಕೇರಿದ ಸಾವಿನ ಸಂಖ್ಯೆ, ಎಲ್ಲರೂ ಸಹಕಾರ ಬ್ಯಾಂಕ್‌ ನಿರ್ದೇಶಕರು
Last Updated 23 ನವೆಂಬರ್ 2019, 10:46 IST
ಅಕ್ಷರ ಗಾತ್ರ

ಮಂಡ್ಯ: ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಸಮೀಪದ ರಾಮದೇವರಹಳ್ಳಿ ಗೇಟ್‌ ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ. ಇಬ್ಬರು ಮಹಿಳೆಯರು ಸೇರಿದಂತೆ ಮೃತಪಟ್ಟವರೆಲ್ಲರೂ ಅಲ್‌–ಫಲಾ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರು.

ಟೆಂಪೊ ಹಾಗೂ ಟಾಟಾ ಸುಮೊ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಅಲ್‌– ಫಲಾ ಸಂಘದ ಅಧ್ಯಕ್ಷ ಅಕ್ಬರ್ ನಸೀಂ ಪಾಷಾ (40), ನಿರ್ದೇಶಕರಾದ ಬಾಕರ್ ಷರೀಫ್ (50), ತಾಹೀರ್ ಸುಲ್ತಾನ್ ಷರೀಫ್ (30), ನೌಷದ್ ಮಕ್ಬೂಲ್ ಪಾಷಾ (45), ಹಸೀನ್ ತಾಜ್ ಖಲೀಂ (50), ಮೆಹಬೂಬ್ ದಸ್ತರ್ ಖಾನ್ (50), ಮಕ್ಸೂದ್ ಮಹಮ್ಮದ್ (25), ಶಾಹೇದಾ ಖಾನಂ (40) ಮೃತಪಟ್ಟವರು. ಮಕ್ಸೂದ್ ಮಹಮ್ಮದ್ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದರು.

2004ರಲ್ಲಿ ಆರಂಭಗೊಂಡಿದ್ದ ಸಹಕಾರ ಸಂಘವು, ತಾಲ್ಲೂಕಿನ ಮುಸ್ಲಿಂ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುತ್ತಿತ್ತು. ಪ್ರತಿ ವರ್ಷ ₹4 ಕೋಟಿ ವಹಿವಾಟು ನಡೆಸುತ್ತಿತ್ತು. ಇದು 3ನೇ ಆಡಳಿತ ಮಂಡಳಿಯಾಗಿದ್ದು, ಹೊಸ ಆಡಳಿತ ಮಂಡಳಿ ರಚನೆಗೆ ಡಿ.8ಕ್ಕೆ ಚುನಾವಣೆ ಘೋಷಣೆಯಾಗಿತ್ತು. ಗುರು ವಾರ ಆಡಳಿತ ಮಂಡಳಿಯ ಕೊನೆಯ ಸಭೆ ನಡೆಸಿ ನಿರ್ದೇಶಕರು ರಾತ್ರಿ 9.50ರ ಸಮಯದಲ್ಲಿ ಕುಣಿಗಲ್‌ ಸಮೀಪದ ತಾಜ್‌ ಹೋಟೆಲ್‌ಗೆ ತೆರಳುತ್ತಿದ್ದರು.

ಟೆಂಪೋದಲ್ಲಿದ್ದ ಜವರಾಯ: ಆಡಳಿತ ಮಂಡಳಿಯಲ್ಲಿ 11 ಮಂದಿ ನಿರ್ದೇಶಕರಿದ್ದು, ಗುರುವಾರ ನಡೆದ ಸಭೆಗೆ ಒಬ್ಬರು ಗೈರಾಗಿದ್ದರು. ಒಟ್ಟು 10 ಮಂದಿ ಟಾಟಾ ಸುಮೊದಲ್ಲಿ ಚಾಮರಾಜನಗರ– ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕುಣಿಗಲ್‌ ಕಡೆಗೆ ಹೊರಟಿದ್ದರು. ಬ್ಯಾಂಕ್‌ ಅಧ್ಯಕ್ಷ ಅಕ್ಬರ್‌ ಅವರೇ ವಾಹನ ಚಾಲನೆ ಮಾಡುತ್ತಿದ್ದರು. ಪಟ್ಟಣದಿಂದ 8 ಕಿ.ಮೀ ದೂರ ಸಾಗಿದ್ದರು. ಮುಂದೆ ತೆರಳುತ್ತಿದ್ದ ಆಟೊವೊಂದನ್ನು ಹಿಂದಿಕ್ಕಲು ಹೋದಾಗ ಎದುರಿನಿಂದ ಬರುತ್ತಿದ್ದ ಟೆಂಪೊ ಡಿಕ್ಕಿ ಹೊಡೆದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬೆಳ್ಳೂರು ಕ್ರಾಸ್‌ನ ಆದಿಚುಂಚ ನಗಿರಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿಯೇ ಮೃತಪಟ್ಟರು. ಹೆಚ್ಚಿನ ಚಿಕಿತ್ಸೆ ಗಾಗಿ, ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರು ಶುಕ್ರವಾರ ಬೆಳಿಗ್ಗೆ ಅಸುನೀಗಿದರು.

ಪ್ರಶಸ್ತಿ ಪುರಸ್ಕೃತ ಸಂಘ: ‘ಫಲಾ ಎಂದರೆ ಅಭಿವೃದ್ಧಿ. ಬಡವರ ಅಭಿವೃದ್ಧಿಯ ದೃಷ್ಟಿಯಿಂದ ಅಲ್‌–ಫಲಾ ಎಂದು ಸಂಘಕ್ಕೆ ಹೆಸರಿಡಲಾಗಿತ್ತು. ಬಡ ವ್ಯಾಪಾರಿಗಳಿಗೆ ಸಾಲ ನೀಡಲು ಯಾವುದೇ ದಾಖಲಾತಿ ಕೇಳುತ್ತಿರಲಿಲ್ಲ. ಕೇವಲ ಒಬ್ಬರು ಜಾಮೀನು ನೀಡಿದರೆ ಐದು ನಿಮಿಷದಲ್ಲಿ ₹ 25 ಸಾವಿರ ಸಾಲ ನೀಡಲಾಗುತ್ತಿತ್ತು. ಪ್ರತಿನಿತ್ಯ ₹100 ಕಟ್ಟಿ ಸಾಲ ಮರುಪಾವತಿ ಮಾಡುತ್ತಿದ್ದರು. ಮೀಟರ್‌ ಬಡ್ಡಿ ದಂಧೆಕೋರರಿಂದ ಬಡವರನ್ನು ರಕ್ಷಣೆ ಮಾಡಿತ್ತು. ಬಡವರ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿದ್ದ ಸಂಘ 2006ರಲ್ಲಿ ಜಿಲ್ಲೆಯ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪಡೆದಿತ್ತು. ಬ್ಯಾಂಕ್‌ನ ಪದಾಧಿಕಾರಿಗಳಿಗೆ ಈ ರೀತಿಯ ಸಾವು ಬರಬಾರದಿತ್ತು’ ಎಂದು ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ, ಸಾಹಿತಿ ಕಲೀಂ ಉಲ್ಲಾ ನೋವು ವ್ಯಕ್ತಪಡಿಸಿದರು.

ಮುರಿದಿದ್ದ ಟೆಂಪೊ ಆ್ಯಕ್ಸಲ್‌ ಬ್ಲೇಡ್‌

ಟೆಂಪೊ ನಾಗಮಂಗಲದ ಸ್ಟಾರ್‌ ಕಂಪನಿಗೆ ಸೇರಿದೆ. ಪಟ್ಟಣದ ಕಡೆಗೆ ಬರುವಾಗ ಟೆಂಪೊ ಆ್ಯಕ್ಸಲ್‌ ಬ್ಲೇಡ್‌ ಮುರಿದಿದ್ದವು. ಆದರೂ ಚಾಲಕ ಮಕ್ಬುಲ್‌ ಅಹಮದ್‌ ಗಾಡಿ ಓಡಿಸುತ್ತಿದ್ದ. ಆತನ ಕಾಲು ಮುರಿದಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹಗಳ ಮುಂದೆ ಶುಕ್ರವಾರದ ನಮಾಜ್‌

ಘಟನೆಯಿಂದಾಗಿ ನಾಗಮಂಗಲ ಪಟ್ಟಣದಲ್ಲಿ ಮೌನ ಮನೆಮಾಡಿತ್ತು. ಮುಸ್ಲಿಮರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ್ದರು. ವ್ಯಾಪಾರಿಗಳು, ಗ್ರಾಹಕರು ಇಲ್ಲದೆ ಶುಕ್ರವಾರದ ಸಂತೆ ಬಿಕೋ ಎನ್ನುತ್ತಿತ್ತು.

ಮೈಸೂರು ರಸ್ತೆಯ ಮೈದಾನದಲ್ಲಿ ಮೃತದೇಹಗಳನ್ನು ಇಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕೆಲವರು ಮಸೀದಿಗೆ ತೆರಳದೇ ಶುಕ್ರವಾರದ ಪ್ರಾರ್ಥನೆಯನ್ನು ಮೃತದೇಹಗಳ ಮುಂದೆಯೇ ಸಲ್ಲಿಸಿದರು.ಎಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು. ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.

ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ನಂತರ ಕುಟುಂಬದ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT