ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆ

ಅರ್ಜುನಪುರಿ ಅಪ್ಪಾಜಿಗೌಡ, ಸುಶೀಲಾ ಪಾಶಶ್ರೀ ಪ್ರಶಸ್ತಿ ಪ್ರದಾನ; ಶಾಲಿನಿ ಮೂರ್ತಿ ಅಭಿಮತ
Last Updated 25 ಸೆಪ್ಟೆಂಬರ್ 2021, 13:40 IST
ಅಕ್ಷರ ಗಾತ್ರ

ಮಂಡ್ಯ: ‘ಶಿಕ್ಷಣ, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಮಂಡ್ಯ ಜಿಲ್ಲೆಯು ತನ್ನದೇ ಆದ ಕೊಡುಗೆ ನೀಡಿ ಅದರ ಪೋಷಣೆ ಮಾಡುತ್ತಿದೆ’ ಎಂದು ಎರ್ಕಾಡಿ ಸಿಸ್ಟಮ್ಸ್‌ನ ನಿರ್ದೇಶಕಿ ಶಾಲಿನಿಮೂರ್ತಿ ಹೇಳಿದರು.

ನಗರದ ಗಾಂಧಿಭವನದಲ್ಲಿ ಗಾಂಧಿ ಸ್ಮಾರಕ ಟ್ರಸ್ಟ್, ಸುಶೀಲ ಡಾ.ಪಾ.ಶ.ಶ್ರೀನಿವಾಸ ಅಭಿಮಾನಿ ಬಳಗ, ಅಖಿಲ ಕರ್ನಾಟಕ ಕರಾವಳಿ ಸಾಂಸ್ಕತಿಕ ಒಕ್ಕೂಟ, ಮಧುರೈ ಕರ್ನಾಟಕ ಸಂಘ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ.ಅರ್ಜುನಪುರಿ ಅಪ್ಪಾಜಿಗೌಡ, ಸುಶೀಲ ಡಾ.ಪಾ.ಶ.ಶ್ರೀನಿವಾಸ ದತ್ತಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಕ್ಕರೆ ನಾಡು ಎಂಬ ಕೀರ್ತಿಗೆ ಈ ಜಿಲ್ಲೆಯು ಹೆಸರುವಾಸಿಯಾಗಿದೆ. ಕಲೆ, ಶಿಕ್ಷಣ, ಕ್ರೀಡಾ, ಸಾಹಿತ್ಯ ಕ್ಷೇತ್ರದ ಪ್ರತಿಭಾನ್ವಿತರಿಗೆ ಆಶ್ರಯ ನೀಡಿದ ಹೆಮ್ಮೆಯ ಜಿಲ್ಲೆಯೂ ಹೌದು. ಸಕ್ಕರೆ ನಾಡಾದ ಮಂಡ್ಯದ ಸಾಹಿತ್ಯ ಪ್ರೀತಿ ಅನನ್ಯವಾದುದು. ಸಾಂಸ್ಕೃತಿಕ ಹೊಣೆಗಾರಿಕೆಯ ಜವಾಬ್ದಾರಿ ಹೊತ್ತುಕೊಂಡ ಹಿರಿಮೆಯೂ ಜಿಲ್ಲೆಗಿದೆ’ ಎಂದರು.

‘ಮಂಡ್ಯ ಜಿಲ್ಲೆಯು ಅನೇಕ ಪ್ರತಿಭಾವಂತರಿಗೆ ಆಶ್ರಯ ನೀಡಿದೆ. ಅದರಲ್ಲಿ ಪಾ.ಶ.ಶ್ರೀನಿವಾಸ ಒಬ್ಬರು. 45 ವರ್ಷ ತಮಿಳುನಾಡಿನಲ್ಲಿ ನೆಲೆಸಿದ್ದ ಪಾ.ಶ.ಶ್ರೀ ಅವರು ಅಲ್ಲಿಯ ಸಂಸ್ಕೃತಿ, ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸುವರ್ಣ ಸೇತುವೆಯಂತಿದ್ದರು. ಎರಡೂ ಭಾಷೆಗಳ ನಿಘಂಟು ತಜ್ಞರಾಗಿ ಹೆಸರುವಾಸಿಯಾಗಿದ್ದರು’ ಎಂದರು.

‘ಅಂದು ಮುದ್ದಣ– ಮನೋರಮೆ ಅವರಂತೆ ಸುಶೀಲಾ ಹಾಗೂ ಪಾಶಶ್ರೀ ಅವರದು ಮರೆಯಲಾಗದ ಅನುಬಂಧ. ಇಂಥವರ ಹೆಸರಿನಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನೀಡುತ್ತಿರುವುದು ಶ್ರೇಷ್ಠವಾದುದು. ಪಾಶಶ್ರೀ ಅವರು ತಮಿಳು ಕವಿ ತಿರುವಳ್ಳುವರ್ ಕೃತಿಯನ್ನು 'ತಿರುಕ್ಕುರುಳ್' ಆಗಿ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಜೊತೆಗೆ 40ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮಂಡ್ಯದ ಮಣ್ಣಿನ ವಾಸನೆಯನ್ನು ತಮಿಳುನಾಡಿನಲ್ಲಿ ಹರಡಿದ ಕೀರ್ತಿ ಅವರಿಗೆ ಸಲ್ಲಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ ಮಾತನಾಡಿ ‘ಸಾಹಿತ್ಯ-ಸಂಸ್ಕೃತಿ ಸಮಾಜಕ್ಕೆ ದಾರಿತೋರುತ್ತದೆ. ನಾವು ಸಮಾಜದಲ್ಲಿ ಆದರ್ಶವಾಗಿ ಬಾಳಲು ಸಾಧಕರ ಜೀವನ ದಾರಿದೀಪ ಮಾಡಿಕೊಂಡು ಸಾಗಬೇಕು. ವ್ಯಕ್ತಿಗಿಂತ ಬದುಕಿನಲ್ಲಿ ಹಿರಿಯರನ್ನು ಗೌರವಿಸಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಮನೋಭಾ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಾ.ಪಾ.ಶ.ಶ್ರೀನಿವಾಸ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಮಾತನಾಡಿ ‘ಈ ಪ್ರಶಸ್ತಿಯು ನನಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರತಿಯೊಬ್ಬರ ಈ ಮಣ್ಣಿನ ಋಣ ತೀರಿಸಬೇಕು. ಮಂಡ್ಯ ಜಿಲ್ಲೆಯ ಇತಿಹಾಸವು ದೇಶದಲ್ಲಿ ಹೆಸರುವಾಸಿಯಾಗಿದೆ. ಜೊತೆಗೆ ನಮ್ಮ ನಾಡಿಗೆ ಪರಂಪರೆ ಪ್ರಿಯವಾದುದು. ಪತ್ರಕರ್ತರು ಹಣದ ಹಿಂದೆ ಹೋಗಬಾರದು ಎಂದು ಡಿವಿಜಿ ಅವರು ಅಂದೇ ಹೇಳಿದ್ದರು, ಸಮಾಜದ ಋಣ, ದೇವರ ಋಣ ಹಾಗೂ ಪಿತೃ ಋಣ ತೀರಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದರು.

ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಅಧ್ಯಕ್ಷ ಡಾ.ಶ್ರೀನಿವಾಸ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ.ಮೋಹನ ಕುಂಟಾರ್ ಕಾರ್ಯದರ್ಶಿ ಡಾ.ಪ್ರದೀಪ ಕುಮಾರ್ ಹೆಬ್ರಿ, ಸಾಹಿತಿ ಡಾ.ಶ್ರೀನಿವಾಸ ಶೆಟ್ಟಿ, ಸಾಹಿತಿ ಡಾ.ಜಗನ್ನಾಥಶೆಟ್ಟಿ ಇದ್ದರು.

ಪರಿಸರ ಪ್ರೀತಿ, ಕನಸುಗಳ ಚಿಗುರು

ಡಾ.ಅರ್ಜುನಪುರಿ ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿಯನ್ನು ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ ‘ಪರಿಸರದ ಮೇಲಿನ ಪ್ರೀತಿಯನ್ನು ಪೂರ್ವಿಕರಿಂದಲೇ ತಿಳಿಯಬೇಕು. ಪರಿಸರ ಪ್ರೀತಿ ಕನಸುಗಳ ಚಿಗುರಿಗೆ ಕಾರಣವಾಗುತ್ತದೆ. ಪರಿಸರ ಪ್ರಜ್ಞೆಯನ್ನೂ ಎಲ್ಲರೂ ಬೆಳೆಸಿಕೊಳ್ಳಬೇಕು. ಬಾಲ್ಯದ ನೆನಪು, ಅಜ್ಜಿ ಮನೆಯ ಸಂಸ್ಕರಗಳು ಬದುಕು ಕಲಿಸುತ್ತವೆ’ ಎಂದರು.

‘ಎಲ್ಲವೂ ಕಾನೂನುಗಳಿಂದಲೇ ನಡೆಯುವುದಿಲ್ಲ, ಜನರಲ್ಲಿ ಪ್ರಜ್ಞೆ ಬೆಳೆಯಬೇಕಾದದು ಅತ್ಯಂತ ಅವಶ್ಯಕ. ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆಯನ್ನು ಬೆಳೆಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಅಭಾವ ಎದುರಿಸುವ ಅಪಾಯ ನಿರ್ಮಾಣವಾಗಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT