ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹೊಡೆದು ಕೊಲ್ಲಿ ಎನ್ನುವವರು ನಮ್ಮ ನಾಯಕರೆ?: ರಹಮತ್‌ ತರೀಕೆರೆ

Published 11 ಫೆಬ್ರುವರಿ 2024, 12:40 IST
Last Updated 11 ಫೆಬ್ರುವರಿ 2024, 12:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಗುಂಡು ಹೊಡೆದು ಕೊಲ್ಲಿ, ಕೈ ಕಾಲು ಕತ್ತರಿಸಿ, ನಾಲಿಗೆ ಸೀಳಿ, ಕತ್ತು ಕಡಿಯಿರಿ ಎನ್ನುವವರನ್ನು ನಮ್ಮ ನಾಯಕರು ಎಂದು ಒಪ್ಪಿಕೊಳ್ಳಬೇಕೆ’ ಎಂದು ಹಿರಿಯ ಸಾಹಿತಿ ರಹಮತ್‌ ತರೀಕೆರೆ ಪ್ರಶ್ನಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಗಾಂಧೀ ಪ್ರಣೀತ ವಿಚಾರಧಾರೆಗಳ ಸರ್ವೋದಯ ಮೇಳದಲ್ಲಿ ‘ಗಾಂಧಿ ಮತ್ತು ಬಹುತ್ವದ ಪರಿಕಲ್ಪನೆ’ ಕುರಿತು ಅವರು ಮಾತನಾಡಿದರು.

‘ಸಂವಿಧಾನದ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದವರು ರಾಜಕೀಯ ಲಾಭದ ಕಾರಣಗಳಿಗಾಗಿ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಹುನ್ನಾರ ನಡೆಸುತ್ತಿದ್ದಾರೆ. ಬಹುತ್ವ ಸಂಸ್ಕೃತಿಯನ್ನು ಒಪ್ಪಿ ಮಾತನಾಡಿದ ಗಾಂಧೀ, ರಾಗೋರ್‌, ಕುವೆಂಪು ತರದವರು ಏಕ ಸಂಸ್ಕೃತಿ ಪ್ರಿಯರಿಗೆ ಅಪಥ್ಯವಾಗಿದ್ದಾರೆ. ವಿರೋಧ ಪಕ್ಷಗಳೇ ಇರಬಾರದು ಎಂಬ ಚಿಂತನೆಯುಳ್ಳವರು ಮೇಲುಗೈ ಸಾಧಿಸತ್ತಿದ್ದಾರೆ. ಏಕ ಸಂಸ್ಕೃತಿಯನ್ನು ಹೇರುವ ಮಾತುಗಳಾಡುವವರಿಗೆ ಪ್ರತಿರೋಧ ಒಡ್ಡದಿದ್ದರೆ ಬಹು ಸಂಸ್ಕೃತಿ ನಾಶವಾಗಲಿದೆ. ವೈಚಾರಿಕ ಲೇಖಕ ಎಂ.ಎಂ. ಕಲಬುರಗಿ ಹತ್ಯೆಯಂತಹ ಪ್ರಕರಣಗಳು ಮರುಕಳಿಸುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಲವು ಧರ್ಮಗಳು ಇದ್ದರೂ ವಾಸ್ತವವಾಗಿ ಇರುವುದು ಮನುಷ್ಯ ಧರ್ಮ ಒಂದೇ ಎಂಬುದನ್ನು ಜನರಿಗೆ ಅರ್ಥ ಮಾಡಿಸಬೇಕು. ಕೇಡಿನ ಶಕ್ತಿಗಳು ಎಲ್ಲ ಧರ್ಮಗಳಲ್ಲೂ ಇದ್ದು, ಅಂತಹ ಶಕ್ತಿಗಳ ದನಿಯನ್ನು ಅಡಗಿಸಬೇಕು. ಈಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಹಳ್ಳಿಗಾಡಿನ ಜನರಲ್ಲಿಯೂ ದ್ವೇಷ ಭಾವನೆ ಬಿತ್ತುವ ಕೆಲಸ ನಡೆಯುತ್ತಿದೆ. ಧರ್ಮದಲ್ಲಿ ರಾಜಕಾರಣ ಬೆರೆಸಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಬಹುತ್ವವನ್ನು ಒಪ್ಪುವವರು ಇಂತಹ ಪ್ರಕರಣಗಳನ್ನು ಗಟ್ಟಿ ದನಿಯಲ್ಲಿ ಖಂಡಿಸಬೇಕು’ ಎಂದರು.

'ಗಡ್ಡದ ಪ್ರಶ್ನೆ ಏಕೆ’

ನಿರ್ದಿಷ್ಟ ಧರ್ಮದವರು ಎಂದು ಗುರುತಿಸಿಕೊಳ್ಳಲು ಗಡ್ಡ ಬಿಡುತ್ತಾರೆ, ಬುರ್ಖಾ ಧರಿಸುತ್ತಾರೆ ಎಂಬ ಮಾತು ಸರಿಯಲ್ಲ. ಮತ್ತೊಂದು ಧರ್ಮದವರು ವಿಭೂತಿ ಧರಿಸುವುದು, ಕುಂಕುಮ ಹಚ್ಚುವುದನ್ನು ಆಕ್ಷೇಪಿಸಲೂಬಾರದು. ಧಾರ್ಮಿಕ ಚಿಹ್ನೆ ದೊಡ್ಡ ಸಂಗತಿಯಲ್ಲ; ಆದರೆ ಅದು ಆತಂಕ ಹುಟ್ಟಿಸುವಂತೆ ಇರಬಾರದು. ವಿಭಿನ್ನ ಸಂಸ್ಕೃತಿಯ ಜನರು ಪರಸ್ಪರ ಗೌರವದಿಂದ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂಬುದು ಗಾಂಧೀಜಿ ಅವರ ಆಶಯವಾಗಿತ್ತು ಎಂದು ಡಾ.ಬಿ.ಕೆ. ರಾಮು ಅವರ ಪ್ರಶ್ನೆಗೆ ರಹಮತ್‌ ತರೀಕೆರೆ ಪ್ರತಿಕ್ರಿಯಿಸಿದರು.

ಪ್ರಜಾಪ್ರಭುತ್ವ ಅಂದರೆ ಕೇವಲ ವೋಟ್‌ ಹಾಕುವುದಲ್ಲ. ಅದು ವಿವೇಚನಾಯುತ ಅಧಿಕಾರ. ಪ್ರಶ್ನೆ ಮಾಡದ ಮತ್ತು ವಿಸ್ಮಯ ಹುಟ್ಟಿಸದ ಸಮಾಜ ಮತ್ತು ಜನ ನಾಶವಾಗುವ ಅಪಾಯವಿದೆ. ಇಂದಿನ ದೃಶ್ಯ ಮಾಧ್ಯಮಗಳು ಪ್ರಶ್ನೆ ಮಾಡುವ ಪ್ರವೃತ್ತಿಯನ್ನೇ ಕೊಲ್ಲುತ್ತಿವೆ. ಗಾಂಧಿ ಅವರು ನಂಬಿದ್ದ ರಾಮ ಪ್ರಜಾಪ್ರಭುತ್ವವಾದಿ ರಾಮ ಎಂಬ ಸತ್ಯವನ್ನು ಮುಚ್ಚಿಡುತ್ತಿವೆ. ರಾಜಕೀಯ ವ್ಯವಸ್ಥೆಯಲ್ಲಿ ಕೆಲವರಷ್ಟೇ ಪಾರಮ್ಯ ಮೆರೆಯುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೊಳ್ಳು ಮಾಡಲು ಹೊರಟಿದ್ದಾರೆ ಎಂದು ದೂರಿದರು.

‘ಗಾಂಧೀ ಪ್ರಶ್ನಾತೀತರಲ್ಲ’

ಗಾಂಧೀ ಪ್ರಶ್ನಾತೀತರಲ್ಲ. ಅವರೂ ಸಾಕಷ್ಟು ತಪ್ಪು ಮಾಡಿದ್ದಾರೆ. ಆದರೆ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಭಗತ್‌ಸಿಂಗ್‌ ಅವರಿಗೆ ಗಲ್ಲು ಶಿಕ್ಷೆಯಾದಾಗ, ತಮ್ಮ ಬೆಂಬಲಿಗರನ್ನು ಸುಭಾಷ್‌ಚಂದ್ರ ಬೋಸ್‌ ಸೋಲಿಸಿದ ಸಂದರ್ಭಗಳಲ್ಲಿ ಅಸಹನೆ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಕಸ್ತೂರ ಬಾ ಅವರ ಜತೆ ಗಾಂಧಿ ನಡೆದುಕೊಂಡ ರೀತಿ ಆಕ್ಷೇಪಾರ್ಹವಾಗಿತ್ತು ಎಂದು ವಕೀಲ ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದರು.

ಏಕರೂಪ ನಾಗರಿಕ ಸಂಹಿತೆ ನಮ್ಮ ದೇಶಕ್ಕೆ ಒಪ್ಪಿತವಲ್ಲ. ವೈವಿಧ್ಯತೆ ಇರುವ ದೇಶದಲ್ಲಿ ಎಲ್ಲರೂ ಒಂದೇ ರೀತಿ ಇರಬೇಕು ಎನ್ನುವ ಬಲವಂತ ಸರಿಯಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಹೇರುವುದನ್ನು ವಿರೋಧಿಸಬೇಕು. ಸಂವಿಧಾನದ ಪೀಠಿಕೆಯಲ್ಲಿರುವ ‘ನಾವು’ ಎಂಬ ಶಬ್ದ ಬಹುತ್ವವನ್ನು ಬಿಂಬಿಸುತ್ತದೆಯೇ ಹೊರತು ಏಕರೂಪತೆಯನ್ನಲ್ಲ ಎಂದು ಸುಪ್ರೀತ್‌ಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿದರು.

ಮೇಳದ ಸಂಯೋಜಕ ಸಂಚಾಲಕ ಡಾ.ಬಿ. ಸುಜಯಕುಮಾರ್‌ ಪ್ರಸ್ತಾವಿಕ ಮಾತುಗಳಾಡಿದರು. ಪ್ರೊ.ಪಿ.ವಿ. ನಂಜರಾಜ ಅರಸ್‌, ಪ್ರೊ.ಸಿ. ಮಹದೇವ, ಡಾ.ಬೋರೇಗೌಡ ಚಿಕ್ಕಮರಳಿ, ಅರಳಕುಪ್ಪೆ ಸಿದ್ದೇಗೌಡ, ಜೆ.ಬಿ. ಮಂಜುನಾಥ್‌, ವಕೀಲ ಎಸ್‌.ಆರ್‌. ಸಿದ್ದೇಶ್‌ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಗಾಂಧಿ ಅನುಯಾಯಿಗಳಾದ ಕಾಳಚನ್ನೇಗೌಡ, ಪ್ರೊ.ಎಂ.ಜಿ. ಬಸವರಾಜು, ಸಾಹಿತಿ ತೈಲೂರು ವೆಂಕಟಕೃಷ್ಣ, ಕ್ಯಾತನಹಳ್ಳಿ ಚಂದ್ರಣ್ಣ, ಮೈಸೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಎಸ್‌. ಲಿಂಗಣ್ಣ, ಮಾಜಿ ಸದಸ್ಯ ಎಚ್‌. ಮಂಜುನಾಥ್‌, ಎಸ್‌.ಎಂ. ಶಿವಕುಮಾರ್‌, ಪ್ರೊ.ಇಲ್ಯಾಸ್‌ ಅಹಮದ್‌ಖಾನ್‌, ಅಬ್ದುಲ್ಲಾ ಬೇಗ್‌, ಎಚ್‌.ಆರ್‌. ಧನ್ಯಕುಮಾರ್‌, ಕೆ.ಪಿ. ಗುಣಶೇಖರ್‌, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಡಾ.ಕುಮಾರ್‌, ಕೆ.ಎಸ್‌. ಜಯಶಂಕರ್‌, ಡಾ.ಆರ್‌. ರಾಘವೇಂದ್ರ ಇದ್ದರು. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಹಾಸನ ಇತರ ಕಡೆಗಳಿಂದಲೂ ಗಾಂಧಿ ಅನುಯಾಯಿಗಳು ಆಗಮಿಸಿದ್ದರು.

ಸರ್ವೋದಯ ಮೇಳದಲ್ಲಿ ನಾಳೆ

ಫೆ.12ರಂದು ಬೆಳಿಗ್ಗೆ 10 ಗಂಟೆಗೆ ಆಧ್ಯಾತ್ಮಿಕ ಚಿಂತಕ ಶಂಕರ್‌ ದೇವನೂರು ಅವರು ‘ಆಧುನಿಕ ಸಮಾಜಕ್ಕೆ ಶರಣರ ಸಂದೇಶಗಳು’ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮುಖ್ಯ ಪ್ರಾರ್ಥನಾ ಸಭೆ, ಆಶ್ರಮ ಪ್ರಾರ್ಥನೆ, ಗಾಂಧಿ ಸಾಹಿತ್ಯ ಪಠನ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಈ ಬಾರಿಯ ಮೇಳದ ಆಚಾರ್ಯರಾದ ತಗಡೂರು ಸತ್ಯನಾರಾಯಣ ಅಧ್ಯಕ್ಷರ ನುಡಿಗಳಾಡಲಿದ್ದಾರೆ.

ಸರ್ವೋದಯ ಮೇಳದಲ್ಲಿ ಭಾಗವಹಿಸಿದ್ದ ಗಾಂಧೀ ಅನುಯಾಯಿಗಳು
ಸರ್ವೋದಯ ಮೇಳದಲ್ಲಿ ಭಾಗವಹಿಸಿದ್ದ ಗಾಂಧೀ ಅನುಯಾಯಿಗಳು
ಮೇಳದಲ್ಲಿ ಸಂಸ್ಕೃತಿ ಚಿಂತಕ ಅರಳಕುಪ್ಪೆ ಸಿದ್ದೇಗೌಡ ಬಹುತ್ವ ಸಂಸ್ಕೃತಿಯ ಸಾಧ್ಯಾಸಾಧ್ಯತೆ ಕುರಿತು ಪ್ರಶ್ನಿಸಿದರು
ಮೇಳದಲ್ಲಿ ಸಂಸ್ಕೃತಿ ಚಿಂತಕ ಅರಳಕುಪ್ಪೆ ಸಿದ್ದೇಗೌಡ ಬಹುತ್ವ ಸಂಸ್ಕೃತಿಯ ಸಾಧ್ಯಾಸಾಧ್ಯತೆ ಕುರಿತು ಪ್ರಶ್ನಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT